ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಕಳಪೆ ಊಟ ಪೂರೈಸಿದ್ದ ಆರೋಪದಡಿ ಗಾಯತ್ರಿ ವಿಹಾರದ ಶಾರದಾ ಕ್ಯಾಟರಿಂಗ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಮೊಸರನ್ನದಲ್ಲಿ ಹುಳು ಪತ್ತೆಯಾಗಿತ್ತು. ಕಳಪೆ ಊಟ ಪೂರೈಸಿದ್ದ ಆರೋಪದಡಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಳ್ಳಲಾಗಿತ್ತು. ನ್ಯಾಯಾಲಯದ ಸೂಚನೆಯಂತೆ ಇದೀಗ ಎಫ್ ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಅ.20ರಂದು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ್ ತಂಡಗಳ ನಡುವೆ ಕ್ರಿಕೆಟ್ ಪಂದ್ಯವಿತ್ತು. ಭದ್ರತೆಗಾಗಿ 970 ಪೊಲೀಸರನ್ನು ನಿಯೋಜಿಸಲಾಗಿತ್ತು. ಕರ್ತವ್ಯನಿರತ ಪೊಲೀಸರಿಗೆ ಊಟದ ವ್ಯವಸ್ಥೆ ಮಾಡಿದ್ದ ಕ್ರೀಡಾಂಗಣದ ಆಡಳಿತ ಮಂಡಳಿ, ಊಟ ಸರಬರಾಜು ಹೊಣೆಯನ್ನು ಕಾರ್ಯಕ್ರಮ ಸಂಘಟನಾ ಸಂಸ್ಥೆಯೊಂದಕ್ಕೆ ವಹಿಸಿದ್ದರು. ಊಟ ತಯಾರಿಸಿ ವಿತರಿಸುವ ಜವಾಬ್ದಾರಿಯನ್ನು ಅರಮನೆ ಮೈದಾನ ಗಾಯತ್ರಿ ವಿಹಾರದ ಶಾರದಾ ಕ್ಯಾಟರಿಂಗ್ ವಹಿಸಿದ್ದರು. ಹೀಗಾಗಿ ಪೊಲೀಸರಿಗೆ ಮೆಂತ್ಯಾ ಬಾತ್, ಮೊಸರನ್ನ, ಬಾಳೆ ಹಣ್ಣುಗಳನ್ನು ನೀಡಲಾಗಿತ್ತು. ಊಟ ಮಾಡುವ ಸಂದರ್ಭದಲ್ಲಿ ಮೊಸರನ್ನದಲ್ಲಿ ಹುಳು ಕಂಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೊಲೀಸ್ ಸಿಬ್ಬಂದಿ ಬೇಸರಗೊಂಡಿದ್ದರು. ಅಲ್ಲದೆ, ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದರು. ಆದರೆ, ಒತ್ತಡದ ಮೇರೆಗೆ ಎನ್ ಸಿಆರ್ ದಾಖಲಿಸಿದ್ದರು. ಆದರೆ, ಕೋರ್ಟ್‌ಗೆ ಸಲ್ಲಿಸಿದ್ದ ಖಾಸಗಿ ಅರ್ಜಿಯೊಂದರ ಸಂಬಂಧ ಕೋರ್ಟ್ ಸೂಚನೆ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.