Advertisement

ಕಳಪೆ ಆಹಾರ ಪೂರೈಕೆ: ಆರೋಪ

11:58 AM Sep 14, 2017 | |

ಸಾಗರ: ಅಂಗನವಾಡಿಗಳಲ್ಲಿ ಪೂರೈಕೆ ಮಾಡುತ್ತಿರುವ ಆಹಾರ ಧಾನ್ಯಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ನಾಲ್ಕೈದು ಅಂಗನವಾಡಿಗಳಿಗೆ ಭೇಟಿ ನೀಡಿದಾಗ ಮೇಲ್ನೋಟಕ್ಕೇ ಇದು ಗಮನಕ್ಕೆ ಬಂದಿದೆ. ಒಂದು ಕೆಜಿ ಬೇಳೆಯಲ್ಲಿ 200 ಗ್ರಾಂಗಳಷ್ಟು ಹುಳುಗಳೇ ತುಂಬಿವೆ. ಈ ಆಹಾರವನ್ನು ಸೇವಿಸಿದರೆ ಅದು ಮಕ್ಕಳು ಹಾಗೂ ಗರ್ಭಿಣಿಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಾಲೂಕು ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಅಶೋಕ ಬರದವಳ್ಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

Advertisement

ನಗರದ ತಾಪಂ ಸಾಮರ್ಥ್ಯಸೌಧದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಅಂಗನವಾಡಿ ಆಹಾರ ವಿಷಯ ಪ್ರಸ್ತಾಪಿಸಿ, ಆನಂದಪುರದ ಮಲ್ಲಂದೂರಿನ ಎಂಸಿಪಿಸಿ ಘಟಕ ನಮ್ಮಿಂದ ಇಂತಹ ಆಹಾರ ಸರಬರಾಜಾಗಿಲ್ಲ ಎನ್ನುತ್ತಾರೆ. ಅಧಿಕಾರಿಗಳನ್ನು ಕೇಳಿದಾಗ ಸಾಗರ ಮತ್ತು ಸೊರಬ ತಾಲೂಕಿನ ಎಲ್ಲ ಅಂಗನವಾಡಿಗಳಿಗೆ ಅದೇ ಘಟಕದಿಂದಲೇ ಆಹಾರ ಪೂರೈಕೆ ಮಾಡಲಾಗುತ್ತಿದೆ
ಎನ್ನುತ್ತಿದ್ದಾರೆ. ಘಟಕದವರು ಅಧಿಕಾರಿಗಳು ಬೇರೆ ಕಡೆಗಳಿಂದ ಆಹಾರ ತರಿಸಿ ಪೂರೈಕೆ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಮಕ್ಕಳಿಗೆ ನಡೆಯುತ್ತಿರುವ ದ್ರೋಹ ಕುರಿತಾಗಿ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಬೆಂಬಲಿಸಿ ಮಾತನಾಡಿದ ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ, ದೂರದ ಆನಂದಪುರದ ಮಲ್ಲಂದೂರಿನಲ್ಲಿ ಘಟಕ ಇರುವುದರಿಂದ ಅದರ ಬಗ್ಗೆ ನಿಗಾ ವಹಿಸಲು ಸಾಧ್ಯವಾಗುವುದಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸುಲಭ ಲಭ್ಯವಿರುವ ಕಾರಣ ಸಾಗರ ನಗರದಲ್ಲಿಯೇ ಈ ಘಟಕ ಕಾರ್ಯನಿರ್ವಹಿಸಲು ಸ್ಥಳಾಂತರವಾಗಬೇಕು ಎಂದು ಸಲಹೆ ನೀಡಿದರು. 

ಸದಸ್ಯೆ ಜ್ಯೋತಿ ಮಾತನಾಡಿ, ಆನಂದಪುರ ಘಟಕದಿಂದ ಕಳಪೆ ಆಹಾರಧಾನ್ಯಗಳನು ಪೂರೈಕೆ ಮಾಡುತ್ತಿರುವುದು ಸತ್ಯವಾದ ಘಟನೆ. ಈ ಹಿಂದೆ 2014ರಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕೂಡ ಈ ಕುರಿತು ನಕಾರಾತ್ಮಕ ವರದಿ ನೀಡಿತ್ತು. ಆದರೆ ಘಟಕವನ್ನು ಸಾಗರಕ್ಕೆ ಸ್ಥಳಾಂತರಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ  ಎಂದರು. ಸದಸ್ಯರ ತನಿಖಾ ತಂಡವನ್ನು ರಚನೆ ಮಾಡಿ, ತಾಲೂಕಿನ ಎಲ್ಲ ಅಂಗನವಾಡಿಗಳಿಗೆ ತಾವು ಸೇರಿದಂತೆ ಸದಸ್ಯರ ತಂಡ ಖುದ್ದು ಪರಿಶೀಲನೆ ನಡೆಸಲಾಗುತ್ತದೆ. ಇದಕ್ಕೆ ಕಾರಣವಾದ ಅಧಿಕಾರಿಗಳು ಹಾಗೂ ಘಟಕದ ಪ್ರಮುಖರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು. 

ಇರುವಕ್ಕಿಯಲ್ಲಿ ನಡೆಯುತ್ತಿರುವ ಕೃಷಿ ವಿವಿ ಕಟ್ಟಡಗಳ ನಿರ್ಮಾಣದಲ್ಲಿ ಚೆನ್ನರಾಯಪಟ್ಟಣದಿಂದ ಬೇರೆ ಕಾಮಗಾರಿಗಾಗಿ ಬಂದಿದ್ದ ಮರಳಿನ ದುರ್ಬಳಕೆ ನಡೆದಿದೆ. ಬಡ ಜನರ ಗೃಹ ನಿರ್ಮಾಣಕ್ಕೂ ಕೊಡದ ಈ 300 ಲೋಡ್‌ ಮರಳಿನಲ್ಲಿ 30ರಿಂದ 40 ಲೋಡ್‌ ವಿವಿ ನಿರ್ಮಾಣ ಕಾಮಗಾರಿಗಳಿಗಾಗಿ ಕಾನೂನುಬಾಹಿರವಾಗಿ ಬಳಕೆಯಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಜ್ಯೋತಿ ಆಗ್ರಹಿಸಿದರು.

Advertisement

ನೆಡುತೋಪು ಹಗರಣ ಕುರಿತು ಸಮರ್ಪಕವಾದ ತನಿಖೆ ನಡೆಯುತ್ತಿಲ್ಲ. ಸಭೆಯಲ್ಲಿ ಹಲವು ಬಾರಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ತಾಪಂ ಸಭೆಯಲ್ಲಿ ನಡೆಯುವ ಸಭೆ ನೆಪಮಾತ್ರಕ್ಕೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ
ಎಂದು ವಿಪಕ್ಷ ಸದಸ್ಯರಾದ ಕಲಸೆ ಚಂದ್ರಪ್ಪ, ಸುವರ್ಣ ಟೀಕಪ್ಪ, ದೇವೇಂದ್ರಪ್ಪ, ರಘುಪತಿ ಭಟ್‌ ಇನ್ನಿತರರು ಆಕ್ರೋಶ ವ್ಯಕ್ತಪಡಿಸಿದರು. ಉಪಾಧ್ಯಕ್ಷ ಎಚ್‌. ಕೆ. ಪರಶುರಾಮ್‌, ಕಾರ್ಯನಿರ್ವಾಹಣಾಧಿಕಾರಿ ಡಾ| ಎಸ್‌. ಕಲ್ಲಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಕೇಳಿ ಗೌರವ ಪಡೆಯುವುದು ಎಷ್ಟು ಸರಿ?
ಸಾಗರ: ತಾಪಂನ ಸಾಮಾನ್ಯ ಸಭೆ ತಾಲೂಕಿನ ವಿವಿಧ ಕಾರ್ಯಕ್ರಮಗಳಿಗೆ ತಮಗೆ ಆಹ್ವಾನ ಬಂದಿಲ್ಲ, ಅಧಿಕಾರಿಗಳು ತಮಗೆ ಗೌರವ ಕೊಟ್ಟಿಲ್ಲ, ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರಿಲ್ಲ ಎಂಬ ತಗಾದೆಗಳಿಗೇ ಹೆಚ್ಚಿನ ಸಮಯ ವ್ಯಯವಾಗುವುದು ಈ ಸಭೆಯಲ್ಲೂ ಮುಂದುವರಿದಿತ್ತು. ತಡಗಡಲೆ ಆರೋಗ್ಯ ಇಲಾಖೆ ಕಟ್ಟಡ ಉದ್ಘಾಟನೆಗೆ ಕರೆ ಬಂದಿಲ್ಲ ಎಂದು ಕಲಸೆ ಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿ, ಸಹಸದಸ್ಯರು ಮೇಜು ತಟ್ಟಿ ತಮ್ಮ ಮಾತು ಬೆಂಬಲಿಸಬೇಕು ಎಂದು ಆಹ್ವಾನಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್‌ ಬರದವಳ್ಳಿ, ಕಾರ್ಯಕ್ರಮದ ಪಟ್ಟಿಯಲ್ಲಿ ತಮ್ಮ ಹುದ್ದೆ ಸಹಿತ ಹೆಸರು ಮುದ್ರಿಸಬೇಕು. ತಾಪಂ ಸದಸ್ಯರು ಎಂದು ಆಹ್ವಾನ ಪತ್ರಿಕೆಯ ತಳಭಾಗದಲ್ಲಿ ಮುದ್ರಿಸುವುದು ಸರಿಯಲ್ಲ. ಬಿಇಒ ಈ ವ್ಯತ್ಯಯ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಣಯ ಆಗಬೇಕು ಎಂದು ಆಗ್ರಹಿಸಿದರು. ಇನ್ನು ಮುಂದೆ ಇಂತಹ ವಿಚಾರಕ್ಕೆ ಪ್ರತ್ಯೇಕ ಸಭೆ ಕರೆದು ಜನಪರ ವಿಚಾರ ಚರ್ಚೆಗೆ ಮಾತ್ರ ಸಾಮಾನ್ಯ ಸಭೆಯನ್ನು ಮೀಸಲಿರಿಸಬೇಕು ಎಂಬ ಮಾತೂ ಕೇಳಿಬಂತು. ಒಂದು ಹಂತದಲ್ಲಿ ಸದಸ್ಯೆ ಆನಂದಿ ಲಿಂಗರಾಜ್‌ ಮಾತನಾಡಿ, ನಾವೇ ನಮ್ಮ ಬಗ್ಗೆ ಹೇಳಿಕೊಂಡು ಗೌರವ, ಆಹ್ವಾನ ಪಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next