ಕಾಳಗಿ: ಪಟ್ಟಣ ಪಂಚಾಯಿತಿ ವತಿಯಿಂದ ಇಲ್ಲಿನ ವಿವಿಧ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಲುವೆ ಕಾಮಗಾರಿಗಳು ನಡೆಯುತ್ತಿದ್ದು, ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ ಎಂದು ಸ್ಥಳೀಯರಾದ ಸಂತೋಷ ಪತಂಗೆ, ಬಾಬು ನಾಟೀಕಾರ ಇನ್ನಿತರರು ಸ್ಥಳದಲ್ಲೇ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದು, ಕಾಮಗಾರಿಗಳು ಅಗತ್ಯವಿರುವ ಸ್ಥಳವನ್ನು ಬಿಟ್ಟು ಅನಗತ್ಯ ಸ್ಥಳಗಳಲ್ಲಿ ಕೆಲಸ ಮಾಡಿಸುತ್ತ ಸರ್ಕಾರದ ಹಣ ಲೂಟಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಪಕ್ಕದ ತಿಪ್ಪಣ್ಣ ತೆಂಗಳಿ ಅವರ ಮನೆಯಿಂದ ನಿಂಗಣ್ಣ ಕಲಶೆಟ್ಟಿ ಅವರ ಮನೆ ವರೆಗಿನ ರಸ್ತೆ, ಬನಶಂಕರಿ ದೇವಿ ದೇವಸ್ಥಾನದ ಎದುರಿನ ರಸ್ತೆಗಳ ನಿರ್ಮಾಣದಲ್ಲಿ ಸಾಕಷ್ಟು ರೇತಿ ಬಳಸದೇ ಕಂಕರ್ ಭೂಸಾ ಮಾತ್ರ ಹೆಚ್ಚು ಬಳಸಿ ಗುತ್ತಿಗೆದಾರರು ರಸ್ತೆ ನಿರ್ಮಿಸಿದ್ದಾರೆ. ಕಾಮಗಾರಿ ಮುಗಿದ ಒಂದೇ ವಾರದಲ್ಲಿ ಕಂಕರ್ ಕಿತ್ತಿ ಬರುತ್ತಿದ್ದು, ಅಲ್ಲಲ್ಲಿ ತಗ್ಗು ಬಿದ್ದು ನೀರು ನಿಲ್ಲುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಹುತೇಕ ಕಡೆಗಳಲ್ಲಿ ರಸ್ತೆ ಮೇಲೆ ರಸ್ತೆ ನಿರ್ಮಿಸಲಾಗಿದೆ. ಮೊದಲಿದ್ದ ಸಿಸಿ ರಸ್ತೆಯಲ್ಲಿ ಕೆಲವೆಡೆ ಬಚ್ಚಲು ನೀರು ಹೋಗಲು ತಗ್ಗು ತೋಡಲಾಗಿತ್ತು. ಈಗ ಅದೇ ರಸ್ತೆ ಮೇಲೆ ಕಳೆದ ವಾರದ ಹಿಂದೆ ಹೊಸ ಸಿಸಿ ರಸ್ತೆಯನ್ನು ಕಾಟಚಾರಕ್ಕೆ ಎಂಬತೆ ಮಾಡಿದ್ದಾರೆ ಎಂದು ಕಿಡಿಕಾರಿದರು. ಕಳಪೆ ಕಾಮಗಾರಿಯಿಂದ ನೀರು ನಿಲ್ಲುತ್ತಿದ್ದ ರಸ್ತೆಯ ಗುಂಡಿಗಳನ್ನು ಭರ್ತಿ ಮಾಡಿಸುತ್ತಿದ್ದ ಗುತ್ತಿಗೆದಾರರೊಂದಿಗೆ ವಾಗ್ವಾದ ಮಾಡಿದ ಸ್ಥಳೀಯ ನಿವಾಸಿಗಳು ಇಂಥ ಕಳಪೆ ಕಾಮಗಾರಿಗಳು ನಮಗೆ ಬೇಕಾಗಿಲ್ಲ. ಮಾಡುವುದಿದ್ದರೆ ಗುಣಮಟ್ಟದ ಕೆಲಸ ಮಾಡಿಸಿ, ಇಲ್ಲದಿದ್ದರೆ ಬೇಡವೇ ಬೇಡ ಎಂದು ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ತಡೆದು ಪ್ರತಿಭಟನೆ ನಡೆಸಿದರು. ಕಾಮಗಾರಿಯ ನೀಲಿ ನಕಾಶೆ ನಮಗೆ ತೋರಿಸಿ ಅದರಂತೆಯೇ ಕೆಲಸ ಮಾಡಿಸುವಂತೆ ಆಗ್ರಹಿಸಿದರು.