ನವದೆಹಲಿ: ಆಡಳಿತ ಮತ್ತು ಪ್ರತಿಪಕ್ಷಗಳ ಗದ್ದಲಕ್ಕೆ ಸೋಮವಾರವೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಲಾಪ ಬಲಿಯಾಯಿತು. ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಲಂಡನ್‌ನಲ್ಲಿ ಮಾಡಿರುವ ಭಾಷಣಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಎನ್‌ಡಿಎ ಸಂಸದರು ಲೋಕಸಭೆಯಲ್ಲಿ ಪಟ್ಟುಹಿಡಿದರು.
ಇನ್ನೊಂದೆಡೆ, ಆದಾನಿ ಗ್ರೂಪ್‌ನಿಂದ ಷೇರುಗಳ ಮೌಲ್ಯ ತಿರುಚಿವಿಕೆ ಆರೋಪಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯಿಂದ ತನಿಖೆಗೆ ಒತ್ತಾಯಿಸಿ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗಿದ್ದರು. ಮಧ್ಯಾಹ್ನ 2 ಗಂಟೆಗೆ ಕಲಾಪ ಆರಂಭವಾದರೂ ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಮಂಗಳವಾರಕ್ಕೆ ಕಲಾಪ ಮುಂದೂಡಲಾಯಿತು.
ರಾಜ್ಯಸಭೆಯಲ್ಲೂ ನಡೆಯದ ಕಲಾಪ: ಇತ್ತ ರಾಜ್ಯಸಭೆಯಲ್ಲೂ ಆಡಳಿತ ಸದಸ್ಯರು, “ಪ್ರಜಾಪ್ರಭುತ್ವ’ ಹೇಳಿಕೆ ಸಂಬಂಧ ರಾಹುಲ್ ಗಾಂಧಿ ಕ್ಷಮೆಯಾಚನೆಗೆ ಪಟ್ಟು ಹಿಡಿದರು. ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ಪ್ರತಿಪಕ್ಷ ಸದಸ್ಯರು ಆಗ್ರಹಿಸಿದರು. ಈ ಸಂಬಂಧ ಜಂಟಿ ಸದನ ಸಮಿತಿ ರಚಿಸುವಂತೆ ಒತ್ತಾಯಿಸಿದರು. ಎರಡೂ ಕಡೆಯವರು ಘೋಷಣೆಗಳನ್ನು ಕೂಗಿದರು. ಸಭಾಪತಿ ಜಗದೀಪ್ ಧನ್ಕರ್ ಅವರು ಮಧ್ಯಾಹ್ನ 2 ಗಂಟೆವರೆಗೆ ಕಲಾಪವನ್ನು ಮುಂದೂಡಿದರು. ನಂತರವೂ ಕಲಾಪ ನಡೆಯಲಿಲ್ಲ. ಕಲಾಪ ಆರಂಭವಾದ ಮಾ.13ರಿಂದ ಇಲ್ಲಿಯವರೆಗೆ ಒಂದು ದಿನವೂ ಕಲಾಪ ನಡೆಯಲೇ ಇಲ್ಲ. ರಾಹುಲ್ ಗಾಂಧಿ ಮತ್ತು ಅದಾನಿ ಪ್ರಕರಣ ಕಲಾಪವನ್ನು ಆಪೋಶನ ಪಡೆಯಿತು.
ಇಂದು ರಾಹುಲ್ ಮಾತು: “ರಾಹುಲ್ ಗಾಂಧಿ ಅವರು ಮಂಗಳವಾರ ಲೋಕಸಭೆಯಲ್ಲಿ ಮಾತನಾಡಲಿದ್ದಾರೆ. ಇದಕ್ಕಾಗಿ ಸಮಯಾವಕಾಶ ಕೋರಲಾಗಿದೆ,’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ವೇಳೆ ಅಕಾಲಿ ಶಿರೋಮಣಿ ದಳದ ಹರ್‌ಸಿಮ್ರತ್ ಕೌರ್ ಬಾದಲ್ ಪ್ಲಕಾರ್ಡ್ ಪ್ರದರ್ಶಿಸಿದರು. “ಕಲಾಪ ಸುಗಮವಾಗಿ ನಡೆಯಲು ಬಿಡಿ’ ಹಾಗೂ “ಪ್ರಜಾಪ್ರಭುತ್ವ ರಕ್ಷಿಸಿ’ ಎಂದು ಪ್ಲೇಕಾರ್ಡ್‌ನಲ್ಲಿ ಬರೆಯಲಾಗಿತ್ತು. ಇದಕ್ಕೆ ಸ್ಪೀಕರ್ ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ಪ್ಲೇಕಾರ್ಡ್ ಪ್ರದರ್ಶಿಸಲು ಅವಕಾಶ ಇಲ್ಲ ಎಂದು ಹೇಳಿದರು.
ಗದ್ದಲದ ಹಿನ್ನೆಲೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಮಧ್ಯಾಹ್ನ 2 ಗಂಟೆಗೆ ಕಲಾಪ ಮುಂದೂಡಿದರು. “ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ನನ್ನ ಚೇಂಬರ್‌ಗೆ ಬಂದು, ಕುಳಿತು, ವಿಷಯಗಳ ಬಗ್ಗೆ ಚರ್ಚೆಸಿ. ನಾವು ಪರಿಹಾರ ಕಂಡುಕೊಂಡು, ಕಲಾಪ ಸುಗಮವಾಗಿ ನಡೆಯುವಂತೆ ಮಾಡೋಣ. ಅಲ್ಲದೇ ನಿಮ್ಮ ವಿಷಯಗಳನ್ನು ಕೂಡ ಕಲಾಪದಲ್ಲಿ ಚರ್ಚಿಸೋಣ,’ ಎಂದು ಸ್ಪೀಕರ್ ಹೇಳಿದರು.
“ಎಲ್ಲ ಸದಸ್ಯರು ಶಾಂತಿಯಿಂದ ಕುಳಿತುಕೊಳ್ಳಿ, ಪ್ರಶ್ನಾವಧಿ ಮುಂದುವರಿಯಲಿ. ಕಲಾಪ ನಡೆಯುವುದನ್ನು ದೇಶ ವೀಕ್ಷಿಸಬೇಕಿದೆ. ಈ ಸಂಸತ್ ನಿಮಗೆ ಸೇರಿದ್ದು. ಪ್ರತಿಯೊಬ್ಬರಿಗೂ ಮಾತನಾಡಲು ಅವಕಾಶ ಸಿಗುವುದು. ಸದನಲ್ಲಿ ಘೋಷಣೆಗಳನ್ನು ಕೂಗುವುದು ಸರಿಯಲ್ಲ,’ ಎಂದರು.