Advertisement

ಪರ್ಕಳ, ಇಂದ್ರಾಳಿ: ಸವಾರರ ಜೀವ ಹಿಂಡುವ ರಸ್ತೆಗಳು

05:50 PM Jun 26, 2022 | Team Udayavani |

ಉಡುಪಿ: ನಗರದೊಳಗೆ ಇರುವ ರಾ.ಹೆ (169ಎ) ರಸ್ತೆ ಅವ್ಯವಸ್ಥೆ ಸವಾರರ ಜೀವ ಹಿಂಡುತ್ತಿದೆ. ಕೆಳ ಪರ್ಕಳ ಮತ್ತು ಇಂದ್ರಾಳಿ ರೈಲ್ವೇ ಸೇತುವೆ ಸಮೀಪದ ರಸ್ತೆ ಮೇಲಿನ ಗುಂಡಿಗಳಿಂದ ವಾಹನ ಸವಾರರು ನಿತ್ಯ ತತ್ತರಿಸುವಂತಾಗಿದೆ.

Advertisement

ಕೆಳ ಪರ್ಕಳದಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿ ಒಂದೆಡೇ ಸಾಗುತ್ತಿದ್ದರೆ. ಇನ್ನೊಂದು ತಾತ್ಕಾಲಿಕ ದುರಸ್ತಿ ಪಡಿಸಿದ್ದ ಹಳೆಯ ರಸ್ತೆಗೆ ಡಾಮರು ಹಾಕಿದ್ದು, ಅದರಲ್ಲಿ ಜನರು ನಿತ್ಯ ಸಂಚಾರ ಮಾಡುತ್ತಿದ್ದಾರೆ. ಈ ರಸ್ತೆಯೂ ತೀರಾ ಹದಗೆಟ್ಟಿದೆ. ಡಾಮರು ರಸ್ತೆ ಕುಸಿದು ಸಾರ್ವಜನಿಕರು ಆತಂಕದಲ್ಲಿ ವಾಹನ ಚಲಾ ಯಿಸುವ ದುಸ್ಥಿತಿ ಎದುರಾಗಿದೆ.

ಈಗಾಗಲೇ ರಸ್ತೆ ಸಂಪೂರ್ಣ ಹದ ಗೆಟ್ಟಿರುವುದರಿಂದ ಮಳೆ ಹೆಚ್ಚಾದಂತೆ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ರಸ್ತೆ ತಗ್ಗಿನಲ್ಲಿರುವುದರಿಂದ ರಾತ್ರಿ ವೇಳೆ ಮಳೆ ಸಮಯದಲ್ಲಿ ಚಾಲಕರಿಗೆ ರಸ್ತೆ ಪರಿಸ್ಥಿತಿ ಅರಿವಿಲ್ಲದೆ ಒಂದೆ ವೇಗದಲ್ಲಿ ಸಾಗಿದರೆ ಭೀಕರ ಅಪಘಾತ ಕಟ್ಟಿಟ್ಟ ಬುತ್ತಿಯಾಗಿದೆ. ದ್ವಿಚಕ್ರ ವಾಹನ ಚಲಾಯಿಸುವ ಮಹಿಳೆಯರು ಜೀವ ಕೈನಲ್ಲಿಡಿದುಕೊಂಡೆ ಸಂಚರಿಸಬೇಕಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.

ಇಂದ್ರಾಳಿ ರೈಲ್ವೇ ಸೇತುವೆ ಬಳಿ ಎರಡು ಬದಿಯಲ್ಲಿ ಬೃಹತ್‌ ಗುಂಡಿಗಳು ಬಿದ್ದಿವೆ. ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಸಾಗುವಾಗ, ಮಣಿಪಾಲದಿಂದ ಉಡುಪಿ ಕಡೆಗೆ ಸಾಗುವಾಗ ಎರಡು ಬದಿಯಲ್ಲಿ ಗುಂಡಿಗಳು ವಾಹನಗಳ ಸುಗಮ ಸಂಚಾರಕ್ಕೆ ತಡೆಯಾಗಿವೆ.

ಕೆಳ ಪರ್ಕಳ ಮತ್ತು ಇಂದ್ರಾಳಿ ರೈಲ್ವೇ ಸೇತುವೆ ಬಳಿ ಈಗಾಗಲೆ ಸಾಕಷ್ಟು ಮಂದಿ ನಿಯಂತ್ರಣ ತಪ್ಪಿ ಸ್ಕಿಡ್‌ ಆಗಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.

Advertisement

ಜನರ ಆಕ್ರೋಶ, ಜಿಲ್ಲಾಡಳಿತ ಅಸಹಾಯಕತೆ ರಸ್ತೆ ಪರಿಸ್ಥಿತಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದರೂ ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರ ಅಸಹಾಯಕತೆ ವ್ಯಕ್ತಪಡಿಸಿದೆ. ಈ ರಸ್ತೆ ಈಗಾಗಲೇ ದುರಸ್ತಿಪಡಿಸಿದ್ದು, ಮಳೆ ಬರುತ್ತಿರುವ ಸಮಯದಲ್ಲಿ ಪುನರ್‌ ದುರಸ್ತಿಗೆ ಮುಂದಾದರೆ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಮಳೆ ಮುಗಿಯುವವರೆಗೂ ಈ ರಸ್ತೆ ಪರಿಸ್ಥಿತಿ ಸುಧಾರಿಸುವ ಯಾವುದೇ ಲಕ್ಷಣ ಕಾಣುತ್ತಿಲ್ಲ

ಇತ್ತೀಚೆಗೆ ದುರಸ್ತಿಗೊಳಿಸಲಾಗಿತ್ತು

ರಾ.ಹೆ. ಪ್ರಾಧಿಕಾರ ವತಿಯಿಂದ ಇತ್ತೀಚೆಗೆ ಎರಡು ರಸ್ತೆಯನ್ನು ದುರಸ್ತಿಗೊಳಿಸಲಾಗಿತ್ತು. ಕೆಳ ಪರ್ಕಳ ರಸ್ತೆಯನ್ನು ಕೆಸರು, ಧೂಳಿನಿಂದ ಮುಕ್ತಿ ಕಲ್ಪಿಸಲು ತಾತ್ಕಾಲಿಕ ನೆಲೆಯಲ್ಲಿ ಡಾಮರು ಹಾಕಿ ಅಭಿವೃದ್ಧಿಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಮಳೆಗಾಲದ ಶುರುವಿನಲ್ಲೇ ರಸ್ತೆ ಒಂದು ಭಾಗದಲ್ಲಿ ಕುಸಿಯುತ್ತಿದೆ. ಕೆಲವು ತಿಂಗಳ ಹಿಂದೆ ಇಂದ್ರಾಳಿ ರೈಲ್ವೇ ಸೇತುವೆ ಬಳಿ ತೀರ ಹದಗೆಟ್ಟಿದ್ದ ರಸ್ತೆಯನ್ನು ತಾತ್ಕಾಲಿಕವಾಗಿ ಡಾಮರು ಹಾಕಲಾಗಿತ್ತು. ಇದೀಗ ಮಳೆ ನೀರಿನ ಒರತೆಯಿಂದ ಹಾಕಲ್ಪಟ್ಟ ಡಾಮರು ಕಿತ್ತು ಹೋಗಿ ಗುಂಡಿಯಾಗಿದೆ.

ಶೀಘ್ರ ಕ್ರಮ: ಕೆಳಪರ್ಕಳ ಪರ್ಕಳ, ಇಂದ್ರಾಳಿ ಹೆದ್ದಾರಿ ದುಸ್ಥಿತಿ ಗಮನಕ್ಕೆ ಬಂದಿದೆ. ಕೆಳ ಪರ್ಕಳಕ್ಕೆ ಎರಡು ದಿನಗಳ ಹಿಂದೆ ಭೇಟಿ ನೀಡಿ ಎಂಜಿನಿಯರ್‌ಗಳೊಂದಿಗೆ ಚರ್ಚೆ ನಡೆಸಲಾಗಿದೆ. ಸವಾರರಿಗೆ ಸಮಸ್ಯೆಯಾಗದ ರೀತಿಯಲ್ಲಿ ಮಳೆಗಾಲದಲ್ಲಿ ತುರ್ತು ಕಾಮಗಾರಿ ಹೇಗೆ ನಡೆಸಬಹುದು ಎಂಬ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ. ಶೀಘ್ರ ಈ ಬಗ್ಗೆ ಕ್ರಮ ಕೈಗೊಂಡು ತಾತ್ಕಾಲಿಕ ನಿಟ್ಟಿನಲ್ಲಿ ರಸ್ತೆಗಳನ್ನು ವ್ಯವಸ್ಥಿತವಾಗಿಸುವ ಬಗ್ಗೆ ರಾ. ಹೆ. ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದೇನೆ. –ಕೂರ್ಮಾ ರಾವ್‌ ಎಂ., ಉಡುಪಿ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next