Advertisement

ಶಿಕ್ಷಕಿಯಿಂದಲೇ ಶಿಕ್ಷಕಿಗೆ ಅಶ್ಲೀಲ ಸಂದೇಶ

05:29 PM Mar 25, 2019 | Team Udayavani |

ಸುರಪುರ: ಶಾಂತಪುರ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಪದ್ಮಾವತಿ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿ ಮಾನಸಿಕ ಹಿಂಸೆ ನೀಡಿದ ಅದೇ ಶಾಲೆ ಶಿಕ್ಷಕಿ ವಿಜಯಲಕ್ಷ್ಮೀಗೌಡ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹಳ್ಳೆಪ್ಪ ಖಾಂಜಾಂಜಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣ ಆಗ್ರಹಿಸಿದೆ.

Advertisement

ಈ ಕುರಿತು ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಜಿಲ್ಲಾಧಿಕಾರಿ, ಜಿಪಂ ಸಿಇಒ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹಾಗೂ ಬಿಇಒ ಅವರಿಗೆ ದೂರು ಸಲ್ಲಿಸಿ ಶಿಕ್ಷಕಿ ವಿಜಯಲಕ್ಷ್ಮೀಗೌಡ ಅವರು ಅಸಂವಿಧಾನಿಕ ಪದ ಬಳಸಿ ಶಿಕ್ಷಕಿ ಪದ್ಮಾವತಿಗೆ ಸಂದೇಶ ಕಳುಹಿಸಿರುವುದು ನಾಚಿಕೆಗೇಡು ಸಂಗತಿ ಎಂದು ಆರೋಪಿಸಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹಳ್ಳೆಪ್ಪ ಖಾಂಜಾಂಜಿ ಪದ್ಮಾವತಿ ಅವರ ಸೇವಾ ಪುಸ್ತಕದಲ್ಲಿ ನಾಮಿನಿ ಬದಲಾಯಿಸಲು 4 ಸಾವಿರ ರೂ. ಹಣ ಪಡೆದಿದ್ದಾರೆ. ಇದೇ ನೆಪ ಮುಂದಿಟ್ಟುಕೊಂಡು ಹಳ್ಳೆಪ್ಪ ಅವರು ನಿತ್ಯ ದೂರವಾಣಿ ಕರೆ ಮಾಡಿ ಪದ್ಮಾವತಿಗೆ ಕಿರುಕುಳ ನೀಡಿದ್ದಾರೆ. ಪದ್ಮಾವತಿ ಸ್ಪಂದಿಸದೇ ಇದ್ದಾಗ ವಿಜಯಲಕ್ಷ್ಮೀಗೌಡ ಅವರಿಗೆ ಇಲ್ಲ ಸಲ್ಲದ ಕಾರಣ ಹೇಳಿ ಅವರ ತಲೆ ಕೆಡಿಸಿ ಅವರ ಮೂಲಕ ಅಶ್ಲೀಲ ಪದಗಳ ಸಂದೇಶ ಕಳುಹಿಸಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗೆ ಹಳ್ಳೆಪ್ಪ ಪ್ರಮುಖ ಕಾರಣ ಎಂದು ದೂರಿದ್ದಾರೆ.

ಅಶ್ಲೀಲ ಪದಗಳ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡಿದೆ. ವೈರಲ್‌ ಆಗುತ್ತಿದಂತೆ ಶಿಕ್ಷಕಿ ಪದ್ಮಾವತಿ, ವಿಜಯಲಕ್ಷ್ಮೀಗೌಡ ಮತ್ತು ಹಳ್ಳೆಪ್ಪ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಬಿಇಒ ಅವರಿಗೆ ದೂರು ಸಲ್ಲಿಸಿದ್ದಾರೆ.

ಇದರಿಂದ ಕುಪಿತಗೊಂಡ ವಿಜಯಲಕ್ಷ್ಮೀಗೌಡ ಮತ್ತು ಹಳ್ಳೆಪ್ಪ ಪದ್ಮಾವತಿಗೆ ದಮಕಿ ಹಾಕಿದ್ದಾರೆ. ಆದ್ದರಿಂದ ವಿಜಯಲಕ್ಷ್ಮೀಗೌಡ ಮತ್ತು ಕುಮ್ಮಕ್ಕು ನೀಡಿದ ಹಳ್ಳೆಪ್ಪ ಖಾಂಜಾಂಜಿ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮಾನಸಿಕವಾಗಿ ನೊಂದುಕೊಂಡಿರುವ ಶಿಕ್ಷಕಿ ಪದ್ಮಾವತಿಗೆ ನ್ಯಾಯ ಒದಗಿಸಿಕೊಡಬೇಕು. ನಿರ್ಲಕ್ಷ್ಯವಹಿಸಿದಲ್ಲಿ ಏ. 10ರಂದು ಸಮಿತಿ ಬಿಇಒ ಕಚೇರಿಗೆ ಮುಳ್ಳುಬೇಲಿ ಹಚ್ಚಿ ಹೋರಾಟ ನಡೆಸಲಿದೆ ಎಂದು ಕ್ರಾಂತಿ ಎಚ್ಚರಿಸಿದ್ದಾರೆ.

Advertisement

ವಿಷಯ ಗಮನಕ್ಕೆ ಬಂದಿದೆ. ಶಿಕ್ಷಕಿ ಪದ್ಮಾವತಿ ಅವರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ
ಹಾಜರಾಗುವಂತೆ ಮೂವರು ಶಿಕ್ಷಕರಿಗೆ ಈಗಾಗಲೇ ನೋಟಿಸ್‌ ಜಾರಿ ಮಾಡಿದ್ದೇನೆ. ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
ನಾಗರತ್ನ ಓಲೇಕಾರ, ಕ್ಷೇತ್ರ ಶಿಕ್ಷಣಾಧಿಕಾರಿ

ಹಳ್ಳೆಪ್ಪ ಖಾಂಜಾಂಜಿ ರಾತ್ರಿ ಸಮಯದಲ್ಲಿ ಕರೆ ಮಾಡಿ ಪದ್ಮಾವತಿ ಟೀಚರ್‌ ನಿನ್ನ ಬಗ್ಗೆ ಆಡಿ ಕೊಳ್ಳುತ್ತಿದ್ದಾಳೆ. ಏನೇನೋ ಹೇಳುತ್ತಿದ್ದಾಳೆ ಎಂದು ಹೇಳಿ ನನ್ನ ತಲೆ ಕೆಡೆಸಿದರು. ಇದನ್ನು ಸತ್ಯ ಎಂದು ಭಾವಿಸಿದೆ. ಸ್ಥಿತಪ್ರಜ್ಞೆ ಕಳೆದುಕೊಂಡ ನಾನು ಆವೇಶದಲ್ಲಿ ಪದ್ಮಾವತಿ ಅವರಿಗೆ ಸಂದೇಶ ಕಳುಹಿಸಿದೆ. ತಪ್ಪು ಎಂದು ಈಗ ಅರಿವೆ ಬಂದಾಗಿದೆ. ಪದ್ಮಾವತಿ ಅವರ ಬಳಿ ಕ್ಷಮೆ ಕೋರುತ್ತೇನೆ.
ವಿಜಯಲಕ್ಷ್ಮೀಗೌಡ, ಶಿಕ್ಷಕಿ

ನಾನು ಮತ್ತು ವಿಜಯಲಕ್ಷ್ಮೀಗೌಡ ಒಂದೆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಯಾಕೆ ಇಂತಹ ಕೆಟ್ಟ ಪದ ಬಳಸಿ ಸಂದೇಶ ಕಳುಹಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಇದರಿಂದ ನನ್ನ ಚಾರಿತ್ರ್ಯ ವಧೆಯಾಗಿದೆ. ಇದಕ್ಕೆಲ್ಲ ಹಳ್ಳೆಪ್ಪ ಖಾಂಜಾಂಜಿ ಕಾರಣ ಎಂಬುದು ತಿಳಿದು ಬಂದಿದೆ. ಸಂದೇಶ ಕಳುಹಿಸಲು ಅವರೇ ಕುಮ್ಮಕ್ಕು ನೀಡಿದ್ದಾರೆ. ಇದರಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ. ನ್ಯಾಯ ಕೋರಿ ಬಿಇಒ ಅವರಿಗೆ ದೂರು ನೀಡಿದ್ದೇನೆ. ನ್ಯಾಯ ಸಿಗದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ.
ಪದ್ಮಾವತಿ, ನೊಂದ ಶಿಕ್ಷಕಿ

Advertisement

Udayavani is now on Telegram. Click here to join our channel and stay updated with the latest news.

Next