Advertisement

ಬಿಎಸ್‌ವೈ ಹೇಳಿಕೆಯ ಕಂಪನ; ದ.ಕ. ಜಿಲ್ಲೆ-ಯಾರ ಟೀ ಕಪ್‌ನಲ್ಲಿ ಬದಲಾವಣೆ ಬಿರುಗಾಳಿ ?

10:46 AM Mar 09, 2023 | Team Udayavani |

ನಮಗೆ ಬದಲಾಯಿಸಲು ಕಾರಣ ಏನುಂಟು? ಎಂದು ಎಲ್ಲ ಹಾಲಿ ಶಾಸಕರೂ ತಮ್ಮ ಬೆಂಬಲಿಗರಲ್ಲಿ ಕೇಳಿಕೊಂಡು ಖಚಿತಪಡಿಸಿಕೊಳ್ಳುತ್ತಿರುವ ಹೊತ್ತಿದು. ಬಿಎಸ್‌ವೈಯ ಒಂದು ಹೇಳಿಕೆಯ ಬಿರುಗಾಳಿ ಎಲ್ಲರನ್ನೂ ತಮ್ಮನ್ನು ತಾವು ಕ್ರಾಸ್‌ ಚೆಕ್‌ ಮಾಡಿಕೊಳ್ಳುವಂತೆ ಮಾಡಿದೆ. ಇಷ್ಟಕ್ಕೂ ಬದಲಾವಣೆಯ ಬಿರುಗಾಳಿ ಯಾರ ಅಂಗಳದ ಟೀ ಕಪ್ಪಿನಲ್ಲಿ ಬಿರುಗಾಳಿ ಎಬ್ಬಿಸುತ್ತದೆಯೋ ಗೊತ್ತಿಲ್ಲ.

Advertisement

ಮಂಗಳೂರು: ನಾಲ್ಕಾರು ಹಾಲಿ ಶಾಸಕರಿಗೆ ಟಿಕೆಟ್‌ ಈ ಬಾರಿ ಸಿಗದು ಎನ್ನುವ ಬಿಜೆಪಿ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರ ಹೇಳಿಕೆ ದ.ಕ. ಜಿಲ್ಲೆಯ ಬಿಜೆಪಿ ಪಾಳಯದಲ್ಲೂ ಸಣ್ಣದೊಂದು ಸಂಚಲನಕ್ಕೆ ಕಾರಣವಾಗಿದೆ. ಯಡಿಯೂರಪ್ಪ ಎಲ್ಲೂ ಯಾರನ್ನೂ ಉದ್ದೇಶಿಸಿ ಹೇಳಿದಂತೆ ಇಲ್ಲ, ಆದರೆ ಇದು ತಮ್ಮ ಕ್ಷೇತ್ರಗಳಲ್ಲಿ ಕೆಲಸ ಸಾಕಷ್ಟು ಮಾಡಿಲ್ಲ ಎಂಬ ದೂರು ಎದುರಿಸುತ್ತಿರುವ ಶಾಸಕರಿಗೆ ತಲೆಬಿಸಿಗೆ ಕಾರಣವಾಗಿದೆ.

ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರೂ ಬಿಎಸ್‌ವೈ ಹೇಳಿಕೆ ಅಲ್ಲಗಳೆದಿಲ್ಲ. ಆದರೂ ಸಂಸದೀಯ ಮಂಡಳಿಯೇ ಅಂತಿಮ ತೀರ್ಮಾನ ಎಂದಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಬುಧವಾರ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರೂ ಟಿಕೆಟ್‌ ಕೊಡುವುದು ಗೆಲ್ಲುವ ಅಭ್ಯರ್ಥಿಗಳಿಗೇ. ಮೂರನೇ ಸಮೀಕ್ಷೆ ನಡೆಯುತ್ತಿದೆ ಎಂದಿದ್ದಾರೆ. ಇವೆಲ್ಲವೂ ಕೆಲವರನ್ನು ಬಿಡುವುದು ಖಚಿತ ಎಂಬ ಸಂದೇಶವನ್ನು ಹಾಲಿ ಶಾಸಕರಿಗೆ ರವಾನಿಸಿದೆ.

ಜಿಲ್ಲೆಯಲ್ಲಿ ಪ್ರಸ್ತುತ 7 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಹಲವರು ಚುರುಕಾಗಿ ಕೆಲಸ ಮಾಡುವ ಛಾತಿಯವರಾದರೆ ಕೆಲವರ ಬಗ್ಗೆ ಸ್ಥಳೀಯರಿಗೆ ಅಷ್ಟೊಂದು ಅಕ್ಕರೆ ಇಲ್ಲ. ಇದಕ್ಕೆ ಅಭಿವೃದ್ಧಿ ಕೆಲಸ ಸಾಕಷ್ಟು ಆಗಿಲ್ಲ ಎಂಬ ಆರೋಪವೂ ಇರಬಹುದು. ಹಿಂದಿಗಿಂತಲೂ ಈಗ ಕಾರ್ಯಕರ್ತರ ಸಿಟ್ಟು ಸ್ಥಳೀಯರ ಆಕ್ರೋಶಗಳೆಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಳ್ಳುತ್ತಿರುವುದರಿಂದ ಹೈಕಮಾಂಡ್‌ಗೆ ತಲುಪುತ್ತಿದೆ

ಮೂರು ಕ್ಷೇತ್ರಗಳಲ್ಲಿ ಬದಲಾವಣೆ?
ಲಭ್ಯ ಆಂತರಿಕ ಮೂಲಗಳ ಪ್ರಕಾರ ಈ ಬಾರಿ ಬಿಜೆಪಿ ಹೈಕಮಾಂಡ್‌ ರಾಜ್ಯದಲ್ಲೂ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದ ಮಾದರಿಯಲ್ಲೇ ಹಳೆಯ ಹಾಗೂ ವರ್ಚಸ್ಸು ಕಳೆದುಕೊಂಡವರ ಬದಲಿಗೆ ಹೊಸಮುಖಗಳನ್ನು ಪರಿಚಯಿಸುವ ಆಲೋಚನೆ ಯಲ್ಲಿದೆ. ಸದ್ಯ ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಈ ಪ್ರಯೋಗ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ನಿರಂತರವಾಗಿ ಒಬ್ಬರೇ ಪ್ರತಿನಿಧಿಸುವ ಕ್ಷೇತ್ರದಲ್ಲಿ ಬದಲಾವಣೆ ಬೇಕು ಎನ್ನುವ ಕಾರ್ಯಕರ್ತರ ಹಾಗೂ ಸ್ಥಳೀಯ ಮತದಾರರ ಕೂಗಿಗೆ ಹೈಕಮಾಂಡ್‌ ಮನ್ನಣೆ ನೀಡಲೂಬಹುದು. ಕಾರ್ಯಕರ್ತರು ಹಾಗೂ ಕ್ಷೇತ್ರದ ಜನರೊಂದಿಗೆ ಉತ್ತಮ ಸಂವಹನ, ಸಂಬಂಧ ಹೊಂದಿರದ ಹೊಸಬರೂ ಅವಕಾಶ ಕಳೆದುಕೊಳ್ಳಬಹುದು ಎಂಬ ಮಾತು ಕೇಳಿಬಂದಿದೆ.

Advertisement

ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪಗಳು, ಕೆಲವು ಶಾಸಕರ, ಸಚಿವರ ನಡವಳಿಕೆಗಳು ಜನರಲ್ಲಿ ಬೇಸರ ಉಂಟು ಮಾಡಿರುವ ಅರಿವು ಹೈಕಮಾಂಡ್‌ಗೆ ಇದೆ. ಹಾಗಾಗಿ ಗುಜರಾತ್‌, ಹಿಮಾಚಲದ ರೀತಿ ಯಲ್ಲೇ ಅಭ್ಯರ್ಥಿಗಳ ಕೆಲಸ, ವರ್ಚಸ್ಸು, ವಯಸ್ಸು ಎಲ್ಲವನ್ನೂ ಪರಿಗಣಿಸಿ ಆಯ್ಕೆ ಮಾಡುವ ಸಂದರ್ಭವೇ ಹೆಚ್ಚು. ಹಾಗಾಗಿ ಬಿಎಸ್‌ವೈ ಹೇಳಿದ್ದರಲ್ಲಿ ಅಚ್ಚರಿಯಿಲ್ಲ, ಅವರು ಹೈಕಮಾಂಡ್‌ನ‌ ನಿಲುವನ್ನೇ ಹೇಳಿರಬಹುದು ಎನ್ನುತ್ತಾರೆ ಬಿಜೆಪಿ ಹಿರಿಯ ಮುಖಂಡರೊಬ್ಬರು.

ಪ್ರವೀಣ್‌ ನೆಟ್ಟಾರ್‌ ಹತ್ಯೆ ಹಾಗೂ ಅದರ ಬಳಿಕದ ಹಲವು ವಿದ್ಯಮಾನಗಳಿಂದ ಬಿಜೆಪಿಯ ಕಾರ್ಯಕರ್ತರ ವಲಯದಲ್ಲಿ ಪಕ್ಷದ ಶಾಸಕರ, ನಾಯಕರ ವಿರುದ್ಧ ಅಸಮಾಧಾನ ಭುಗಿಲೆದ್ದಿತ್ತು. ಆ ಬಳಿಕ ನೆಟ್ಟಾರ್‌ ಅವರ ಪತ್ನಿಗೆ ಉದ್ಯೋಗ ನೀಡುವುದು, ಕುಟುಂಬಕ್ಕೆ ನೆರವಾಗುವ ಕಾರ್ಯವನ್ನು ನಾಯಕರು ಮಾಡಿದ್ದರೂ ಶಾಸಕರ ವಿರುದ್ಧ ಅಸಮಾಧಾನ ಇನ್ನೂ ತಣ್ಣಗಾಗದಿರುವುದು ಗುಟ್ಟೇನೂ ಅಲ್ಲ.

ಸಮೀಕ್ಷೆಯ ನೆಮ್ಮದಿ
ಹಾಗಿದ್ದರೂ ಕೊನೆಯ ಹಂತದವರೆಗೂ ಅಳೆದೂ ತೂಗಿ, ವಿಶ್ಲೇಷಿಸಿ ಟಿಕೆಟ್‌ ಕೊಡುವ ಸಾಧ್ಯತೆ ಇದೆ. ಇದು ಬಿಜೆಪಿ ರಾಜ್ಯಾಧ್ಯಕ್ಷರ ಜಿಲ್ಲೆ, ಹಾಗಾಗಿ ಕಳೆದ ಬಾರಿ 7 ಕಡೆಗಳಲ್ಲಿ ಹೊಸಬರು ಸ್ಪರ್ಧಿಸಿ, ಅದರಲ್ಲಿ 6 ಮಂದಿ ಗೆದ್ದಿರುವ ಕಾರಣ ಮತ್ತೆ ಬದಲಾವಣೆ ಸಾಧ್ಯತೆಯೂ ಕಡಿಮೆ ಇರಬಹುದು. ಇನ್ನೊಂದೆಡೆ ಬಿಜೆಪಿ ಆಂತರಿಕ ಸಮೀಕ್ಷೆಗಳಲ್ಲಿ ಕರಾವಳಿಯಲ್ಲಿ ಪಕ್ಷಕ್ಕೆ ಹಾನಿ ಯಾಗದು ಎಂಬ ವರದಿಯಿರುವುದೂ ಹಾಲಿ ಶಾಸಕರಿಗೆ ಸಮಾಧಾನ ನೀಡಬಹುದು.

ಹೊಸ ಮುಖ ಇಳಿಸಿ ಯಶಸ್ಸು ಕಂಡಿದ್ದ ಬಿಜೆಪಿ
ಹಿಂದೆಯೂ ಕರಾವಳಿಯಲ್ಲಿ ಒಬ್ಬರನ್ನೇ ಇಳಿಸುವ ಬದಲು ದಿಢೀರ್‌ ಆಗಿ ಹೊಸ ಮುಖ ಗಳಿಗೆ ಮಣೆ ಹಾಕಿ ಬಿಜೆಪಿ ಗೆಲುವು ಸಾಧಿಸಿ ದ್ದಿದೆ. 2018ರ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ, ಉತ್ತರ, ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿಗಳಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿದವರೆಲ್ಲರೂ ಹೊಸಮುಖಗಳು. ಅದಕ್ಕಿಂತ ಹಿಂದಿನ ಬಾರಿ ಎಂದರೆ 2013ರಲ್ಲಿ ಬಿಜೆಪಿ ಸುಳ್ಯ ಒಂದು ಬಿಟ್ಟು ಮತ್ತೆಲ್ಲ ಕ್ಷೇತ್ರಗಳಲ್ಲೂ ಸೋಲನುಭವಿಸಿದ್ದರಿಂದ 2018ರಲ್ಲಿ ಪಕ್ಷಕ್ಕೆ ಅಭ್ಯರ್ಥಿಗಳ ಆಯ್ಕೆ ಸುಲಭವಾಗಿತ್ತು. ಸೋತ ಎಲ್ಲ ಕಡೆಗಳಲ್ಲೂ ಹೊಸಬರನ್ನೇ ಇಳಿಸಿತು. ಈ ಹೆಜ್ಜೆಯಿಂದಾಗಿ ಸೋತ ಕಡೆಗಳಲ್ಲಿ ಗೆಲುವು ಸಾಧಿಸಿ ಫ‌ಲಿತಾಂಶ ಬದಲಾಯಿತು.

*ವೇಣುವಿನೋದ್‌ ಕೆ.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next