Advertisement

ನೂರೊಂದು ಕನಸು, ಪೋರ್ಟ್‌ ಫೋಲಿಯೋ ನಿರ್ವಹಣೆ

11:37 PM Sep 29, 2019 | sudhir |

ನಮ್ಮ ಜೀವನವೇ ಹೀಗೆ. . . ನೂರೊಂದು ಕನಸು. . . ದೈನಂದಿನ ಖರ್ಚು ವೆಚ್ಚದ್ದು, ಮನೆಯ ಸುಖ ಸೌಕರ್ಯದ್ದು, ಐಷಾರಾಮದ್ದು, ಮಕ್ಕಳ ಉತ್ತಮ ವಿದ್ಯಾಭ್ಯಾಸದ್ದು, ವಿದೇಶ ಪಯಣದ್ದು, ಕಾರು ಬಂಗ್ಲೆಗಳದ್ದು, ಇಳಿ ವಯಸ್ಸಿನ ಆರೋಗ್ಯದ್ದು… ಒಂದೇ ಎರಡೇ? ಬಾನಿಗೊಂದು ಎಲ್ಲೆ ಎಲ್ಲಿದೆ? ಕನಸು ಕಾಣುವುದಕ್ಕೆ ಆಸೆಯನ್ನು ಹಿಡಿಯಲೆತ್ನಿಸುವುದಕ್ಕೆ ಕೊನೆಯೇ ಇಲ್ಲ.

Advertisement

ಅದಕ್ಕಾಗಿಯೇ ನಾವು, ಮಧ್ಯಮ ವರ್ಗದ ಜನರು, ಕಾಸಿಗೆ ಕಾಸು ಕೂಡಿಸಿ ಕುಡಿಕೆಗೆ ಇಳಿಸಿ ಕನಸು ಬೆಳೆಸುತ್ತೇವೆ. ಕಾಸಿನ ಕುಡಿಕೆ ಬೆಳೆದು ಒಂದಕ್ಕೆ ಎರಡಾಗಿ, ನಾಲ್ಕಕ್ಕೆ ಎಂಟಾಗಿ, ಕೊನೆಗೊಮ್ಮೆ ದೊಡ್ಡ ಗಂಟಾಗಿ, ದಂಟು ಹಿಡಿಯುವ ಸಮಯಕ್ಕೆ ನೆಂಟಾಗಿ ಬರಬಹುದೆಂಬ ಆಸೆಗೆ ಬಸಿರಾಗುತ್ತೇವೆ.

ಅದಕ್ಕಾಗಿ ಸಂಪಾದಿಸಿದ ದುಡ್ಡನ್ನು ಉಳಿಸುತ್ತೇವೆ, ಉಳಿಸಿ ಅತ್ಯಧಿಕ ವೃದ್ಧಿಗಾಗಿ ಹೂಡುತ್ತೇವೆ. ಅದಕ್ಕಾಗಿ ಬೇಕಾದ ಬೇಡದ ಸರ್ಕಸ್ಸುಗಳನ್ನೆಲ್ಲ ಮಾಡುತ್ತೇವೆ. ಹೇಗಾದರೂ ಮಾಡಿ ನಮ್ಮ ಸಾವಿರ ಬೇಗನೆ ಲಕ್ಷವಾಗಲಿ, ಲಕ್ಷಗಳು ಕೋಟಿಗಳಾಗಲಿ ಎಂಬ ಆಸೆಯನ್ನು ಸಾಕುತ್ತೇವೆ.

ಇದೇ ಆಸೆ ಕೆಲವೊಮ್ಮೆ ಅತಿಯಾಗುತ್ತದೆ. ಇಂತಹ ಅಮಾಯಕ ಮನಸು ಅದಕ್ಕಾಗಿಯೇ ಬಲೆ ಹಾಕಿ ಕಾದು ಕುಳಿತಿರುವ ಧೂರ್ತರ ಸೂತ್ರಕ್ಕೆ ಬಲಿಯಾಗುತ್ತದೆ. ಯಾವುದೇ ಹೂಡಿಕೆಯ ಪ್ರಚಾರದ ಸತ್ಯಾಸತ್ಯತೆಯ ಬಗ್ಗೆ ಕೂಲಂಕಷ ಅಧ್ಯಯನ ಅಗತ್ಯ. ಠಕ್ಕರ ಹಾವಳಿ ಅತಿಯಾಗಿದೆ.

ಜಾಗರೂಕತೆಯಿಂದ ಕಾರ್ಯ ನಿರ್ವಹಿಸುವುದು ಅಗತ್ಯ. ಈ ಮಾತನ್ನು ಎಷ್ಟು ಬಾರಿ ಹೇಳಿದರೂ ಸಾಕಾಗುವುದಿಲ್ಲ. ಪಾಂಜಿ ಸ್ಕೀಮುಗಳ- ಒಂದಕ್ಕೆ ಡಬ್ಬಲ್‌ ಸ್ಕ್ಯಾಮುಗಳ, ನೈಜೀರಿಯಾದ 419 ರೀತಿಯ ಮೋಸಗಳ ಜಾಲಕ್ಕೆ ಜನರು ದಿನಾ ಬಲಿಯಾಗುತ್ತಲೇ ಇದ್ದಾರೆ.

Advertisement

ಇನ್ನು ದುಡ್ಡನ್ನು ಅಧಿಕ ಪ್ರತಿಫ‌ಲಕ್ಕಾಗಿ ಯಾವ ರೀತಿಯಲ್ಲಿ ಹೂಡಬೇಕೆನ್ನುವುದು ಅತ್ಯಂತ ಕ್ಲಿಷ್ಟ ಪ್ರಶ್ನೆ. ಇದನ್ನು ದೇಶದ/ವಿಶ್ವದ ಆರ್ಥಿಕ ಸ್ಥಿತಿಗತಿಗಳನ್ನು ನೋಡಿಕೊಂಡು ಮಾಡ ಬೇಕಾ ಗುತ್ತದೆ. ಸದಾ ಆರ್ಥಿಕ ವಾತಾವರಣದ ಬಗ್ಗೆ ಮಾಹಿತಿ ಮತ್ತು ಎಚ್ಚರ ಅಗತ್ಯ. ನಮ್ಮ ಮುಂದಿರುವ ಶೇರು, ಭೂಮಿ, ಚಿನ್ನ, ನಿಗದಿತ ಬಡ್ಡಿಯ ಉಪಕರಣಗಳು ಇತ್ಯಾದಿ ವಿವಿಧ ಮಾರ್ಗಗಳು ಬೇರೆ ಬೇರೆ ಆರ್ಥಿಕ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ವರ್ತಿಸೀತು. ಸದಾ ಚಲನಶೀಲವಾದ ಆರ್ಥಿಕ ಪರಿಸ್ಥಿತಿಯನ್ನು ಸರಿಯಾಗಿ ಅರಿತು ಅದಕ್ಕನುಗುಣವಾಗಿ ಹೂಡಿಕೆಯನ್ನು ಮಗುಚುತ್ತಾ ಹೋಗಬೇಕು.

ಎಲ್ಲಾ ಉತ್ತಮ ವಸ್ತುಗಳಲ್ಲೂ ಹೂಡಿಕೆ ಇಟ್ಟುಕೊಳ್ಳುವುದು ಉತ್ತಮ ಧೋರಣೆ. ಆದರೂ ಒಮ್ಮೆ ಈಕ್ವಿಟಿ ಆದರೆ ಇನ್ನೊಮ್ಮೆ ಡೆಟ್‌ ಮಗದೊಮ್ಮೆ ಚಿನ್ನ ಅಥವಾ ಭೂಮಿ ಈ ರೀತಿ ಸಂದರ್ಭ ನೋಡಿ ಇದ್ದ ಹೂಡಿಕೆಯ ಒಂದು ಭಾಗವನ್ನು ಅತ್ತಿತ್ತ ತಿರುಗಿಸುತ್ತಾ ಹೋಗ ಬೇಕು.

ಇಂದಿನ ವಿಶ್ವದ ಹೂಡಿಕಾ ವಾತಾವರಣ ನೋಡಿದರೆ ಆರ್ಥಿಕ ತಳಹದಿ ಅಷ್ಟೇನೂ ಉತ್ತೇಜನದಾಯಕವಾಗಿಲ್ಲ. ಅಮೆರಿಕ ಮತ್ತು ಚೀನಾ ದೃಷ್ಟಿ ಯುದ್ಧದಲ್ಲಿ ತೊಡಗಿದೆ. ಒಬ್ಬರ ಮೇಲೊಬ್ಬರು ನಿರ್ಬಂಧ ಹೇರುತ್ತಾ ಹೋಗುತ್ತಿದ್ದಾರೆ. ಅವರಿಬ್ಬರ ನಡುವೆ ಕೋಪ-ರಾಜಿ ಆಟ ನಡೆಯುತ್ತಲೇ ಇದೆ. ಅಮೆರಿಕದಲ್ಲೂ ರಿಸೆಷನ್‌ ಬರಬಹುದು ಎನ್ನುವ ಧ್ವನಿ ತುಸು ದಟ್ಟವಾಗಿಯೇ ಕೇಳ ಬರುತ್ತಿದೆ. ಜಪಾನ್‌ ಮತ್ತು ಚೀನ ಪರಿಸ್ಥಿತಿಗಳೂ ಉತ್ತಮವೇನಿಲ್ಲ.

ಭಾರತದ ಆರ್ಥಿಕ ಸಮಸ್ಯೆ ಎಲ್ಲರಿಗೂ ಗೊತ್ತಿರುವ ವಿಚಾರ. ಸ್ಲೋ ಡೌನ್‌ ಖಂಡಿತ ಇದೆ. ರಿಸೆಶನ್‌ ಬರಬಹುದೋ ಇಲ್ಲವೋ ಗೊತ್ತಿಲ್ಲ. ಅದನ್ನು ತಪ್ಪಿಸಲು ಹರ ಸಾಹಸ ಪಡುತ್ತಿದ್ದಾರೆ. ಕಪ್ಪು ಹಣದ ನಿಗ್ರಹ ಒಟ್ಟಾರೆ ಆರ್ಥಿಕ ಪ್ರಗತಿಯ ಮೇಲೆ ಪ್ರಭಾವ ಬೀರಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಶೇರುಗಟ್ಟೆಗಳು, ತೈಲ ದರ, ಚಿನ್ನ, ಡಾಲರ್‌ ದರ ಏರುಪೇರಾಗುತ್ತಾ ಇದೆ. ಆರ್ಥಿಕ ಪ್ರಗತಿಗೆ ಈ ಹೂಡಿಕೆಗಳು ನೇರವಾದ ಸಂಬಂಧ ಹೊಂದಿವೆ.

ಯಾವುದೇ ವಿಶೇಷವಾದ ಆರ್ಥಿಕ ಉಪಯೋಗ ಇಲ್ಲದ ಚಿನ್ನ ಎಂಬ ಒಂದು ಬೆಲೆಬಾಳುವ ವಸ್ತು ಆರ್ಥಿಕ ಪ್ರಗತಿ ಇಳಿಮುಖವಾಗಿ ಜಗತ್ತೇ ಶೂನ್ಯವಾಗಿ ತೋರುವಾಗ ಆಪದ್ಧನವಾಗಿ ಉಪಯೋಗಕ್ಕೆ ಬರುತ್ತದೆ. ಜಗತ್ತಿನಲ್ಲಿ ರಿಸೆಶನ್‌ ಇರುವಾಗ ಎಲ್ಲಾ ಬಿಟ್ಟು ಚಿನ್ನದಂತಹ (ಸ್ವಲ್ಪ ಮಟ್ಟಿಗೆ ಬೆಳ್ಳಿ ಪ್ಲಾಟಿನಮ್‌ ಸಹಿತ) ಅಮೂಲ್ಯ ಲೋಹಗಳ ಬೆಲೆ ಏರುತ್ತವೆ. ಅದೇ ವೇಗದಲ್ಲಿ, ಪ್ರಗತಿ ಆರಂಭಗೊಂಡಂತೆ ಇವುಗಳ ಬೆಲೆ ಇಳಿಮುಖವೂ ಆದೀತು. ಹಾಗಾಗಿ ಆರ್ಥಿಕ ಪರಿಸ್ಥಿತಿಯನ್ನು ಹೊಂದಿಕೊಂಡು ಈಕ್ವಿಟಿ ಅಥ‌ವಾ ಚಿನ್ನದಲ್ಲಿ ಹೂಡುವ ನಿರ್ಧಾರವನ್ನು ತೆಗೆದುಕೊಳ್ಳಬೇಕು.

ಯಾವುದೇ ನಿಗದಿತ ಆದಾಯದ ಸ್ಕೀಮುಗಳ ಮೇಲಿನ ಪ್ರತಿಫ‌ಲ ದೇಶದ ಬಡ್ಡಿ ದರಗಳ ಚಲನೆಯನ್ನು ಆಧರಿಸಿ ನಿಂತಿವೆ. ಈ ಬಡ್ಡಿ ದರ ಪ್ರಚಲಿತ ಹಣದುಬ್ಬರದ ಗತಿಯನ್ನು ಅನುಸರಿಸುತ್ತವೆ. ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಸೇರುವ ಆರ್‌ಬಿಐ ಪ್ರಕಟಿಸುವ ಬಡ್ಡಿ ದರಗಳನ್ನು ನೋಡಿ ಮುಂದಿನ ಹೂಡಿಕೆಯನ್ನು ನಿಗದಿತ ಆದಾಯದ ಹೂಡಿಕೆಗಳಲ್ಲಿ ಮಾಡ ಬೇಕು. ಸದ್ಯದ ಪರಿಸ್ಥಿತಿಯಲ್ಲಿ ಬಡ್ಡಿ ದರಗಳು ಹೂಡಿ ಕೆಯ ದೃಷ್ಟಿಯಿಂದ ಅಷ್ಟು ಉತ್ತಮವಾಗಿಲ್ಲ. ಅವು ಇನ್ನೂ ಕೊಂಚ ಇಳಿಯುವ ಭೀತಿ ಇದೆ. ಆದರೂ ಸೇಫ್ಟಿ ಬಯಸುವ ಜನರು ಎಫಿxಗಳÇÉೇ ಹೂಡಿಕೆ ಮಾಡುತ್ತಾರೆ. ದೀರ್ಘ‌ಕಾಲಿಕ ಹೂಡಿಕೆ ಬಯಸುವವರು ಯಾವತ್ತೂ ಪಿ.ಪಿ.ಎಫ್, ಎನ್‌.ಪಿ.ಎಸ್‌ ಗಳಲ್ಲಿ ಹೂಡಿಕೆ ಆರಂಭಿಸ ಬಹುದು. ಸದ್ಯ ಶೇರುಗಳು ತುಸು ಕೆಳಮಟ್ಟದಲ್ಲಿ ಲಭಿಸುತ್ತಿವೆ. ನಿರ್ಮಲಾ ಸೀತಾರಾಮನ್‌ ನೀಡಿದ ಇಂಜೆಕ್ಷನ್‌ ಪವರಿನಿಂದ ಮೇಲೇರುತ್ತಿದೆ. ಉತ್ತಮ ಕಂಪೆನಿಗಳ ಶೇರುಗಳನ್ನು ಸಂಗ್ರಹಿಸತೊಡಗಬಹುದು. ಅದಾಗದವರು ಉತ್ತಮ ಫ‌ಂಡ್‌ ಹೌಸ್‌ಗಳ ಡೈವರ್ಸಿಫೈಡ್‌ ಈಕ್ವಿಟಿ ಮ್ಯೂಚು ವಲ್‌ ಫ‌ಂಡುಗಳನ್ನು ಖರೀದಿಸ ತೊಡಗ ಬಹುದು. ಚಿನ್ನದಲ್ಲಿ ಹೂಡುವವರು ದಿನಾ ಅದನ್ನು ಗಮನಿ ಸುತ್ತಲೇ ಇರಬೇಕು. ಸದ್ಯಕ್ಕೆ ಏರಿಳಿಯುತ್ತಾ ಇದೆ. ಆರ್ಥಿಕತೆ ಪ್ರಗತಿ ಹೊಂದುವ ಲಕ್ಷಣ ಕಂಡಂತೆಯೇ ಚಿನ್ನದ ಬೆಲೆ ಇಳಿದೀತು. ಭೂಮಿಯಲ್ಲಿ ಹೂಡಿಕೆ ನಡೆಸುವವರಿಗೂ ಇದು ಒಳ್ಳೆಯ ಸಮಯ. ಆರ್ಥಿಕತೆ ಅಭಿವೃದ್ದಿ ಹೊಂದುವ ಲಕ್ಷಣ ಕಂಡಂತೆ ಭೂಮಿಯ ಬೆಲೆ ಜೋರಾಗಿ ಏರೀತು. ಒಟ್ಟಾರೆ ಪರಿಸ್ಥಿತಿ ಯಾವತ್ತಿಗೂ ಇದೇ ರೀತಿ ಅಸ್ಪಷ್ಟವಾಗಿಯೇ ಇರುತ್ತದೆ. ಹೂಡಿಕೆಯಲ್ಲಿ ಸುಲಭವಾಗಿ ಹೀಗೆಯೇ ಎಂದು ಹೇಳಲು ಬರುವುದಿಲ್ಲ.

ಜಾಸ್ತಿ ಪ್ರತಿಫ‌ಲ ಇದೆ ಎಂದು ಎಲ್ಲಾ ದುಡ್ಡನ್ನು ಒಂದೇ ಬುಟ್ಟಿಯಲ್ಲಿ ಹಾಕಬಾರದು. ಯಾವಾಗ ಯಾವುದು ಏರುತ್ತದೆ ಯಾವುದು ಇಳಿಯುತ್ತದೆ ಹೇಳಬರುವುದಿಲ್ಲ. ಸಾಧ್ಯವಾದಷ್ಟು ಬೇರೆ ಬೇರೆ ಮಾರ್ಗಗಳಲ್ಲಿ ಹರಡಬೇಕು ಮತ್ತು ಸರಾಸರಿ ಪ್ರತಿಫ‌ಲದತ್ತ ಗಮನ ಕೊಡಬೇಕು. ಅದಲ್ಲದೆ ಯಾವುದೇ ಕ್ಷೇತ್ರದಲ್ಲಿನ ಚಾರಿತ್ರಿಕ ಪ್ರತಿಫ‌ಲಗಳನ್ನು ನೋಡಿ ಬಾಯಲ್ಲಿ ನೀರೂರಿಸಿಕೊಂಡು ಹೂಡಿಕೆಯನ್ನು ಆ ಕ್ಷೇತ್ರದಲ್ಲಿ ಎಂದಿಗೂ ಮಾಡಬಾರದು. ಆ ಕ್ಷೇತ್ರದ ಭವಿಷ್ಯದ ಭರವಸೆ ಏನು ಎಂಬುದನ್ನು ಅಧ್ಯಯನ ಮಾಡಬೇಕು.

ನೂರೆಂಟು ಕನಸುಗಳು… ಅವುಗಳ ಸಾಕಾರಕ್ಕೆ ಇರುವ ಮಾರ್ಗಗಳು ಮಾತ್ರ ಕೆಲವೇ ಕೆಲವು. ಇರುವ ದುಡ್ಡನ್ನು ವಿವಿಧ ಮಾರ್ಗಗಳಲ್ಲಿ ಸಫ‌ಲವಾಗಿ ಗರಿಷ್ಠ ಪ್ರತಿಫ‌ಲಕ್ಕಾಗಿ ಈ ರೀತಿ ತೊಡಗಿಸಿಕೊಂಡು ನಿರ್ವಹಿಸುವುದೇ ಪೋರ್ಟ್‌ಫೋಲಿಯೋ ಮ್ಯಾನೇಜ್‌ಮೆಂಟ್‌.

– ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next