ವಾಷಿಂಗ್ಟನ್: ಕೊರೊನಾತಂಕ ಹಾಗೂ ವಂಚನೆ ನಡೆಯಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ನವೆಂಬರ್‌ನಲ್ಲಿ ನಡೆಯಬೇಕಾಗಿರುವ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡಬೇಕು ಎಂಬ ಸಲಹೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಲ್ಟಾ ಹೊಡೆದಿದ್ದಾರೆ. ನಾನು ಚುನಾವಣೆ ಮುಂದೂಡಲು ಬಯಸುವುದಿಲ್ಲ ಎಂದಿದ್ದಾರೆ. ತಮ್ಮ ಸಲಹೆಗೆ ತಮ್ಮದೇ ಪಕ್ಷ(ರಿಪಬ್ಲಿಕನ್)ದ ಉನ್ನತ ನಾಯಕರ ಬೆಂಬಲ ಸಿಗದ ಕಾರಣ ಅವರು ಯೂಟರ್ನ್ ಹೊಡೆದಿದ್ದಾರೆ.
ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೇರುವ ಇಚ್ಛೆಯಲ್ಲಿರುವ ಟ್ರಂಪ್‌ಗೆ ಡೆಮಾಕ್ರಾಟ್ ಪ್ರತಿಸ್ಪರ್ಧಿ ಜೋ ಬಿಡೆನ್‌ರಿಂದ ಪ್ರಬಲ ಪೈಪೋಟಿ ಎದುರಾಗಿದೆ. ಅಲ್ಲದೆ, ಪ್ರಮುಖ ಜನಾಭಿಪ್ರಾಯ ಸಂಗ್ರಹದ ವರದಿಯಲ್ಲೂ ಟ್ರಂಪ್ ಹಿನ್ನಡೆ ಅನುಭವಿಸಿದ್ದಾರೆ.
ಗುರುವಾರವಷ್ಟೇ ಚುನಾವಣೆ ಕುರಿತು ಟ್ವೀಟ್ ಮಾಡಿದ್ದ ಟ್ರಂಪ್, ಮೇಲ್ ಮೂಲಕ ಮತದಾನ ಮಾಡುವುದರಿಂದ ಮೋಸ ನಡೆಯುವ ಸಾಧ್ಯತೆಯಿರುತ್ತದೆ. ಹಾಗಾಗಿ ಚುನಾವಣೆ ಮುಂದೂಡುವುದು ಉತ್ತಮ ಎಂದು ಸಲಹೆ ನೀಡಿದ್ದರು. ಇದಕ್ಕೆ ಡೆಮಾಕ್ರಾಟ್ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ರಿಪಬ್ಲಿಕನ್ ನಾಯಕರು ಕೂಡ ಟ್ರಂಪ್ ಹೇಳಿಕೆಗೆ ಬೆಂಬಲ ನೀಡಲಿಲ್ಲ.
ಫಲಿತಾಂಶ ವಿಳಂಬ: ಈ ಹಿನ್ನೆಲೆಯಲ್ಲಿ ಶುಕ್ರವಾರ ಸ್ಪಷ್ಟನೆ ನೀಡಿದ ಟ್ರಂಪ್, ನನಗೆ ಚುನಾವಣೆ ಮುಂದೂಡಿಕೆ ಆಗಬೇಕೆಂಬ ಇಚ್ಛೆಯಿಲ್ಲ. ಆದರೆ, ಮೇಲ್ ಮೂಲಕ ಚುನಾವಣೆ ನಡೆದರೆ ಫಲಿತಾಂಶ ವಿಳಂಬವಾಗುತ್ತದೆ. ಅಷ್ಟರಲ್ಲಿ ಎಷ್ಟೋ ಮತಪತ್ರಗಳು ನಾಪತ್ತೆಯಾಗಬಹುದು.
ಹೀಗಾದರೆ ಚುನಾವಣೆಗೆ ಅರ್ಥವೇ ಇರುವುದಿಲ್ಲ. ಈ ಕಾರಣಕ್ಕಾಗಿ ಅಂಥದ್ದೊಂದು ಸಲಹೆ ನೀಡಿದ್ದೆ ಎಂದು ಹೇಳಿದ್ದಾರೆ.