Advertisement

ನೀರು ಶುದ್ಧೀಕರಣಕ್ಕೆ ಕಳಪೆ ರಾಸಾಯನಿಕ

04:32 PM May 06, 2017 | Team Udayavani |

ವಾಡಿ: ಪಟ್ಟಣದ ಜನತೆಗೆ ಪೂರೈಸುವ ಕುಡಿಯುವ ನೀರನ್ನು ಶುದ್ಧೀಕರಿಸಲು ಅವಧಿ ಮುಗಿದ ವಿಷಕಾರಿ, ಕಳಪೆ ರಸಾಯನಿಕ ಬಳಕೆ ಮಾಡಲಾಗುತ್ತಿದೆ ಎಂದು ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಶ್ರವಣಕುಮಾರ ಮೌಸಲಗಿ ಆರೋಪಿಸಿದ್ದಾರೆ. 

Advertisement

ಪಟ್ಟಣದ ಪುರಸಭೆಗೆ ಸೇರಿದ ಕುಂದನೂರು ಸಮೀಪದ ಭೀಮಾ ನದಿ ದಡದಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ ದಲಿತ ಸೇನೆ ಕಾರ್ಯಕರ್ತರು, ಘಟಕದ ಗೋದಾಮುಗಳಲ್ಲಿ ಸಂಗ್ರಹಿಸಲಾಗಿದ್ದ ಬ್ಲೀಚಿಂಗ್‌ ಪೌಡರ್‌, ಆಲಂ ಸೇರಿದಂತೆ ಇನ್ನಿತರ  ರಸಾಯನಿಕ ವಸ್ತುಗಳ ದಾಸ್ತುನಗಳನ್ನು ಪರಿಶೀಲಿಸಿದ್ದರು.

ಈ ವೇಳೆ ಅವಧಿ ಮುಗಿದ ರಾಸಾಯನಿಕ ಚೀಲಗಳು ಮತ್ತು ಸತ್ವ ಕಳೆದುಕೊಂಡ ಶ್ವೇತ ವರ್ಣದ ಪೌಡರ್‌  ಪತ್ತೆಯಾಗಿತ್ತು. ಇದನ್ನೇ ಬ್ಲೀಚಿಂಗ್‌ ಪೌಡರ್‌ ಎಂದು ನೀರು ಶುದ್ಧೀಕರಣಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ದಲಿತ ಸೇನೆ ಮುಖಂಡರು ದೂರಿದ್ದಾರೆ. 

ಕೋಟ್ಯಂತರ ರೂ. ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದ್ದು, ಇದರ ನಿರ್ವಹಣೆಗೆ ಪ್ರತಿ ವರ್ಷ ಲಕ್ಷಾಂತರ ರೂ. ಖರ್ಚು ಭರಿಸಲಾಗುತ್ತಿದೆ. ಇಷ್ಟಾದರೂ ಜನತೆಗೆ ಶುದ್ಧ ನೀರು  ಸರಬರಾಜು ಮಾಡುವಲ್ಲಿ ಪುರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ.

ಅವಧಿ ಮುಗಿದ ರಸಾಯನಿಕಗಳನ್ನು ಘಟಕದಲ್ಲಿಟ್ಟು ಜನತೆಗೆ ಮೋಸ ಮಾಡಲಾಗುತ್ತಿದೆ.  ನೀರು ಶುದ್ದೀಕರಿಸದೆ ನದಿ ನೀರನ್ನೇ ನೇರವಾಗಿ ಜನರಿಗೆ ತಲುಪಿಸಲಾಗುತ್ತಿದೆ. ಪರಿಣಾಮ ಜನರು ರೋಗರುಜಿನುಗಳಿಂದ ಬಳಲುವಂತಾಗಿದೆ. ಘಟಕದ ನಿರ್ವಹಣೆಗೆ ಖರ್ಚು  ಮಾಡಲಾಗುತ್ತಿರುವ ಸಾರ್ವಜನಿಕರ ಹಣ ಅಧಿಕಾರಿಗಳ ಜೇಬಿಗೆ ಸೇರುತ್ತಿದೆ ಎಂದು ಆರೋಪಿಸಿದ್ದಾರೆ.

Advertisement

ಈ ಕುರಿತು ಮೇಲಾಧಿಕಾರಿಗಳು ತನಿಖೆ ಕೈಗೊಂಡು ಪುರಸಭೆ  ಅಧಿ ಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಅಲ್ಲದೆ ಜನತೆಗೆ ಕುಡಿಯಲು ಶುದ್ಧ ನೀರು ಪೂರೈಸಬೇಕು ಎಂದು ಶ್ರವಣಕುಮಾರ ಮೌಸಲಗಿ, ರಘುವೀರ ಪವಾರ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next