Advertisement

SNM ಪಾಲಿಟೆಕ್ನಿಕ್ NSS ನವರಿಂದ ಬಡವರ ಮನೆಗಳಿಗೆ ಕಾಯಕಲ್ಪ

11:14 PM Jun 02, 2023 | Team Udayavani |

ಮೂಡುಬಿದಿರೆ: ಎಸ್‌ಎನ್‌ಎಂ ಪಾಲಿಟೆಕ್ನಿಕ್‌ನ ರಾಷ್ಟ್ರೀಯ ಸೇವಾ ಯೋಜನೆಯವರು ನಾದುರಸ್ತಿಯಾಗಿರುವ , ತೀರಾ ಬಡವರ ಮೂರು ಮನೆಗಳಿಗೆ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಕಾಯಕಲ್ಪ ನೀಡುವ ಮೂಲಕ ರಾ.ಸೇ.ಯೋ. ಆಶಯಗಳ ಒಂದಂಶವನ್ನು ಕಾರ್ಯರೂಪಕ್ಕೆ ತಂದು ಬಡವರ ಕಷ್ಟಕ್ಕೆ ಒದಗಿಬಂದಿದ್ದಾರೆ.

Advertisement

ಎನ್ನೆಸೆಸ್ ಘಟಕದವರು, ಗ್ರಾಮ ಪಂಚಾಯತ್‌ನವರು ಪರಿಶೀಲಿಸಿ ತೋರಿಸಿರುವಂತೆ, ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪಿಗೆಯ ಕುಲ್ಲಂಗಲ್ಲು ವೀರಪ್ಪ ಮೂಲ್ಯ ಹಾಗೂ ಕುಂಗೂರು ಚಾವಡಿ ಮನೆ ರಸ್ತೆಯ ವಾಸು ಹಾಗೂ ಸುನಂದಾ ಇವರ ಮನೆಗಳು ತೀರಾ ಶಿಥಿಲವಾಗಿದ್ದು ಮಳೆಗಾಲದಲ್ಲಿ ಸೋರುತ್ತಿರುವುದನ್ನು ಗಮನಿಸಿದರು.

ಶುಕ್ರವಾರ ಈ ಮನೆಗಳ ಮಾಡಿಗೆ ಟಾರ್ಪಲ್ ಹೊದೆಸಿದರು. ಸಣ್ಣ ಪುಟ್ಟ ವಿದ್ಯುತ್ ಉಪಕರಣದ ದುರಸ್ತಿ ಗೈದರು, ಮನೆಯ ಸುತ್ತಮುತ್ತಲಿನ ಆವರಣ ಸ್ವಚ್ಛಗೊಳಿಸಿದರು.

ಕಾಲೇಜಿನ ಪ್ರಾಂಶುಪಾಲ ಜೆ. ಜೆ. ಪಿಂಟೋ ಹಾಗೂ ಎನ್ನೆಸೆಸ್ ಘಟಕ ಕಾರ್ಯಕ್ರಮಾಧಿಕಾರಿಗಳಾದ ರಾಮ್ ಪ್ರಸಾದ್ ಹಾಗೂ ಗೋಪಾಲಕೃಷ್ಣ ಇವರ ಮಾರ್ಗದರ್ಶನದಲ್ಲಿ , ವಿದ್ಯಾರ್ಥಿ ನಾಯಕರಾದ ಪ್ರಖ್ಯಾತ್ , ರಾಯನ್, ರಿತೇಶ್, ಪ್ರೀತಿ, ಧನುಶ್ರೀ ನೇತೃತ್ವದಲ್ಲಿ ೧೫ ಮಂದಿ ಎನ್ನೆಸೆಸ್ ವಿದ್ಯಾರ್ಥಿಗಳು ೩ ಮನೆಗಳ ಸೇವಾ ಕಾರ್ಯದಲ್ಲಿ ಬಹಳ ಮುತುವರ್ಜಿಯಿಂದ ತೊಡಗಿಸಿಕೊಂಡರು. ಸಾಮಗ್ರಿಗಳಿಗೆ ಸುಮಾರು ೧೩,೦೦೦ ರೂ. ವೆಚ್ಚವಾಗಿದೆ.

ಪಂಚಾಯತ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸದಸ್ಯೆ ಸುಮಾ ಭಟ್ ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಪ್ರವೀಣ್ ಶೆಟ್ಟಿ ಅವರು ದಿನದ ಕಾರ್ಯಕಲಾಪದಲ್ಲಿ ಉಪಾಹಾರ, ಊಟೋಪಚಾರದ ವ್ಯವಸ್ಥೆ ಮಾಡಿದ್ದರು. ವಿದ್ಯಾರ್ಥಿಗಳ ಸೇವಾಕಾರ್ಯದಿಂದ ಫಲಾನುಭವಿಗಳ ಮನಸ್ಸು ತುಂಬಿ ಬಂದಿದೆ; ಆವರೆಲ್ಲ ಈ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸೂಚಿಸಿದ್ದಾರೆ.

Advertisement

ವೀರಪ್ಪ ಮೂಲ್ಯರಿಗೆ ಜಾಗದ ಹಕ್ಕು ಪತ್ರ ಇಲ್ಲ , ತಕರಾರು ಇದೆ. ಪತಿ, ಪತ್ನಿ ಮಾತ್ರ ಇದ್ದಾರೆ, ಬಿಪಿಎಲ್ ಕಾರ್ಡು ಇದೆ, ವೃದ್ಧಾಪ್ಯ ವೇತನ ಬರುತ್ತಿದೆ. ಬೇರೆ ಆದಾಯ ಮೂಲಗಳಿಲ್ಲ.

ವಾಸು ಅವರೂ ಬಿಪಿಎಲ್ ಕಾರ್ಡು ಹೊಂದಿರುವವರು. ಅಪರೂಪಕ್ಕೆ ಕೂಲಿ ಕೆಲಸಕ್ಕೆ ಹೋಗುವ ಸ್ಥಿತಿ ಇದೆ. ಪತ್ನಿ ಬೀಡಿ ಕಟ್ಟುತ್ತಾರೆ, ಪಿಯುಸಿ ಮತ್ತು ಐದನೇ ತರಗತಿಯಲ್ಲಿ ಓದುವ ಮಕ್ಕಳಿದ್ದಾರೆ. ತಾಯಿಗೆ ಅಂಗವಿಕಲರ ವೇತನ ಬರುತ್ತಿದೆ.

ಮೂರನೇ ಮನೆ ಕುಂಗೂರು ಗ್ರಾಮದ ೫ ಸೆಂಟ್ಸ್ ಕಾಲನಿಯ ಸುನಂದಾ ಅವರದ್ದು. ಸುನಂದಾ, ಅವರ ತಮ್ಮ ಸಂಜೀವ ಇಬ್ಬರು ಮಕ್ಕಳಿದ್ದಾರೆ. ಪುತ್ರಿ ಗೇರುಬೀಜ ಕಾರ್ಖಾನೆಗೆ, ಪುತ್ರ ಶಾಲೆಗೆ ಹೋಗುತ್ತಿದ್ದು ಸಂಜೀವ ಕೂಲಿ ಕೆಲಸ ಮಾಡುತ್ತಾರೆ. ಈ ಮನೆಗೆ ಹಕ್ಕು ಪತ್ರ ಇಲ್ಲ, ಹಾಗಾಗಿ ಪಂಚಾಯತ್ ಸೌಲಭ್ಯಗಳಿಲ್ಲ. ಸಣ್ಣ ಗುಡಿಸಲು ಇದೆ, ಸೂರು ಸೋರುತ್ತಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next