Advertisement
ಪ್ರಸವಾನಂತರದ ಮಾನಸಿಕ ಖನ್ನತೆಯು ಮಗುವನ್ನು ಹೆತ್ತ ಬಳಿಕ ಮಹಿಳೆಯರನ್ನು ಕಾಡಬಲ್ಲ ಒಂದು ಭಾವನಾತ್ಮಕ ಸಮಸ್ಯೆ. ಭಾರತದಲ್ಲಿ ಶೇ.22ರಷ್ಟು ಚೊಚ್ಚಲ ತಾಯಂದಿರು ಈ ಸಮಸ್ಯೆಯಿಂದ ಬಳಲುತ್ತಾರೆ. ಮಗುವನ್ನು ಹೆತ್ತ ಬಳಿಕ ಶೇ.60ರಿಂದ 80ರಷ್ಟು ಮಹಿಳೆಯರು ಚಿಂತೆ, ಅಸಂತೋಷ, ದಣಿವು ಇತ್ಯಾದಿಗಳನ್ನು ಅನುಭವಿಸುತ್ತಾರೆ; ಇದು ಒಂದೆರಡು ವಾರಗಳ ಕಾಲ ಇದ್ದು ಆ ಬಳಿಕ ತಂತಾನೆ ಮಾಯವಾಗುತ್ತದೆ. ಆದರೆ ಪ್ರಸವಾನಂತರದ ಖನ್ನತೆಯಿಂದ ಬಳಲುವ ತಾಯಂದಿರು ತೀವ್ರ ದುಃಖ, ಆತಂಕ, ಉದ್ವಿಗ್ನತೆ ಮತ್ತು ಕಂಗಾಲುತನದಂತಹ ಸಮಸ್ಯೆಗಳಿಂದ ಬಳಲುತ್ತಿದ್ದು, ತನ್ನ ಅಥವಾ ಇತರರಿಗಾಗಿನ ದೈನಿಕ ಚಟುವಟಿಕೆಗಳನ್ನು ನಡೆಸುವಲ್ಲಿ ತೊಂದರೆ ಎದುರಿಸುತ್ತಾರೆ. ಇದು ಹಲವು ಅಂಶಗಳಿಂದಾಗಿ ಉಂಟಾಗುವ ಸಂಕೀರ್ಣ ಸಮಸ್ಯೆ. ಪ್ರಸವಾನಂತರದ ಖನ್ನತೆಯು ಏಕ ಕಾರಣದಿಂದ ಉಂಟಾಗುವ ತೊಂದರೆಯಲ್ಲ; ದೈಹಿಕ ಮತ್ತು ಮಾನಸಿಕವಾದ ಹಲವು ಅಂಶಗಳ ಒಟ್ಟಾರೆ ಫಲವಾಗಿರುವ ಸಾಧ್ಯತೆಯೇ ಅಧಿಕ.
ಮಗುವನ್ನು ಹೆತ್ತ ಬಳಿಕ ಮಹಿಳೆಯ ದೇಹದಲ್ಲಿ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್‌ಗಳ ಪ್ರಮಾಣವು ಹಠಾತ್ತಾಗಿ ಕುಸಿತ ಕಾಣುತ್ತದೆ. ಇದರಿಂದಾಗಿ ಆಕೆಯ ಮಿದುಳಿನಲ್ಲಿ ರಾಸಾಯನಿಕ ಪ್ರತಿಸ್ಪಂದನಗಳು ಉಂಟಾಗುತ್ತವೆ ಮತ್ತು ಇದರ ಪರಿಣಾಮವಾಗಿ ಭಾವನಾತ್ಮಕ ಏರುಪೇರುಗಳು ಕಾಣಿಸಿಕೊಳ್ಳುತ್ತವೆ. ಇದಲ್ಲದೆ, ಅನೇಕ ಮಹಿಳೆಯರಿಗೆ ಪ್ರಸವದ ಬಳಿಕ ಚೇತರಿಸಿಕೊಳ್ಳುವುದಕ್ಕೆ ಅತ್ಯಗತ್ಯವಾಗಿರುವ ಸಂಪೂರ್ಣ ವಿಶ್ರಾಂತಿ ಲಭ್ಯವಾಗುವುದಿಲ್ಲ. ಮಗುವಿನ ಆರೈಕೆಯ ಕಾರಣ ಅಥವಾ ಇನ್ನಾéವುದೋ ಕಾರಣಗಳಿಂದ ಸತತ ನಿದ್ರಾಭಂಗ ಉಂಟಾಗುವುದರಿಂದ ದೈಹಿಕ ದಣಿವು ಮತ್ತು ಕಂಗಾಲುತನ ಆಕೆಯನ್ನು ಕಾಡುತ್ತವೆ. ಇವುಗಳು ಕೂಡ ಪ್ರಸವಾನಂತರದ ಮಾನಸಿಕ ಖನ್ನತೆಯುಂಟಾಗುವುದಕ್ಕೆ ಕೊಡುಗೆ ನೀಡುತ್ತವೆ. ಭಾವನಾತ್ಮಕ/ ಒತ್ತಡಯುಕ್ತ ಘಟನೆಗಳಿಂದ ಅಥವಾ ದೈಹಿಕವಾಗಿ ಉಂಟಾಗುವ ಬದಲಾವಣೆಯಿಂದ ಮಿದುಳಿನ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಕಾಣಿಸಿಕೊಳ್ಳುವ ಅಸಮತೋಲನ ಯಾ ಇವೆರಡರಿಂದಲೂ ಖನ್ನತೆಯು ಉಂಟಾಗಬಹುದು.
Related Articles
ಮಹಿಳೆ ಅನುಭವಿಸುವ ಸಾಮಾನ್ಯವಾದ ಲಕ್ಷಣಗಳಾವುವು?
ದುಃಖ, ಹತಾಶೆ, ಶೂನ್ಯ ಅಥವಾ ಸಂತೋಷದ ಅನುಭವ
ಸಾಮಾನ್ಯವಾದ್ದಕ್ಕಿಂತ ಹೆಚ್ಚು ಅಥವಾ ಯಾವುದೇ ನಿರ್ದಿಷ್ಟ ಕಾರಣ ಇಲ್ಲದೆ ಅಳುವುದು
ವಿನಾಕಾರಣ ದುಗುಡ ಅಥವಾ ಅತಿಯಾದ ಉದ್ವಿಗ್ನತೆ
ಭಾವನಾತ್ಮಕ ಏರುಪೇರು, ಕಿರಿಕಿರಿಯಾಗುವುದು, ಚಡಪಡಿಕೆ
ಅತಿಯಾದ ನಿದ್ದೆ ಅಥವಾ ಮಗು ನಿದ್ರಿಸಿದ್ದಾಗಲೂ ನಿದ್ದೆ ಮಾಡುವುದಕ್ಕೆ ಆಗದೆ ಇರುವುದು
ಏಕಾಗ್ರತೆಯ ಕೊರತೆ, ವಿವರಗಳನ್ನು ನೆನಪಿರಿಸಿಕೊಳ್ಳುವುದಕ್ಕೆ, ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಕಷ್ಟವಾಗುವುದು
ಸಾಮಾನ್ಯವಾಗಿ ಸಂತೋಷ ತರುವ ಚಟುವಟಿಕೆಗಳನ್ನು ನಡೆಸುವ ಆಸಕ್ತಿಯನ್ನು ಕಳೆದುಕೊಳ್ಳುವುದು
ಆಗಾಗ ತಲೆನೋವು, ಹೊಟ್ಟೆಯ ಸಮಸ್ಯೆಗಳು ಮತ್ತು ಸ್ನಾಯು ನೋವು ಸಹಿತ ದೈಹಿಕವಾದ ನೋವು, ಬೇನೆಗಳನ್ನು ಅನುಭವಿಸುವುದು
ಅತಿಯಾಗಿ ತಿನ್ನುವುದು ಅಥವಾ ಏನೂ ತಿನ್ನದೆ ಇರುವುದು
ಕುಟುಂಬ ಮತ್ತು ಗೆಳೆಯ ಗೆಳತಿಯರಿಂದ ದೂರ ಇರುವುದು
ಮಗುವಿನ ಜತೆಗೆ ಆಪ್ತತೆ, ಬಂಧವನ್ನು ಬೆಸೆದುಕೊಳ್ಳುವಲ್ಲಿ ಹಿಂದೆ ಬೀಳುವುದು
ಮಗುವನ್ನು ನೋಡಿಕೊಳ್ಳುವುದಕ್ಕೆ, ಲಾಲನೆ ಪಾಲನೆ ಮಾಡುವುದಕ್ಕೆ ತನ್ನಿಂದ ಸಾಧ್ಯವೇ ಎಂಬ ಅನುಮಾನ
ತನಗೆ ಅಥವಾ ಮಗುವಿಗೆ ಹಾನಿ ಉಂಟು ಮಾಡುವ ಆಲೋಚನೆಗಳು
Advertisement
ಡಾ| ಸೋನಿಯಾ ಶೆಣೈ,ಅಸಿಸ್ಟೆಂಟ್ ಪ್ರೊಫೆಸರ್, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಣಿಪಾಲ