Advertisement

ಕಳಪೆ ಕಾಮಗಾರಿ: ಗುತ್ತಿಗೆದಾರರಿಗೆ ಲಕ್ಷ ರೂ. ದಂಡ

12:07 PM Oct 04, 2018 | Team Udayavani |

ಬೆಂಗಳೂರು: ಹೈಕೋರ್ಟ್‌ ಮಧ್ಯ ಪ್ರವೇಶದ ನಂತರವೂ ವೈಜ್ಞಾನಿಕವಾಗಿ ರಸ್ತೆಗುಂಡಿ ಮುಚ್ಚದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್‌ ಗಂಗಾಂಬಿಕೆ ಅವರು, ಸಮರ್ಪಕವಾಗಿ ಕಾಮಗಾರಿ ನಡೆಸದ ಗುತ್ತಿಗೆದಾರರಿಗೆ ಸ್ಥಳದಲ್ಲೇ ಒಂದು ಲಕ್ಷ ರೂ. ದಂಡ ಹಾಕಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

Advertisement

ಪಾಲಿಕೆಯಿಂದ ನಗರದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಪರಿಶೀಲನೆಗಾಗಿ ಪೂರ್ವ ವಲಯ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ಸಂಚಾರ ನಡೆಸಿದ ಅವರು, ರಸ್ತೆಗುಂಡಿ ದುರಸ್ತಿ, ಜಾಹೀರಾತು ಫ‌ಲಕ (ಸ್ಟ್ರಕ್ಚರ್‌) ತೆರವು, ಒಎಫ್ಸಿ ಕೇಬಲ್‌, ಕೆಳಸೇತುವೆಗಳ ನಿರ್ವಹಣೆ ಸೇರಿದಂತೆ ಇತರೆ ಕಾಮಗಾರಿಗಳನ್ನು ಪರಿಶೀಲಿಸಿದರು.

ಮೊದಲಿಗೆ ಜಯಮಹಲ್‌ ರಸ್ತೆಯಲ್ಲಿ ಗುಂಡಿ ಮುಚ್ಚುವ ಕಾಮಗಾರಿ ವೀಕ್ಷಿಸಿದ ಅವರು, ಸಮರ್ಪಕವಾಗಿ ಗುಂಡಿಗಳನ್ನು ದುರಸ್ತಿಪಡಿಸದಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ ಕೂಡಲೇ ಸಂಬಂಧಪಟ್ಟ ಗುತ್ತಿಗೆದಾರರಿಂದ ಒಂದು ಲಕ್ಷ ರೂ. ಸಂಗ್ರಹಿಸಿ ರಶೀದಿ ಪಡೆಯಿರಿ ಎಂದು ತಾಕೀತು ಮಾಡಿದ ಅವರು, ನಗರದಾದ್ಯಂತ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾವು ಸಂಚರಿಸಿದ ಬಹುತೇಕ ಮುಖ್ಯರಸ್ತೆಗಳಲ್ಲಿ ಬೀದಿ ದೀಪಗಳು ಇಲ್ಲದಿರುವುದನ್ನು ಕಂಡು ಕೋಪಗೊಂಡ ಅವರು, ಮುಖ್ಯರಸ್ತೆಗಳಲ್ಲಿಯೇ ಬೀದಿ ದೀಪಗಳ ನಿರ್ವಹಣೆ ಮಾಡದಿದ್ದರೆ, ಸಾರ್ವಜನಿಕರು ಹೇಗೆ ಓಡಾಡಬೇಕು. ಕೂಡಲೇ ಬೀದಿ ದೀಪ ನಿರ್ವಹಣೆ ಗುತ್ತಿಗೆದಾರರಿಗೆ 50 ಸಾವಿರ ರೂ. ದಂಡ ವಿಧಿಸುವಂತೆ ಸೂಚಿಸಿದರು. ಕೂಡಲೇ ಬೀದಿ ದೀಪಗಳನ್ನು ಸರಿಪಡಿಸುವಂತೆ ತಾಕೀತು ಮಾಡಿದರು.

ತಡರಾತ್ರಿವರೆಗೆ ತಪಾಸಣೆ: ಪಾಲಿಕೆಯ ಕೇಂದ್ರ ಕಚೇರಿಯಿಂದ ರಾತ್ರಿ 10.30ಕ್ಕೆ ನಗರದ ಪ್ರದಕ್ಷಿಣೆ ಪ್ರಾರಂಭಿಸಿದ ಮೇಯರ್‌ ತಡರಾತ್ರಿ 1.30ರವರೆಗೆ ಪರಿಶೀಲನೆ ನಡೆಸಿದರು. ವಿವಿಧ ಭಾಗಗಳಲ್ಲಿನ ಸಮಸ್ಯೆಗಳನ್ನು ಖುದ್ದಾಗಿ ಕಂಡ ಅವರು ತಕ್ಷಣವೇ ಸಮಸ್ಯೆ ನಿವಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಅದರಂತೆ ಕಸ್ತೂರ ಬಾ ರಸ್ತೆಯ ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯದ ಬಳಿ ಚರಂಡಿ ಕಾಮಗಾರಿ, ಕನ್ನಿಂಗ್‌ ಹ್ಯಾಮ್‌ ರಸ್ತೆ ಬಳಿ ಜಾಹೀರಾತು ಫ‌ಲಕದ ಚೌಕಟ್ಟು, ಹೆಬ್ಟಾಳ ರಸ್ತೆಯ ಗಂಗಾನಗರ ಬಳಿಯ ಕೆಳಸೇತುವೆ ಸೀಲಿಂಗ್‌ ಬಿಟ್ಟಿರುವುದನ್ನು ಶೀಘ್ರ ಸರಿಪಡಿಸುವಂತೆ ಸೂಚಿಸಿದರು. ಜತೆಗೆ ಆರ್‌.ಟಿ. ನಗರದ ಬಳಿಯ ಚರಂಡಿ ಕಾಮಗಾರಿಯನ್ನು
ತ್ವರಿತವಾಗಿ ಕೈಗೊಳ್ಳುವಂತೆ ಹೇಳಿದರು. 

Advertisement

ಸೂಚನೆಗಳನ್ನು ಏಕೆ ಪಾಲಿಸುತ್ತಿಲ್ಲ: ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿ ಎಲ್ಲೆಂದರಲ್ಲಿ ಒಎಫ್ಸಿ ಕೇಬಲ್‌ ಅಳವಡಿಸಿರುವುದನ್ನು ಕಂಡು ಗರಂ ಅದ ಮೇಯರ್‌ ಮುಖ್ಯ ಇಂಜಿನಿಯರ್‌ ಪ್ರಸಾದ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಅನಧಿಕೃತವಾಗಿ ಅಳವಡಿಸಿರುವ ಕೇಬಲ್‌ಗ‌ಳನ್ನು ತೆರವು ಮಾಡಿ ಡಕ್ಟ್ಗಳಲ್ಲಿ ಅಳವಡಿಸುವಂತೆ ಸೂಚಿಸಿದ್ದರೂ ಪಾಲನೆಯಾಗದಿರಲು ಕಾರಣವೇನು. ಅನಧಿಕೃತವಾಗಿ ಅಳವಡಿಸಿದವರ ವಿರುದ್ದ ಯಾವ ಕ್ರಮ ಕೈಗೊಂಡಿದ್ದೀರಾ? ಕೂಡಲೇ ಕೇಬಲ್‌ಗ‌ಳನ್ನು ತೆರವುಗೊಳಿಸಿ ಸಂಬಂಧಿಸಿದವರಿಗೆ ನೋಟಿಸ್‌ ಜಾರಿಗೊಳಿಸಿ ಎಂದು ಖಡಕ್‌ ಸೂಚನೆ ನೀಡಿದರು.

ಪರಿಶೀಲನೆ ವೇಳೆ ಉಪಮೇಯರ್‌ ರಮೀಳಾ ಉಮಾಶಂಕರ್‌, ಆಡಳಿತ ಪಕ್ಷ ನಾಯಕ ಎಂ. ಶಿವರಾಜು ಸೇರಿದಂತೆ ಪ್ರಮುಖರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next