Advertisement

ತೋಟಗಾರಿಕೆ ಇಲಾಖೆಯಲ್ಲೂ ಹುದ್ದೆಗಳ ಖಾಲಿ ಸಮಸ್ಯೆ..!

02:20 AM Jun 05, 2018 | Karthik A |

ವಿಶೇಷ ವರದಿ – ಪುತ್ತೂರು: ಮಳೆಗಾಲ ಆರಂಭಗೊಂಡಿದೆ. ಕೃಷಿ, ತೋಟಗಾರಿಕೆ ಕೆಲಸಗಳಲ್ಲಿ ರೈತ ವರ್ಗ ತೊಡಗಿಸಿಕೊಂಡಿದೆ. ಆದರೆ ಕೃಷಿ ಇಲಾಖೆಯಂತೆ ತೋಟಗಾರಿಕಾ ಇಲಾಖೆ ಯಲ್ಲೂ ಅಧಿಕಾರಿಗಳು, ಸಿಬಂದಿಯ ಹುದ್ದೆ ಗಳು ಖಾಲಿ ಬಿದ್ದಿರುವುದು ಕೊರತೆಯಾಗಿ ಪರಿಣಮಿಸಿದೆ. ಪುತ್ತೂರು ತೋಟಗಾರಿಕೆ ಇಲಾಖೆಗೆ ಸರಕಾರದಿಂದ 14 ಮಂಜೂರಾದ ಹುದ್ದೆಗಳಿವೆ. ಆದರೆ ನೇಮಕಾತಿ ನಡೆದು ಕರ್ತವ್ಯ ದಲ್ಲಿರುವುದು 5 ಹುದ್ದೆಗಳ ಅಧಿಕಾರಿಗಳು ಮಾತ್ರ. ಅದರಲ್ಲೂ ಕ್ಷೇತ್ರ ಭೇಟಿ ಮಾಡಿ ಪರಿಶೀಲನೆ ನಡೆಸುವ 7 ಅಧಿಕಾರಿ ಹುದ್ದೆಗಳು ಇಲ್ಲಿ ಖಾಲಿ ಇವೆ. ಶೇ. 70ರಷ್ಟು ಹುದ್ದೆಗಳು ಖಾಲಿ ಇರುವುದರಿಂದ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿ ನಿರೀಕ್ಷಿತ ಪ್ರಗತಿಗೆ ತೊಡಕಾಗಿ ಪರಿಣಮಿಸಿದೆ.

Advertisement

ಹುದ್ದೆಗಳು ಭರ್ತಿಯಾಗಿಲ್ಲ
ಹಾಲಿ ಪುತ್ತೂರು ತೋಟಗಾರಿಕೆ ಇಲಾಖೆಯಲ್ಲಿ ಹಿರಿಯ ತೋಟಗಾರಿಕಾ ನಿರ್ದೇಶಕರ ಹುದ್ದೆಯ ಅಧಿಕಾರಿ ಕರ್ತವ್ಯದಲ್ಲಿದ್ದಾರೆ. ಒಂದು ಸಹಾಯಕ ತೋಟಗಾರಿಕಾ ನಿರ್ದೇಶಕರ ಹುದ್ದೆ ಭರ್ತಿಯಾಗಿಲ್ಲ. ಸಹಾಯಕ ತೋಟಗಾರಿಕಾ ಅಧಿಕಾರಿ ಹುದ್ದೆ 4 ಇರಬೇಕಾಗಿದ್ದು, ಪ್ರಸ್ತುತ ಎರಡು ಹುದ್ದೆ ಮಾತ್ರ ಭರ್ತಿಯಾಗಿದೆ. ಪುತ್ತೂರು ಹಾಗೂ ಉಪ್ಪಿನಂಗಡಿ ಹೋಬಳಿಯಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರೆ, ಉಳಿದೆರಡು ಹುದ್ದೆಗಳು ಖಾಲಿಯಾಗಿವೆ. 1 ಕಚೇರಿ ವ್ಯವಸ್ಥಾಪಕರು, 1 ಪ್ರಥಮ ದರ್ಜೆ ಸಿಬಂದಿ ಹುದ್ದೆ ಭರ್ತಿಯಾಗಿದ್ದು, ದ್ವಿತೀಯ ದರ್ಜೆ ಸಿಬಂದಿಯನ್ನು ಬೆಳ್ತಂಗಡಿಗೆ ಡೆಪ್ಯುಟೇಶನ್‌ ಮೇಲೆ ಕರ್ತವ್ಯಕ್ಕೆ ಹಾಕಲಾಗಿದೆ. ಅಟೆಂಡರ್‌, ಜೇನು ಪ್ರದರ್ಶಕರ ಹುದ್ದೆ ಖಾಲಿಯಾಗಿದೆ. ಸಹಾಯಕರ ಹುದ್ದೆ 3 ಇರಬೇಕಾಗಿದ್ದು, ಈ ಎಲ್ಲ ಹುದ್ದೆಗಳು ಖಾಲಿಯಾಗಿವೆ. 2 ಮಂದಿ ಗುತ್ತಿಗೆ ಆಧಾರದಲ್ಲಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.


ಗಿಡಗಳು ಶೀಘ್ರ ಲಭ್ಯ

ತೋಟಗಾರಿಕಾ ಇಲಾಖೆಯ ಮೂಲಕ ರೈತರಿಗೆ ಪೂರೈಕೆ ಮಾಡುವ ನಿಟ್ಟಿನಲ್ಲಿ ತಲಾ 10 ಸಾವಿರ ಕರಿಮೆಣಸು ಗಿಡಗಳು, ಗೇರು ಗಿಡಗಳು ಹಾಗೂ ನುಗ್ಗೆ ಗಿಡಗಳನ್ನು ಪ್ಲಾಂಟೇಶನ್‌ ಮಾಡಲಾಗಿದೆ. ಇನ್ನು ಎರಡು ವಾರಗಳಲ್ಲಿ ರೈತರಿಗೆ ಪೂರೈಕೆ ಮಾಡಲು ಈ ಗಿಡಗಳು ಸಿದ್ಧಗೊಳ್ಳಲಿವೆ. ಅದಕ್ಕೆ ಮೊದಲು ಹಿರಿಯ ಅಧಿಕಾರಿಗಳು ಬಂದು ಗಿಡಗಳ ಗುಣಮಟ್ಟದ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಅನಂತರ ತೋಟಗಾರಿಕೆ ಕೃಷಿಯನ್ನು ಹೊಂದಿರುವ ರೈತರು RTCಯೊಂದಿಗೆ ಅರ್ಜಿ ಸಲ್ಲಿಸಿ ಗಿಡಗಳನ್ನು ಪಡೆದುಕೊಳ್ಳಬಹುದು. ಆರಂಭದಲ್ಲಿ ಹಣ ಪಾವತಿಸಿ, ಅನಂತರ ಅವರ ಖಾತೆಗೆ ಸಬ್ಸಿಡಿ ಹಣವನ್ನು ನೀಡಲಾಗುತ್ತದೆ.

ಸದ್ಯಕ್ಕೆ ತೋಟಗಳು ಸುರಕ್ಷಿತ
ಎಪ್ರಿಲ್‌, ಮೇ ತಿಂಗಳಲ್ಲಿ ಉತ್ತಮವಾಗಿ ಮಳೆ ಸುರಿದಿರುವುದರಿಂದ ಅಡಿಕೆ, ತೆಂಗಿನ ತೋಟಗಳಿಗೆ ನೀರಿನ ಕೊರತೆ ಉಂಟಾಗಿಲ್ಲ ಮತ್ತು ಸಕಾಲದಲ್ಲಿ ಔಷಧಿ ಸಿಂಪಡಣೆಯೂ ಸಾಧ್ಯವಾಗಿರುವುದರಿಂದ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ. ಮುಂಗಾರು ಮಳೆ ಉತ್ತಮವಾಗಿ ಸುರಿದರೆ ಮುಂದೆ ಔಷಧಿ ಸಿಂಪಡಣೆಗೂ ತೊಂದರೆಯಾಗಿ ರೋಗಭಾದೆಯೂ ಕಾಣಿಸಬಹುದು ಎನ್ನುವುದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

ಮಾಹಿತಿ ನೀಡಲಾಗಿದೆ
ಕ್ಷೇತ್ರ ಭೇಟಿಯ ಮೂಲಕ ಕೆಲಸ ಮಾಡುವ ಅಧಿಕಾರಿಗಳ ಹುದ್ದೆ ಖಾಲಿ ಇರುವುದು ತೋಟಗಾರಿಕೆ ಇಲಾಖೆಗೆ ಪ್ರಮುಖ ತೊಂದರೆ ಹೌದು. ಈ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಬೆಳೆಗಾರರಿಗೆ ಸರಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ವಹಿಸಲಾಗುತ್ತಿದೆ. 
– ರೇಖಾ ಬಿ.ಎಸ್‌. ಹಿರಿಯ ತೋಟಗಾರಿಕಾ ನಿರ್ದೇಶಕರು, ಪುತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next