Advertisement

ಕುಟ್ಟದಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರ ಸಾಧ್ಯತೆ

07:46 PM Dec 23, 2019 | mahesh |

ಮಡಿಕೇರಿ: ಕಂಕಣ ಸೂರ್ಯಗ್ರಹಣ ದಕ್ಷಿಣ ಕೊಡಗಿನ ಕುಟ್ಟ ಗ್ರಾಮದಲ್ಲಿ ಸಂಪೂರ್ಣವಾಗಿ ಗೋಚರಿಸುತ್ತಿರುವುದು ವಿಶೇಷ. ಸೂರ್ಯಗ್ರಹಣ ದಕ್ಷಿಣ ಕೊಡಗಿನ ಕುಟ್ಟ ಆಸುಪಾಸಿನಲ್ಲಿ ಶೇ.99ರಿಂದ ಶೇ.100ರಷ್ಟು ಪ್ರಮಾಣದಲ್ಲಿ ಗೋಚರವಾಗಲಿದೆ. ಹಾಗಾಗಿ ಕುಟ್ಟ ಸಮೀಪದ ಕಾಯಿಮಾನಿ ಗ್ರಾಮದಲ್ಲಿ ಮಹಾರಾಷ್ಟ್ರ ಪುಣೆಯ ಖಗೋಳ ಮತ್ತು ಪರಿಸರ ಕೇಂದ್ರದ (ಎಎಸ್‌ಇಇಎಂಟಿಐ) ವಿಜ್ಞಾನಿಗಳ ತಂಡ ಸೂರ್ಯಗ್ರಹಣ ವೀಕ್ಷಣೆಗೆ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Advertisement

ದಕ್ಷಿಣ ಭಾರತದಲ್ಲಿ ಈ ಸೂರ್ಯ ಗ್ರಹಣ ಗೋಚರಿಸುವ ಪ್ರಮಾಣ ಬೆಂಗಳೂರಿನಲ್ಲಿ ಶೇ.89.4 ರಷ್ಟಿದ್ದರೆ, ಚೆನ್ನೆçನಲ್ಲಿ ಶೇ.84.6 ಹಾಗೂ ಮುಂಬೈನಲ್ಲಿ ಶೇ.78.8ರಷ್ಟು ಇರಲಿದೆ. ದಕ್ಷಿಣ ಕೊಡಗು ಮಾತ್ರವಲ್ಲದೇ, ಕೊಡಗು ಜಿಲ್ಲೆಯ ಇತರ ಭಾಗಗಳಲ್ಲೂ ಸೂರ್ಯಗ್ರಹಣ ಗೋಚರವಾಗಲಿದ್ದು, ಕುಟ್ಟ ವ್ಯಾಪ್ತಿಯಲ್ಲಿ ಕಾಣಿಸುವಷ್ಟೇ ಸ್ಪಷ್ಟವಾಗಿ ತಲಕಾವೇರಿ, ಭಾಗಮಂಡಲದಲ್ಲೂ ಗ್ರಹಣ ಕಂಡು ಬರಲಿದೆ ಎಂದು ಹೇಳಲಾಗಿದೆ. ಆದರೆ ಇಲ್ಲಿ ದಿನದ ಬಹುತೇಕ ಸಮಯ ಮೋಡ ಮತ್ತು ಮಂಜು ಮುಸುಕಿದ ವಾತಾವರಣ ಇರುವುದರಿಂದ ವಿಜ್ಞಾನಿಗಳು ಕುಟ್ಟ ಬಳಿಯ ಕಾಯಿಮಾನಿ ಎನ್ನುವ ಪ್ರದೇಶವನ್ನು ಸೂರ್ಯಗ್ರಹಣ ವೀಕ್ಷಣೆಗೆ ಆಯ್ದುಕೊಂಡಿದ್ದಾರೆ. ವಿರಾಜಪೇಟೆಯಲ್ಲಿ ಶೇ.96, ಮಡಿಕೇರಿ ಶೇ.93, ಕುಶಾಲನಗರ ಶೇ.90.5 ಮತ್ತು ಸೋಮವಾರಪೇಟೆಯಲ್ಲಿ ಶೇ.90 ರಷ್ಟು ಪ್ರಮಾಣದಲ್ಲಿ ಸೂರ್ಯ ಗ್ರಹಣ ಕಾಣಿಸಲಿದೆ.

ವೀಕ್ಷಣೆಗೆ ಸಿದ್ಧತೆ
ಸೂರ್ಯಗ್ರಹಣದ ಬಗ್ಗೆ ಜನಸಾಮಾನ್ಯರಲ್ಲಿ ಮನೆ ಮಾಡಿರುವ ಮೂಢನಂಬಿಕೆ ಹೊಡೆದೋಡಿಸಲು ಕೂಡ ಇದೊಂದು ಉತ್ತಮ ಅವಕಾಶ. ಈ ಹಿನ್ನೆಲೆಯಲ್ಲಿ ಕುಟ್ಟ ಸಮೀಪದ ಕಾಯಿಮಾನಿ ಗ್ರಾಮದಲ್ಲಿ ಪುಣೆಯ ಖಗೋಳ ಮತ್ತು ಪರಿಸರ ಕೇಂದ್ರ (ಎಎಸ್‌ಇಇಎಂಟಿಐ) ಸೂರ್ಯಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. ಸಂಸ್ಥೆಯ ವಿಜ್ಞಾನಿಗಳ ತಂಡ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಜ್ಞಾನಿಗಳು, ಖಗೋಳಾಸಕ್ತರು, ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ.

ಹೊಳೆಯುವ ಉಂಗುರದ ರೀತಿಯಲ್ಲಿ ಕಂಕಣ ಸೂರ್ಯ ಗ್ರಹಣ ಡಿ.26ರ ಬೆಳಗ್ಗೆ ಸರಿಯಾಗಿ 8 ಗಂಟೆ 05 ನಿಮಿಷಕ್ಕೆ ಪ್ರಾರಂಭವಾಗಲಿದೆ. 9 ಗಂಟೆ 25 ನಿಮಿಷಕ್ಕೆ ಪೂರ್ಣ ಪ್ರಮಾಣದಲ್ಲಿ ಗೋಚರವಾಗಲಿದ್ದು, 11 ಗಂಟೆಗೆ ಗ್ರಹಣ ಅಂತ್ಯವಾಗಲಿದೆ. ಗ್ರಹಣದ ಅವಧಿಯಲ್ಲಿ ಉತ್ತರದ 12 ಡಿಗ್ರಿ ಸರಳ ರೇಖೆ ಮತ್ತು ಪಶ್ಚಿಮದ 75 ಡಿಗ್ರಿ ಸರಳ ರೇಖೆಯಲ್ಲಿ ಸೂರ್ಯ ಹಾದು ಹೋಗುವುದರಿಂದ ಈ ಭಾಗದಲ್ಲಿ ಇರುವ ಪ್ರದೇಶಗಳಲ್ಲಿ ಸೂರ್ಯಗ್ರಹಣ ಸಂಪೂರ್ಣವಾಗಿ ಕಾಣುತ್ತದೆ. ಚಂದ್ರ ನಿಧಾನವಾಗಿ ಸೂರ್ಯನ ಎದುರು ಹಾದು ಹೋಗುವುದರಿಂದ ಸೂರ್ಯ ಕೂಡ ಮರೆಯಾಗುತ್ತಾ ಹೋದಂತೆ ಕಾಣುತ್ತದೆ ಎಂದು ಎಂದು ರಾಜ್ಯ ವಿಜ್ಞಾನ ಪರಿಷತ್‌ ಸಂಚಾಲಕಪ್ರೇಮ್‌ಕುಮಾರ್‌ ತಿಳಿಸಿದ್ದಾರೆ.

ವೀಕ್ಷಣೆಗೆ ವ್ಯವಸ್ಥೆಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಕೊಡಗು ಘಟಕದ ವತಿಯಿಂದ ಜಿಲ್ಲೆಯ ಶಾಲೆಗಳಲ್ಲಿ ಮತ್ತು ತಾಲೂಕು ಕೇಂದ್ರಗಳಲ್ಲಿ ಸೂರ್ಯ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೂರ್ಯ ಗ್ರಹಣದ ಬಗ್ಗೆ ಜನರಲ್ಲಿರುವ ಮೂಢನಂಬಿಕೆ ನಿವಾರಣೆಯ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಈ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಲು ಚಿಂತಿಸಲಾಗಿದೆ. ಆಸಕ್ತರಿಗೋಸ್ಕರ ಸೂರ್ಯ ಗ್ರಹಣ ವೀಕ್ಷಣೆಗಾಗಿ ವಿಶೇಷ ಕನ್ನಡಕಗಳನ್ನು ತರಿಸಲಾಗುತ್ತಿದ್ದು, 20, 45 ಹಾಗೂ 60 ರೂ. ದರದಲ್ಲಿ ಪರಿಷತ್‌ನ ಪದಾಧಿಕಾರಿಗಳ ಬಳಿಯಿಂದ ಖರೀದಿಸ ಬಹುದಾಗಿದೆ ಎಂದು ಮಾಹಿತಿ ನೀಡಿರುವ ಪ್ರೇಮ ಕುಮಾರ್‌ ಆಸಕ್ತರು ತಮ್ಮನ್ನು ಸಂಪರ್ಕಿಸ ಬಹುದು ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next