ಕುಂದಗೋಳ: ಇಲ್ಲಿನ ತಾಲೂಕಾಸ್ಪತ್ರೆಗೆ ಚಿಕಿತ್ಸೆಗೆ ರೋಗಿಗಳು ಬಂದರೆ ಗುಣಮುಖವಾಗುವುದಕ್ಕಿಂತ ರೋಗ ಮತ್ತಷ್ಟು ಉಲ್ಬಣವಾಗುವಷ್ಟು ಗಬ್ಬು ನಾರುತ್ತಿದೆ. ಯಾತಕಪ್ಪಾ ಈ ಆಸ್ಪತ್ರೆಗೆ ಬಂದೆ ಎಂದು ರೋಗಿಗಳು ಹಿಡಿಶಾಪ ಹಾಕುತ್ತಿದ್ದಾರೆ.
ಅವ್ಯವಸ್ಥೆ ಆಗರ: ಬೆಡ್‌ಗಳ ಸ್ಥಿತಿಯಂತೂ ದೇವರಿಗೇ ಪ್ರೀತಿ ಎಂಬಂತಾಗಿದೆ. ಹರಕು ಮುರುಕಿನ ಬೆಡ್‌ಗಳನ್ನೇ ರೋಗಿಗಳು ಸರಿಪಡಿಸಿಕೊಂಡು ಮಲಗುತ್ತಿದ್ದಾರೆ. ಮೇಲು ಹೊದಿಕೆಯೂ ಸಹ ಇಲ್ಲದ್ದರಿಂದ ರೋಗಿಗಳೇ ಮನೆಯಿಂದ ತಂದು ಹಾಕಿಕೊಳ್ಳುವಂತಾಗಿದೆ. ಶೌಚಾಲಯದ ಕಥೆಯಂತೂ ಹೇಳತೀರದು. ನಲ್ಲಿಯಲ್ಲಿ ನೀರು ಬಾರದೇ ಇರುವುದಿಂದ ಇದೀ ಶೌಚಾಲಯವೇ ಗಬ್ಬೆದ್ದು ಹೋಗಿದೆ. ಹೀಗಾಗಿ ಒಳರೋಗಿಗಳು ಹಾಗೂ ಬಾಣಂತಿಯರ ಪಾಡು ನರಕಸದೃಶವಾಗಿದೆ. ಆಸ್ಪತ್ರೆಯ ಆವರಣವೇ ಇದೀಗ ಮೂತ್ರ ವಿಸರ್ಜನೆ ತಾಣವಾಗಿದೆ.
ನೂರಲ್ಲ ಐವತ್ತೇ: 2016ರ ನ. 27ರಂದು ಅಂದಿನ ಆರೋಗ್ಯ ಸಚಿವರಾದ ರಮೇಶ ಕುಮಾರ ಹಾಗೂ ಅಂದಿನ ಶಾಸಕರಾದ ಸಿ.ಎಸ್. ಶಿವಳ್ಳಿಯವರು ಸಮುದಾಯ ಆರೋಗ್ಯ ಕೇಂದ್ರದಿಂದ ತಾಲೂಕಾಸ್ಪತ್ರೆಯಾಗಿ 100 ಹಾಸಿಗೆಗೆ ಮೇಲ್ದರ್ಜೆಗೇರಿಸಿ ಉದ್ಘಾಟಿಸಿದ್ದರು. ಆದರೆ ಇದುವರೆಗೂ 100 ಹಾಸಿಗೆಯ ಆಸ್ಪತ್ರೆಯಾಗದೆ 50 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರವಾಗಿಯೇ ಉಳಿದುಕೊಂಡಿರುವುದು ವಿಪರ್ಯಾಸ.
Advertisement
ಆಸ್ಪತ್ರೆಯ ಒಳಗೆ ಪ್ರವೇಶಿಸುತ್ತಿದ್ದಂತೆ ಬಡಿಯುವ ದುರ್ನಾತವು ಎಂತಹವರನ್ನೂ ಹೊರ ಹೋಗುವಂತೆ ಮಾಡುತ್ತದೆ. ಇದರ ಮಧ್ಯೆಯೇ ಬಡ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವುದು ವಿಪರ್ಯಾಸವಾಗಿದೆ. ಎಲ್ಲೆಂದರಲ್ಲಿಯೇ ಗಲೀಜು, ಗಬ್ಬುನಾತ ಬೀರುತ್ತಿರುವುದರಿಂದ ಗರ್ಭಿಣಿಯರು, ಒಳರೋಗಿಗಳು ಸೊಳ್ಳೆಗಳ ಕಾಟದಿಂದ ಬೇಸತ್ತು ಹೋಗಿದ್ದಾರೆ.
Related Articles
Advertisement
ನಮ್ಮ ಸರ್ಕಾರಗಳು ಕೇವಲ ಉದ್ಘಾಟನೆ ಮಾಡಿದರೆ ಸಾಲದು, ಎಲ್ಲ ಸೌಲಭ್ಯಗಳನ್ನು ನೀಡಿದಾಗ ಮಾತ್ರ ಉದ್ಘಾಟನೆಗೆ ಅರ್ಥ ಬರುತ್ತದೆ. 100 ಬೆಡ್‌ನ ತಾಲೂಕಾಸ್ಪತ್ರೆಯಾಗಿ ಉದ್ಘಾಟನೆಗೊಂಡು 3 ವರ್ಷ ಕಳೆದರೂ ಸಹ ಇನ್ನೂ 50 ಬೆಡ್‌ನ ಸಮುದಾಯ ಆರೋಗ್ಯ ಕೇಂದ್ರವಾಗಿಯೇ ಇದೆ. ಅಲ್ಲದೇ ಡಿ ದರ್ಜೆ ನೌಕರರ 33 ಮಂಜೂರು ಹುದ್ದೆಗಳಲ್ಲಿ ಈಗ ಇದ್ದಿದ್ದು ಮೂವರು ಮಾತ್ರ!
ನಮ್ಮ ಕಷ್ಟಾನಾ ಯಾರಹತ್ರ ಹೇಳಬೇಕ್ರಿ. ಒಂದಕ್ಕ ಎರಡಕ್ಕ ಎಲ್ ಹೋಗಬೇಕ್ರಿ, ನಾವು ಯಾತಕಾಗಿ ಈ ಆಸ್ಪೆತ್ರೆಗೆ ಬಂದೆವೋ ಅನ್ಸಾಕತ್ತೇತಿ. ನಾವೇ ನಮ್ಮ ಸ್ಥಳದ ಕಸ ಗುಡಿಸಿಕೊಳ್ಳಬೇಕ್ರಿ.• ಕವಿತಾ ಪಾಟೀಲ,ಹಿರೇಹರಕುಣಿ
ಎರಡು ದಿನ ಆತ್ರಿ ನನ್ನ ಹೆರಿಗೆ ಆಗಿ. ಬಿಸಿನೀರು ಇಲ್ಲ. ನಮ್ಮ ಮನೆಯವರು ಅಲ್ಲಿ ಇಲ್ಲಿ ಹೋಗಿ ಬಿಸಿನೀರು ತರ್ತಿದಾರ. ಸೊಳ್ಳೆಗಳ ಕಾಟದಿಂದ ಮಗು ರಕ್ಷಿಸಿಕೊಳ್ಳುವುದೇ ಕಷ್ಟ ಆಗೇತ್ರಿ. ಸೊಳ್ಳೆ ಪರದೆಯನ್ನು ಸಹ ಕೊಡತಿಲ್ರಿ.• ಯಲ್ಲಮ್ಮ ಕಲ್ಲೂರ, ಬಾಣಂತಿ
ನೂರು ಹಾಸಿಗೆಯ ಆರೋಗ್ಯ ಕೇಂದ್ರವನ್ನಾಗಿ ಘೋಷಿಸಿದ್ದಾರೆ. ಇನ್ನೂ ಅನೇಕ ಸೌಲಭ್ಯಗಳು ಬರಬೇಕಿದ್ದು, ಸರ್ಕಾರದ ಮಟ್ಟದಲ್ಲಿ ಒಂದೊಂದಾಗಿ ನೀಡುತ್ತಿದ್ದಾರೆ. ಡಿ ದರ್ಜೆ ನೌಕರರ ಕೊರತೆಯಿಂದ ಸ್ವಚ್ಛತೆ ಸ್ವಲ್ಪ ತೊಂದರೆಯಾಗಿದೆ.• ಪ್ರಭುಲಿಂಗ ಮಾನಕರ, ತಾಲೂಕು ವೈದ್ಯಾಧಿಕಾರಿ
ರೋಗಿಗಳ ಗೋಳು-ಕೇಳುವವರು ಯಾರು?:
ಮಂಗಳವಾರ ಬೆಳಗ್ಗೆ 10ಗಂಟೆಗೆ ಚಿಕಿತ್ಸೆಗೆ ಆಗಮಿಸಿದ್ದ ನೀಲವ್ವ ಸುರೇಬಾನ ಅವರು ಕಾಯಿಲೆಯಿಂದ ವಿಪರೀತ ಬಳಲುತ್ತಿದ್ದು, ಆ ತಪಾಸಣೆ ಈ ತಪಾಸಣೆ ಮಾಡಿಸಿಕೊಂಡ ಬಂದಮೇಲೆ ಅಡಮಿಟ್ ಮಾಡಕೋತಿವಿ ಅನ್ನುತ್ತಿದ್ದಾರೆ ಎಂದು ನೆಲದ ಮೇಲೆ ಪೇಪರ್ ಹಾಕಿಕೊಂಡು ಮಲಗಿದ್ದಲ್ಲಿಯೇ ಗದ್ಗರಿತರಾದರು. ಇದು ಚಿಕಿತ್ಸೆಗಾಗಿ ಬರುವ ರೋಗಿಗಳ ಗೋಳಾದರೆ, ಇನ್ನು ಆಸ್ಪತ್ರೆಯ ಕಥೆಯೇ ಬೇರೆಯಾಗಿದೆ.
ಅಗತ್ಯ ನೌಕರರಿಲ್ಲ; ಆಡಳಿತಾಧಿಕಾರಿಯ ಅಸಹಾಯಕತೆ
100 ಹಾಸಿಗೆಯ ಸೌಲಭ್ಯವಿಲ್ಲ. ಇನ್ನೂ 50 ಹಾಸಿಗೆಯ ಆಸ್ಪತ್ರೆಯಾಗಿದೆ. ಡಿ ದರ್ಜೆ ನೌಕರರು ಇಲ್ಲದೇ ಇರುವುದರಿಂದ ಆಸ್ಪತ್ರೆಯ ಸ್ಥಿತಿ ಈ ರೀತಿ ಆಗಿದೆ. ಏನು ಮಾಡಬೇಕೆಂಬುದೇ ತಿಳಿಯುತ್ತಿಲ್ಲ ಎಂದು ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ| ಭಾಗೀರಥಿ ಅಸಹಾಯಕತೆ ವ್ಯಕ್ತಪಡಿಸಿದರು. ಡಿ ದರ್ಜೆಯ 33 ಹುದ್ದೆಗಳಿದ್ದು, ಕೇವಲ 3 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ 10 ಜನರ ಟೆಂಡರ್ ಮುಗಿದಿರುವುದರಿಂದ ಅವರುಕೆಲಸಕ್ಕೆ ಬರುತ್ತಿಲ್ಲ. ಮರು ಟೆಂಡರನ್ನು ಜಿಲ್ಲಾ ವೈದ್ಯಾಧಿಕಾರಿಗಳೇ ಕರೆಯಬೇಕಾಗಿದ್ದು, ಅವರ ಜೊತೆ ಈಗಾಗಲೇ ಸಮಾಲೋಚಿಸಿದ್ದೇವೆ. ಇನ್ನು 20 ನರ್ಸ್‌ಗಳಿರಬೇಕಾಗಿದ್ದು, 14 ಜನ ಮಾತ್ರ ಇದ್ದಾರೆ. ಇದರಲ್ಲಿಯೇ ಮೂರು ಪಾಳಿ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ಸ್ಪಲ್ಪ ಅಸ್ತವ್ಯಸ್ತ ಆಗುತ್ತಿದೆ ಎಂದು ಹೇಳಿದರು.
• ಶೀತಲ ಮುರಗಿ