Advertisement

ರಾಜ್ಯದಲ್ಲಿ ಅಂಚೆ ಪಾವತಿ ಬ್ಯಾಂಕ್‌ಗೆ ಚಾಲನೆ

11:57 AM Sep 02, 2018 | Team Udayavani |

ಬೆಂಗಳೂರು: ಜನ ಸಾಮಾನ್ಯರ ಮನೆ ಬಾಗಿಲಿಗೆ ಬ್ಯಾಂಕಿಂಗ್‌ ಸೇವೆ ಕಲ್ಪಿಸುವ ಭಾರತೀಯ ಅಂಚೆ ಇಲಾಖೆಯ ಅಂಚೆ ಪಾವತಿ ಬ್ಯಾಂಕ್‌(ಐಪಿಪಿಬಿ) ವ್ಯವಸ್ಥೆಗೆ ದೇಶಾದ್ಯಂತ ಶನಿವಾರ ಚಾಲನೆ ದೊರಕಿದ್ದು, ರಾಜ್ಯದ 31 ಶಾಖೆಗಳ 155 ಸೇವಾ ಕೇಂದ್ರಗಳಲ್ಲೂ ಪಾವತಿ ಬ್ಯಾಂಕ್‌ ಸೇವೆ ಆರಂಭವಾಯಿತು.

Advertisement

ಅಂಚೆ ಇಲಾಖೆಯ ಕರ್ನಾಟಕ ವೃತ್ತವು ನಗರದ ಪುರಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್‌ ಅವರು ಐಪಿಪಿಬಿ ಸೇವೆಗೆ ಚಾಲನೆ ನೀಡಿ ಮಾತನಾಡಿ, ಅಂಚೆ ಇಲಾಖೆಯು ಪಾವತಿ ಬ್ಯಾಂಕ್‌ ಸೇವೆ ಆರಂಭಿಸಿರುವುದು ಹೆಮ್ಮೆಯ ಸಂಗತಿ. ಚಿಕ್ಕಂದಿನಲ್ಲಿ ಅಂಚೆಯಣ್ಣನಿಗೆ ಕಾಯುತ್ತಿದ್ದುದು ಈಗಲೂ ನೆನಪಿದೆ.

ನಗರ ಪ್ರದೇಶದ ಬಹಳಷ್ಟು ಜನ ಹೊಸ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಬಳಸುತ್ತಿರಬಹುದು. ಆದರೆ ಗ್ರಾಮೀಣ ಜನರಿಗೆ ಐಪಿಪಿಬಿ ಉಪಯುಕ್ತವಾಗಲಿದೆ ಎಂದು ಹೇಳಿದರು. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಬೆಂಗಳೂರು ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಸತ್ವಂತ್‌ ಸಿಂಗ್‌ ಸಹೋಟ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಈಗಾಗಲೇ ಸಾರ್ವಜನಿಕ, ಖಾಸಗಿ, ವಿದೇಶ,

ಸಹಕಾರ ಸೇರಿದಂತೆ ಇತರೆ ವರ್ಗದ ಬ್ಯಾಂಕ್‌ಗಳಿರುವಾಗ ಸಣ್ಣ ಪುಟ್ಟ ಸೇವಾ ಶುಲ್ಕ ಪಾವತಿಗೆ ಅಂಚೆ ಇಲಾಖೆ ಬ್ಯಾಂಕಿಂಗ್‌ ಸೇವೆ ಆರಂಭಿಸುವ ಔಚಿತ್ಯವೇನು ಎಂದು ಪ್ರಶ್ನಿಸಬಹುದು. ಸಮಾಜದ ಎಲ್ಲ ಜನರ ಆರ್ಥಿಕ ಒಳಗೊಳ್ಳುವಿಕೆಗೆ ಇದು ಸಹಕಾರಿ. ಗ್ರಾಮೀಣ, ಪಟ್ಟಣ ಪ್ರದೇಶಗಳಲ್ಲಿ ಬ್ಯಾಂಕಿಂಗ್‌ ಸೇವೆಯಿಂದ ಹೊರಗಿರುವವರು, ಕಡಿಮೆ ಆದಾಯ ವರ್ಗದವರು, ಸಣ್ಣ ವ್ಯಾಪಾರಿಗಳಿಗೆ ಈ ಸೇವೆ ಉಪಯುಕ್ತವಾಗಲಿದೆ ಎಂದು ಹೇಳಿದರು.

ಈಗಾಗಲೇ ಏರ್‌ಟೆಲ್‌, ಪೇಟಿಎಂ ಹಾಗೂ ಫಿನೋ ಪೇಮೆಂಟ್‌ ಬ್ಯಾಂಕ್‌ಗಳಿದ್ದು, ಅದರ ಸಾಲಿಗೆ ಅಂಚೆ ಪಾವತಿ ಬ್ಯಾಂಕ್‌ ಹೊಸ ಸೇರ್ಪಡೆ. ಅಂಚೆ ಸೇವೆ ದೇಶಾದ್ಯಂತ ಜನರೊಂದಿಗೆ ಸಂಪರ್ಕ ಹೊಂದಿರುವುದರಿಂದ ವಿಸ್ತಾರ ವ್ಯಾಪ್ತಿ ಹೊಂದಿದೆ. ಹಾಗಾಗಿ ಹೆಚ್ಚು ಜನರನ್ನು ಬ್ಯಾಂಕಿಂಗ್‌ ಸೇವೆ ವ್ಯಾಪ್ತಿಗೆ ಒಳಪಡಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

Advertisement

ಇದೇ ವೇಳೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯೋಜನೆಗೆ ಚಾಲನೆ ನೀಡಿದ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಯಿತು. ಹಾಗೆಯೇ ಗೃಹಿಣಿ ವರಲಕ್ಷ್ಮಿ, ಆಟೋ ಚಾಲಕ ಸುರೇಶ್‌ ಹಾಗೂ ವಿದ್ಯಾರ್ಥಿನಿ ಜಾನ್ಸಿ ಅವರಿಗೆ ಸಾಂಕೇತಿಕವಾಗಿ “ಕ್ಯೂಆರ್‌’ ಕಾರ್ಡ್‌ ವಿತರಿಸಲಾಯಿತು. ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಚೀಫ್ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ.ಚಾರ್ಲ್ಸ್‌ ಲೋಬೋ, ಬೆಂಗಳೂರು ಪ್ರಾದೇಶಿಕ ಪೋಸ್ಟ್‌ ಮಾಸ್ಟರ್‌ ಜನರಲ್‌ ಕರ್ನಲ್‌ ಅರವಿಂದ ವರ್ಮ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next