ಬೀದರ: ಭಾರತೀಯ ಅಂಚೆ ಇಲಾಖೆ ಖಾಸಗೀಕರಣ ವಿರೋಧಿಸಿ ಅಂಚೆ ನೌಕರರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಅಖೀಲ ಭಾರತೀಯ ಅಂಚೆ ನೌಕರರ ಸಂಘದ ನೇತೃತ್ವದಲ್ಲಿ ಭೋಜನ ವಿರಾಮದ ವೇಳೆ ಪ್ರಧಾನ ಅಂಚೆ ಕಚೇರಿ ಎದುರು ಸೇರಿದ ನೌಕರರು ಘೋಷಣೆಗಳನ್ನು ಕೂಗಿದರು.
ಸರ್ಕಾರ, ಅಂಚೆ ಇಲಾಖೆ ಖಾಸಗೀಕರಣ ಕೈಬಿಡಬೇಕು. ಅಂಚೆ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಬೇಕು. 8ನೇ ವೇತನ ಆಯೋಗ ರಚಿಸಬೇಕು. ಗ್ರಾಮೀಣ ಅಂಚೆ ನೌಕರರನ್ನು ಕಾಯಂಗೊಳಿಸಬೇಕು. ಭಾನುವಾರ ಹಾಗೂ ರಜೆ ದಿನಗಳಲ್ಲಿ ಸಭೆ ಹಾಗೂ ಕಾರ್ಯಾಗಾರಗಳನ್ನು ಆಯೋಜಿಸಬಾರದು. ಅನುಕಂಪದ ಆಧಾರದಲ್ಲಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಉದ್ಯೋಗ ಕಲ್ಪಿಸಬೇಕು. ಅಂಚೆ ಉಳಿತಾಯ ಖಾತೆಯನ್ನು ಐಪಿಪಿಬಿಗೆ ಸೇರಿಸಬಾರದು ಎಂದು ಸಂಘದ ಸದಸ್ಯರು ಒತ್ತಾಯಿಸಿದರು.
ಕಾರ್ಯದರ್ಶಿ ಕಲ್ಲಪ್ಪ ಕೋಣಿ, ಜಂಟಿ ಕಾರ್ಯದರ್ಶಿ ಚಿದಾನಂದ ಕಟ್ಟಿ, ಗುಣವಂತ ಸಿಂಧೆ, ಗೌಸಿಯಾ ಬಾನು, ಅಶ್ವಿನಿ, ಪದ್ಮಾ, ಇವೆಂಜಲಿನ್, ರಾಮಕೃಷ್ಣ ರೆಡ್ಡಿ, ಸತೀಶ್, ರಾಜೇಂದ್ರ ವಗ್ಗೆ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.