ನವದೆಹಲಿ: ಜನಸಂಖ್ಯಾ ನಿಯಂತ್ರಣ ಮಸೂದೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಹೇಳಿಕೆಗಳು ಆಗಾಗ ಮುನ್ನೆಲೆಗೆ ಬರುತ್ತಿದ್ದು, ಕೇಂದ್ರ ಸಚಿವ, ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಕೂಡ ದೇಶದ ಹೆಚ್ಚುತ್ತಿರುವ ಜನಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
‘ನಮ್ಮಲ್ಲಿ ಸೀಮಿತ ಸಂಪನ್ಮೂಲಗಳಿರುವುದರಿಂದ ಜನಸಂಖ್ಯೆಯನ್ನು ನಿಯಂತ್ರಿಸುವುದು ಬಹಳ ಮುಖ್ಯ. ಭಾರತವು ವೇಗವಾಗಿ ಅಭಿವೃದ್ಧಿ ಹೊಂದಬೇಕಾದರೆ, ಈ ಬಗ್ಗೆ ಕಾನೂನು ರೂಪಿಸಬೇಕು’ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.
‘ಜನಸಂಖ್ಯಾ ನಿಯಂತ್ರಣ ಮಸೂದೆಯು ನಿರ್ಣಾಯಕವಾಗಿದೆ, ನಾವು ಸೀಮಿತ ಸಂಪನ್ಮೂಲಗಳನ್ನು ಹೊಂದಿದ್ದೇವೆ. ಚೀನ ‘ಒಂದು ಮಗುವಿನ ನೀತಿ’ಯನ್ನು ಜಾರಿಗೆ ತಂದಿತು, ಜನಸಂಖ್ಯೆಯನ್ನು ನಿಯಂತ್ರಿಸಿತು ಮತ್ತು ಅಭಿವೃದ್ಧಿಯನ್ನು ಸಾಧಿಸಿತು. ಚೀನದಲ್ಲಿ ನಿಮಿಷಕ್ಕೆ 10 ಮಕ್ಕಳಿದ್ದರೆ, ಭಾರತದಲ್ಲಿ ನಿಮಿಷಕ್ಕೆ 30 ಮಕ್ಕಳು ಜನಿಸುತ್ತಾರೆ, ನಾವು ಚೀನದೊಂದಿಗೆ ಹೇಗೆ ಸ್ಪರ್ಧಿಸಬಹುದು’ ಎಂದು ಸಚಿವ ಸಿಂಗ್ ಪ್ರಶ್ನಿಸಿದರು.
‘ಮಸೂದೆಯನ್ನು ಧರ್ಮ ಅಥವಾ ಪಂಗಡವನ್ನು ಲೆಕ್ಕಿಸದೆ ಪ್ರತಿಯೊಬ್ಬರ ಮೇಲೆ ಜಾರಿಗೊಳಿಸಬೇಕು ಮತ್ತು ಅನುಸರಿಸದವರಿಗೆ ಸರಕಾರದ ಪ್ರಯೋಜನಗಳನ್ನು ನೀಡಬಾರದು. ಅವರ ಮತದಾನದ ಹಕ್ಕನ್ನೂ ಕಸಿದುಕೊಳ್ಳಬೇಕು’ ಎಂದು ಕೇಂದ್ರ ಸಚಿವ ಹೇಳಿಕೆ ನೀಡಿದ್ದಾರೆ.