Advertisement

ಯೋಜನೆ ಯಶಸ್ಸಿಗೆ ಅಂಚೆ ಇಲಾಖೆ ಬದ್ಧ: ನಾಯಕ

04:35 PM Sep 17, 2022 | Shwetha M |

ಮುದ್ದೇಬಿಹಾಳ: ಕೇಂದ್ರ-ರಾಜ್ಯ ಸರ್ಕಾರದ ಹಲವು ಯೋಜನೆ ಯಶಸ್ವಿಗೊಳಿಸಲು ಅಂಚೆ ಇಲಾಖೆ ಬದ್ಧವಾಗಿದೆ. ಇದಕ್ಕೆ ಅಂಚೆ ನೌಕರರು ನಿರಂತರ ಶ್ರಮವಹಿಸಿ ದುಡಿಯಬೇಕು ಎಂದು ವಿಜಯಪುರ ಜಿಲ್ಲಾ ಅಂಚೆ ಅಧೀಕ್ಷಕ ಜಿ.ಬಿ. ನಾಯಕ ಹೇಳಿದರು.

Advertisement

ಪಟ್ಟಣದ ಎಪಿಎಂಸಿಯಲ್ಲಿರುವ ಸಭಾಭವನದಲ್ಲಿ ಮುದ್ದೇಬಿಹಾಳ ಅಂಚೆ ಉಪ ವಿಭಾಗದಡಿ ಅಂಚೆ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು.

ಅಂಚೆ ಇಲಾಖೆ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಸೇರಿದಂತೆ ಎಲ್ಲೆಡೆ ಬಹಳ ನಂಬಿಕೆ, ವಿಶ್ವಾಸ ಇದೆ. ದೇಶದ ಎಲ್ಲ ಗ್ರಾಮಗಳಲ್ಲಿ ಅಂಚೆ ನೌಕರರು ಕೆಲಸ ನಿರ್ವಹಿಸುತ್ತಿದ್ದು, ಬಹುದೊಡ್ಡ ಜಾಲ ಇದಾಗಿದೆ. ಕೇಂದ್ರ-ರಾಜ್ಯ ಸರ್ಕಾರಗಳು ವಿವಿಧ ಯೋಜನೆ ಅನುಷ್ಠಾನಗೊಳಿಸಿದ್ದು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಕಿಸಾನ್‌ ಸಮ್ಮಾನ್‌ ಯೋಜನೆ, ಎಲ್‌ಪಿಜಿ ಗ್ಯಾಸ್‌ ಸಬ್ಸಿಡಿ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಕಲಚೇತನರ ವೇತನ, ವಿದ್ಯಾರ್ಥಿ ವೇತನ ಮೊದಲಾದವುಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿದೆ. ಈ ಸುವರ್ಣಾವಕಾಶ ಬಳಸಿಕೊಂಡು ಅಂಚೆ ಇಲಾಖೆ ನೌಕರರು ಗ್ರಾಹಕರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿವಳಿಕೆ ನೀಡಬೇಕು. ತಂತ್ರಜ್ಞಾನ ಬದಲಾದಂತೆ ನಾವೂ ಬದಲಾಗಿದ್ದೇವೆ. ನಾವು ಉತ್ತಮ ಸೇವೆ ನೀಡಲು ಸಿದ್ಧರಾಗಿದ್ದೇವೆ ಎಂಬ ಸಂದೇಶ ನೀಡುವ ಜೊತೆಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ವಿಜಯಪುರ ಜಿಲ್ಲಾ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ) ಮ್ಯಾನೇಜರ್‌ ರಾಜೇಶ್‌ ಮಾತನಾಡಿ, ಭಾರತೀಯ ಅಂಚೆ ಇಲಾಖೆ, ಟಾಟಾ ಹಾಗೂ ಎಐಜಿ ಕಂಪನಿ ಸಹಯೋಗದಲ್ಲಿ ಹೊರತಂದಿರುವ ಗುಂಪು ಅಪಘಾತ ವಿಮೆಯ (ಜಿಎಜಿ) ಯೋಜನೆ ಲಾಭ ಗ್ರಾಹಕರು ಪಡೆಯಬೇಕು. ಗ್ರಾಮೀಣ ಪ್ರದೇಶದ ಅಂಚೆ ನೌಕರರು ಸಹ ಈ ಗುಂಪು ಅಪಘಾತ ವಿಮೆ ಮಾಡುತ್ತಾರೆ. ಇದರೊಂದಿಗೆ ಆಧಾರ್‌ ಸಂಖ್ಯೆ ಜೋಡಿಸಿದ ಎಲ್ಲ ಬ್ಯಾಂಕ್‌ ಖಾತೆಗಳಿಂದ ಹಣ ವರ್ಗಾಯಿಸುವ (ಎಇಪಿಎಸ್‌) ಯೋಜನೆ ಅನುಷ್ಠಾನದ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದರು. ಉಪ ವಿಭಾಗದ ಅಂಚೆ ನಿರೀಕ್ಷಕ ಕೆ.ಎಚ್‌. ಸಂಕರಟ್ಟಿ ಪ್ರಾಸ್ತಾವಿಕ ಮಾತನಾಡಿದರು.

ಸಭೆಯಲ್ಲಿ ಐಪಿಪಿಬಿ ಅಧಿಕಾರಿ ಚನ್ನಪ್ಪ ಟಕ್ಕೋಡ, ವೈ.ಬಿ. ರೇವಡಿಹಾಳ, ಜಿ.ಬಿ. ಯಾಳವಾರ ಸೇರಿದಂತೆ ಮುದ್ದೇಬಿಹಾಳ, ತಾಳಿಕೋಟಿ, ನಾಲತವಾಡ, ತಂಗಡಗಿ, ಢವಳಗಿ, ನಿಡಗುಂದಿ, ಆಲಮಟ್ಟಿ ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರರು ಪಾಲ್ಗೊಂಡಿದ್ದರು. ಮುದ್ದೇಬಿಹಾಳ ಮುಖ್ಯ ಅಂಚೆ ಕಚೇರಿ ಪೋಸ್ಟ್‌ ಮಾಸ್ಟರ್‌ ಎಂ.ಎಸ್‌. ಗಡೇದ ಸ್ವಾಗತಿಸಿ, ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next