Advertisement

ಶಾಲೆಗಳಲ್ಲಿ ಬಿಸಿಯೂಟಕ್ಕೆ ಅಕ್ಕಿ ಕೊರತೆ ಸಾಧ್ಯತೆ?

01:59 AM Jan 28, 2023 | Team Udayavani |

ಕುಂದಾಪುರ: ಉಡುಪಿ ಜಿಲ್ಲೆಯಾದ್ಯಂತ ಶಾಲೆಗಳಿಗೆ ಬಿಸಿಯೂಟದ ಅಕ್ಕಿ ಸರಬರಾಜು ಸ್ಥಗಿತಗೊಂಡಿದ್ದು, ಶೀಘ್ರವೇ ಪೂರೈಕೆಯಾಗದಿದ್ದರೆ ಅಕ್ಕಿ ಕೊರತೆ ಉದ್ಭವಿಸಲಿದೆ.

Advertisement

ಭಾರತ ಆಹಾರ ನಿಗಮ (ಫ‌ುಡ್‌ ಕಾರ್ಪೋರೇಶನ್‌ ಆಫ್ ಇಂಡಿಯಾ) ಗೋದಾಮಿನಿಂದ ಕರ್ನಾಟಕ ಆಹಾರ ನಿಗಮದ ಮೂಲಕ ಶಾಲೆಗಳಿಗೆ ಅಕ್ಕಿ, ಬೇಳೆ ಸರಬರಾಜು ಆಗುತ್ತದೆ. ಈ ಶೈಕ್ಷಣಿಕ ವರ್ಷದ 3 ತ್ತೈಮಾಸಿಕ ಅವಧಿಯಲ್ಲಿ ಆಹಾರ ಪದಾರ್ಥ ಬಿಡುಗಡೆಯಾಗಿದೆ. ಆದರೆ 4ನೇ ತ್ತೈಮಾಸಿಕ ಅವಧಿಯ (ಜನವರಿ-ಮಾರ್ಚ್‌)ಜನವರಿ ಮುಗಿಯುತ್ತ ಬಂದರೂ ಅವಶ್ಯವಿರುವ ಅಕ್ಕಿ ಇನ್ನೂ ಶಾಲೆಗೆ ತಲುಪಿಲ್ಲ.

ಎಷ್ಟು ಅಕ್ಕಿ
ಉಡುಪಿ ಜಿಲ್ಲೆಗೆ 1ರಿಂದ 5ನೇ ತರಗತಿ ವರೆಗೆ 290 ಮೆಟ್ರಿಕ್‌ ಟನ್‌ ಅಕ್ಕಿ, 6ರಿಂದ 8ನೇ ತರಗತಿಗೆ 235.5 ಮೆಟ್ರಿಕ್‌ ಟನ್‌ ಅಕ್ಕಿ ಬಿಡುಗಡೆಯಾಗಿದೆ. ಕಳೆದ ಸಾಲಿನಲ್ಲಿ ಬಿಡುಗಡೆಯಾದ ಅಕ್ಕಿಯಲ್ಲಿ ಮಿಕ್ಕುಳಿದ ಅಕ್ಕಿಯನ್ನು ಈಗ ಬಳಸಲಾಗುತ್ತಿದೆ. ಉಳಿದಂತೆ 63 ದಿನಗಳಿಗೆ ಅಕ್ಕಿ ದೊರೆಯಬೇಕಿದೆ.

ತಾಲೂಕುವಾರು ಅಕ್ಕಿ ವಿವರ
ಅವಿಭಜಿತ ಉಡುಪಿ ತಾಲೂಕಿನಲ್ಲಿ 1ರಿಂದ 5ನೇ ತರಗತಿಯ ಸರಕಾರಿ ಶಾಲೆಯ 10,089, ಅನುದಾನಿತ ಶಾಲೆಯ 6,970 ಮಕ್ಕಳಿಗೆ ಒಟ್ಟು 1,074 ಕ್ವಿಂ., ಅವಿಭಜಿತ ಕುಂದಾಪುರ ತಾಲೂಕಿಗೆ ಸರಕಾರಿ ಶಾಲೆಯ 15,589, ಅನುದಾನಿತ ಶಾಲೆಯ 2,495 ಮಕ್ಕಳಿಗೆ 1,139 ಕ್ವಿಂ. ಅಕ್ಕಿ, ಅವಿಭಜಿತ ಕಾರ್ಕಳ ತಾಲೂಕಿನ ಸರಕಾರಿ ಶಾಲೆಯ 6,928, ಅನುದಾನಿತ ಶಾಲೆಗಳ 3,961 ಮಕ್ಕಳಿಗೆ ಒಟ್ಟು 686 ಕ್ವಿಂ. ಅಕ್ಕಿ ಒಟ್ಟು 2,900 ಕ್ವಿಂ. ಅಕ್ಕಿ ವಿತರಣೆೆಯಾಗಬೇಕಿದೆ. 6ರಿಂದ 8ನೇ ತರಗತಿಯ ಮಕ್ಕಳಿಗೆ ಅವಿಭಜಿತ ಉಡುಪಿ ತಾಲೂಕಿನಲ್ಲಿ ಸರಕಾರಿ ಶಾಲೆಯ 5,952, ಅನುದಾನಿತ ಶಾಲೆಯ 4,216 ಮಕ್ಕಳಿಗೆ ಒಟ್ಟು 960 ಕ್ವಿಂ., ಅವಿಭಜಿತ ಕುಂದಾಪುರ ತಾಲೂಕಿಗೆ ಸರಕಾರಿ ಶಾಲೆಯ 8,311, ಅನುದಾನಿತ ಶಾಲೆಯ 1,320 ಮಕ್ಕಳಿಗೆ 910 ಕ್ವಿಂ. ಅಕ್ಕಿ, ಅವಿಭಜಿತ ಕಾರ್ಕಳ ತಾಲೂಕಿನ ಸರಕಾರಿ ಶಾಲೆಯ 4,059, ಅನುದಾನಿತ ಶಾಲೆಗಳ 1,073 ಮಕ್ಕಳಿಗೆ ಒಟ್ಟು 484 ಕ್ವಿಂ. ಅಕ್ಕಿ ಒಟ್ಟು 2,355 ಕ್ವಿಂ. ಅಕ್ಕಿ ವಿತರಣೆೆಯಾಗಬೇಕಿದೆ. ಜ. 21ರಂದು ಜಿಲ್ಲಾಧಿಕಾರಿಗಳು ಅಕ್ಕಿ ಬಿಡುಗಡೆ ಆದೇಶಕ್ಕೆ ಸಹಿ ಹಾಕಿದ್ದಾರೆ. ಆದರೆ ವಿತರಣೆ ಮಾತ್ರ ವಿಳಂಬ ಎನ್ನಲಾಗುತ್ತಿದೆ.

ಕಾಮಗಾರಿ ಕಾರಣ
ಮಣಿಪಾಲದ ಪೆರಂಪಳ್ಳಿಯಲ್ಲಿ ಇರುವ ಐಎಫ್ಸಿ ಗೋದಾಮಿನಲ್ಲಿ ಕಾಂಕ್ರಿಟ್‌ ಕಾಮಗಾರಿ ನಡೆಯಲಿರುವ ಕಾರಣ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದು, ಅಕ್ಕಿ ಸರಬರಾಜು ವಿಳಂಬವಾಗಲಿದೆ ಎಂದು ಕಾರಣ ನೀಡಲಾಗುತ್ತಿದೆ. ಒಂದೊಮ್ಮೆ ಇದು ಹೌದಾದರೆ ಸುಮಾರು 21 ದಿನಗಳವರೆಗೆ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ. ಆದರೆ ಸದ್ಯ ಲಭ್ಯವಿರುವ ಆಕ್ಕಿ ಸುಮಾರು 15-20 ದಿನಗಳಿಗೆ ಸಾಕಾಗಬಹುದು. ಅದರಂತೆಯೇ ಬೇಡಿಕೆ ಪಟ್ಟಿ ಸಲ್ಲಿಸಲಾಗಿದೆ.

Advertisement

ನಿಗಮದಿಂದ ಅಕ್ಕಿ ವಿತರಣೆ ಆರಂಭವಾಗಿ ತಾಲೂಕು ಕೇಂದ್ರದ ಗೋದಾಮಿಗೆ ತಲುಪಲು ಸಾಮಾನ್ಯ 1 ವಾರ ತಗುಲುತ್ತದೆ. ಆ ಬಳಿಕ ತಾಲೂಕು ಕೇಂದ್ರದಿಂದ ರಾಜ್ಯ ಆಹಾರ ನಿಗಮದ ಗೋದಾಮಿನಿಂದ ಗ್ರಾಮಾಂತರದ ವಿವಿಧ ಶಾಲೆಗಳಿಗೆ ವಿತರಿಸಲು 3-4 ವಾರ ಬೇಕಾಗಬಹುದು. ಹಾಗಾಗಿ ಈಗಲೇ ಕ್ರಮ ಕೈಗೊಳ್ಳದಿದ್ದರೆ ಕಾಮಗಾರಿಯ ನೆವದಿಂದ ಶಾಲೆಗಳಲ್ಲಿ ಅಕ್ಕಿಯ ಕೊರತೆ ಉಂಟಾಗಲಿದೆ.

ಸಮಸ್ಯೆ ಗಮನಕ್ಕೆ ಬಂದಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಐಎಫ್ಸಿ ಅಧಿಕಾರಿಯನ್ನು ಬರಲು ಹೇಳಿ ಆದಷ್ಟು ಶೀಘ್ರ ಶಾಲೆಗಳಿಗೆ ತೊಂದರೆಯಾಗದಂತೆ ಸಮಸ್ಯೆ ಬಗೆ ಹರಿಸುತ್ತೇವೆ.
– ಪ್ರಸನ್ನ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಉಡುಪಿ ಜಿ.ಪಂ.

-ಲಕ್ಷ್ಮೀ ಮಚ್ಚಿನ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next