Advertisement

ರಸ್ತೆಯೊಳು ಗುಂಡಿಯೋ, ಗುಂಡಿಯೇ ರಸ್ತೆಯೋ?

12:52 PM Oct 12, 2017 | |

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳಿಂದ ಅಮಾಯಕರು ಪ್ರಾಣ ಕಳೆದು ಕೊಳ್ಳುತ್ತಿದ್ದರೂ ರಾಜ್ಯ ಸರ್ಕಾರವಾಗಲಿ,
ಬಿಬಿಎಂಪಿಯಾಗಲಿ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ವೇಳೆ “ರಸ್ತೆಯು ಗುಂಡಿಯೊಳಗಿದೆಯೋ, ಗುಂಡಿಗಳೇ ರಸ್ತೆಯಾಗಿವೆಯೋ’, “ಈ ಸಾವು ನ್ಯಾಯವೇ’ ಮತ್ತು “ಎದ್ದೇಳು ನಿದ್ರಾಮಯ್ಯ’ ಎಂಬ ಘೋಷವಾಕ್ಯಗಳು ಗಮನಸೆಳೇದವು.

Advertisement

ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ್‌ ನೇತೃತ್ವದಲ್ಲಿ ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಸೇರಿದ ನೂರಾರು ಬಿಜೆಪಿ ಕಾರ್ಯ ಕರ್ತರು ಹಾಗೂ ಮುಖಂಡರು, ಪ್ರತಿ ಭಟನೆ ನಡೆಸಿದ್ದಲ್ಲದೆ, ಪಾಲಿಕೆ ಕೇಂದ್ರ ಕಚೇರಿ ಗೇಟ್‌ಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ. ಜಾರ್ಜ್‌ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಮಾಜಿ ಡಿಸಿಎಂ ಆರ್‌.ಅಶೋಕ್‌, “ಬಿಜೆಪಿ ಅವಧಿಯಲ್ಲಿ ಬೆಂಗಳೂರು ಐಟಿ-ಬಿಟಿ ನಗರವಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ. ಜಾರ್ಜ್‌ ನಗರವನ್ನು ಗುಂಡಿಗಳ ನಗರ ವನ್ನಾಗಿ, ಪ್ರವಾಹದ ನಗರವನ್ನಾಗಿ ಮಾಡಿದ್ದು, ನಗರ ಈಗ ಸಾವಿನ ಮನೆ ಯಂತಾಗಿದೆ. ಸಾರ್ವಜನಿಕರು ಸುರಕ್ಷಿತ ವಾಗಿ ಮನೆಗೆ ಹೋಗಲು “ರಸ್ತೆ ಭಾಗ್ಯ ನೀಡಿ’ ಎಂದು ಆಗ್ರಹಿಸಿದರು. 

ಹಣ ಯಾರ ಜೇಬಿಗೆ?: “ಮನೆಯಿಂದ ಹೊರಟವರು ಮರಳಿ ಮನೆಗೆ ಹೋಗುತ್ತೇವೆ ಎಂಬ ನಂಬಿಕೆ ಇಲ್ಲದಂತಹ ಪರಿಸ್ಥಿತಿ
ನಿರ್ಮಾಣವಾಗಿದೆ. ಆದರೆ, ಮುಖ್ಯ ಮಂತ್ರಿಗಳು ಮಾತ್ರ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ರಸ್ತೆಗಳ ಅಭಿವೃದ್ಧಿಗೆ 4 ಸಾವಿರ ಕೋಟಿ ರೂ. ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ನಗರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಆಗಿಲ್ಲ. ಹಾಗಿದ್ದರೆ ಸರ್ಕಾರ ನೀಡಿದ ಹಣ ಯಾರ ಜೇಬಿಗೆ ಹೋಗಿದೆ ಎಂಬುದನ್ನು ತಿಳಿಸಿ.’ ಎಂದು ಒತ್ತಾಯಿಸಿದರು. 

ಸರ್ಕಾರ ಸತ್ತಿದೆ ಎಂದು ಒಪ್ಪಿಕೊಳ್ಳಿ: “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ 10 ನಿಮಿಷ ಸುತ್ತಾಡಿ, ನಗರದಲ್ಲಿನ ರಸ್ತೆಗುಂಡಿಗಳನ್ನು ಕಾಟಾಚಾರಕ್ಕೆ ಎಂಬಂತೆ ಪರಿಶೀಲನೆ ಮಾಡಿದ್ದಾರೆ. ರಸ್ತೆಗುಂಡಿ ಮುಚ್ಚಿ ಜನರಿಗೆ ಅನುಕೂಲ ಮಾಡಿ ಎಂದು ವಿರೋಧ ಪಕ್ಷದವರು ಒತ್ತಾಯಿಸಿದರೆ, ಟೀಕೆ ಮಾಡುವ ಬದಲು ಗುಂಡಿ ಮುಚ್ಚುವ ಕೆಲಸವನ್ನು ಪರಿಶೀಲಿಸಿ ಎನ್ನುತ್ತಾರೆ. ಕಾಂಗ್ರೆಸ್‌ ಸರ್ಕಾರ ಸತ್ತುಹೋಗಿದೆ ಎಂದು ಒಪ್ಪಿಕೊಳ್ಳಿ ಆಗ ನಾವೇ ಗುಂಡಿಗಳನ್ನು ಮುಚ್ಚುತ್ತೇವೆ,’ ಎಂದು ಅಶೋಕ್‌ ಲೇವಡಿ ಮಾಡಿದರು.

Advertisement

ಭದ್ರತೆ ನಡುವೆಯೂ ಪಾಲಿಕೆ ದ್ವಾರಗಳಿಗೆ ಬೀಗ: ಅತ್ಯಂತ ಬಿಗಿ ಪೊಲೀಸ್‌ ಭದ್ರತೆಯ ನಡುವೆಯೂ ಬಿಬಿಎಂಪಿ ಮೇಯರ್‌, ಉಪಮೇಯರ್‌, ಆಯುಕ್ತರ ಕೊಠಡಿಗಳಿರುವ ಕಟ್ಟಡದ ಪ್ರಮುಖ ಗೇಟ್‌ಗೆ ಬೀಗ ಹಾಕಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಕಟ್ಟಡದ ಮುಂದೆ ಕುಳಿತು ಪಾಲಿಕೆಯ ವಿರುದ್ಧ ಧಿಕ್ಕಾರ ಕೂಗಿದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಬಸ್‌ನಲ್ಲಿ ಕರೆದೊಯ್ದರು. 

ಇನ್ನು ಪ್ರತಿಭಟನೆಯಲ್ಲಿ ನಿರತರಾಗಿದ್ದ ಆರ್‌. ಅಶೋಕ್‌, ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್‌, ಶಾಸಕರಾದ ಅರವಿಂದ ಲಿಂಬಾವಳಿ, ಸತೀಶ್‌ ರೆಡ್ಡಿ, ಅಶ್ವತ್ಥ್ ನಾರಾಯಣ, ರವಿಸುಬ್ರಮಣ್ಯ, ಸುರೇಶ್‌ ಕುಮಾರ್‌, ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಸೇರಿದಂತೆ ಬಿಜೆಪಿ ಪ್ರತಿಭಟನಾಕಾರರು ಬಿಬಿಎಂಪಿ ಪೂರ್ವ ದ್ವಾರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ವೇಳೆ ಪೊಲೀಸರು ಅವರನ್ನು ಬಂಧಿಸಿದರು. 

ಪೊಲೀಸರ ಅನುಮತಿ ಪಡೆಯದೆ ಪ್ರತಿಭಟನೆ: ಬಿಜೆಪಿ ಮುಖಂಡರು ಬುಧವಾರ ಬಿಬಿಎಂಪಿ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಲು ಯಾವುದೇ ರೀತಿಯ ಅನುಮತಿ ಪಡೆದಿಲ್ಲ. ಆದರೆ, ಪ್ರತಿಭಟನೆಯ ಸಂದರ್ಭದಲ್ಲಿ ರಕ್ಷಣೆ ನೀಡಲಾಗಿದ್ದು, ಪ್ರತಿಭಟನಾ ಕಾರರನ್ನು ಬಂಧಿಸಿ ಬಿದುಗಡೆ ಮಾಡಲಾಗಿದೆ ಎಂದು ಹಲಸೂರು ಗೇಟು ಪೊಲೀಸ್‌ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. 

ಪಾಲಿಕೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಡಳಿತದಿಂದಾಗಿ ಸಿಂಗಾಪುರವಾಗಬೇಕಿದ್ದ ಬೆಂಗಳೂರನ್ನು ಗುಂಡಿ, ಕಸದ
ನಗರವಾಗಿಸಿದ್ದಾರೆ. ವಿವಿಧ ಸಮಸ್ಯೆಗಳಿಂದ ನಿತ್ಯ ನೋವು ಅನುಭವಿಸುತ್ತಿರುವ ಸಾರ್ವಜನಿಕರ ಶಾಪ ಸರ್ಕಾರಕ್ಕೆ ತಟ್ಟಲಿದೆ.  
ಶೋಭಾ ಕರಂದ್ಲಾಜೆ, ಸಂಸದೆ

ಕಳೆದ ಎರಡು ವರ್ಷಗಳಿಂದ ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಕೆ.ಜೆ.ಜಾರ್ಜ್‌, ಈವರೆಗೆ ಪಾಲಿಕೆಯ 198 ಸದಸ್ಯರೊಂದಿಗೆ ಸಭೆ ನಡೆಸಿ ಸಮಸ್ಯೆ ಏನು ಎಂದು ಕೇಳಲು ಮುಂದಾಗಿಲ್ಲ. 
ಪದ್ಮನಾಭ ರೆಡ್ಡಿ, ಪಾಲಿಕೆಯ ವಿಪಕ್ಷ ನಾಯಕ
 

Advertisement

Udayavani is now on Telegram. Click here to join our channel and stay updated with the latest news.

Next