ಟರೂಬ (ಟ್ರಿನಿಡಾಡ್: ಪ್ರಚಂಡ ಚೇಸಿಂಗ್ ಪರಾಕ್ರಮ ನಡೆಸಿದ ವೆಸ್ಟ್ ಇಂಡೀಸ್, ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯವನ್ನು 7 ವಿಕೆಟ್‌ಗಳಿಂದ ಜಯಿಸಿದೆ.
ಇಲ್ಲಿನ “ಬ್ರಿಯಾನ್ ಲಾರಾ ಸ್ಟೇಡಿಯಂ’ನಲ್ಲಿ ನಡೆದ ಮುಖಾಮುಖೀಯಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ 7 ವಿಕೆಟಿಗೆ 174 ರನ್ ಪೇರಿಸಿ ಸವಾಲೊಡ್ಡಿದರೆ, ವೆಸ್ಟ್ ಇಂಡೀಸ್ 17.5 ಓವರ್‌ಗಳಲ್ಲೇ 3 ವಿಕೆಟಿಗೆ 176 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.
ಆರಂಭಿಕರಾದ ಅಲಿಕ್ ಅಥನಾಜ್ ಮತ್ತು ಶೈ ಹೋಪ್ ಮೊದಲ ವಿಕೆಟಿಗೆ 8 ಓವರ್‌ಗಳಿಂದ 84 ರನ್ ಪೇರಿಸಿ ಗಟ್ಟಿ ಅಡಿಪಾಯ ನಿರ್ಮಿಸಿದರು. ಬಳಿಕ ನಿಕೋಲಸ್ ಪೂರಣ್ ಸಿಡಿದು ನಿಂತರು. ವನ್‌ಡೌನ್‌ನಲ್ಲಿ ಬ್ಯಾಟ್ ಹಿಡಿದು ಬಂದ ಪೂರಣ್, ಕೇವಲ 26 ಎಸೆತಗಳಲ್ಲಿ ಅಜೇಯ 65 ರನ್ ಬಾರಿಸಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್ ಹಾಗೂ 2 ಬೌಂಡರಿ ಸೇರಿತ್ತು.
ಹೋಪ್ 36 ಎಸೆತಗಳಿಂದ 51 ರನ್ ಹೊಡೆದರು. ಅಥನಾಜ್ ಗಳಿಕೆ 30 ಎಸೆತಗಳಿಂದ 40 ರನ್. ಇಬ್ಬರೂ ತಲಾ 3 ಸಿಕ್ಸರ್, 2 ಬೌಂಡರಿ ಸಿಡಿಸಿದರು.
ದಕ್ಷಿಣ ಆಫ್ರಿಕಾದ ಆರಂಭ ಅತ್ಯಂತ ಆಘಾತಕಾರಿಯಾಗಿತ್ತು. 8 ಓವರ್ ಮುಕ್ತಾಯಕ್ಕೆ 42 ರನ್ನಿಗೆ 5 ವಿಕೆಟ್ ಹಾರಿ ಹೋಗಿತ್ತು. ಆದರೆ ಟ್ರಿಸ್ಟನ್ ಸ್ಟಬ್ಸ್ ಸಿಡಿದು ನಿಂತರು. ವಿಂಡೀಸ್ ಬೌಲರ್‌ಗಳ ಮೇಲೆರಗಿ ಹೋದ ಸ್ಟಬ್ಸ್ 76 ರನ್ ಕೊಡುಗೆ ಸಲ್ಲಿಸಿದರು (42 ಎಸೆತ, 8 ಬೌಂಡರಿ, 3 ಸಿಕ್ಸರ್). ಇವರಿಗೆ ಕೆಳ ಕ್ರಮಾಂಕದ ಆಟಗಾರ ಪ್ಯಾಟ್ರಿಕ್ ಕ್ರುಗರ್ ಉತ್ತಮ ಬೆಂಬಲ ನೀಡಿದರು (44).
ವೆಸ್ಟ್ ಇಂಡೀಸ್ ಪರ ಮ್ಯಾಥ್ಯೂ ಫೋರ್ಡ್ 3, ಶಮರ್ ಜೋಸೆಫ್ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-7 ವಿಕೆಟಿಗೆ 174 (ಸ್ಟಬ್ಸ್ 76, ಕ್ರುಗರ್ 44, ಫೋರ್ಡ್ 27ಕ್ಕೆ 3, ಜೋಸೆಫ್ 40ಕ್ಕೆ 2). ವೆಸ್ಟ್ ಇಂಡೀಸ್-17.5 ಓವರ್‌ಗಳಲ್ಲಿ 3 ವಿಕೆಟಿಗೆ 176 (ಪೂರಣ್ ಔಟಾಗದೆ 65, ಹೋಪ್ 51, ಅಥನಾಜ್ 40, ಬಾರ್ಟ್‌ಮನ್ 30ಕ್ಕೆ 2). ಪಂದ್ಯಶ್ರೇಷ್ಠ: ನಿಕೋಲಸ್ ಪೂರಣ್.