ನಂಜನಗೂಡು: ಕಪ್ಪು ಹಣವನ್ನೆಲ್ಲವನ್ನು ಪತ್ತೆ ಹಚ್ಚಿ ದೇಶದ ಬಡವರ ಬ್ಯಾಂಕ್ ಖಾತೆಗಳಿಗೆ ನೀಡುವುದಾಗಿ ಘೋಷಿಸಿದ ಮೋದಿಯವರೇ ಈ ಹಣ ಏನಾಯಿತು ಎಂದು ವರುಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಯತೀಂದ್ರ ಪ್ರಶ್ನಿಸಿದರು.
ವರುಣಾ ಕ್ಷೇತ್ರದ ಕುಪ್ಪರವಳ್ಳಿ, ಕನಕನಗರ, ಕಿರುಗುಂದ ಮುಂತಾದ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತಯಾಚಿಸಿದ ಅವರು, 15 ಲಕ್ಷ ರೂ. ಇರಲಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾದರೂ 15 ಪೈಸೆಯನ್ನೂ ಬಡವರ ಖಾತೆಗೆ ನೀಡದ ಮೋದಿ ಸರ್ಕಾರದಿಂದ ಜನರಿಗೆ ಏನು ಅಭಿವೃದ್ಧಿಯಾಗಲಿದೆ ಎಂದು ಕೇಂದ್ರ ಸರ್ಕಾರವನ್ನು ಯತೀಂದ್ರ ಟೀಕಿಸಿದರು.
ಸುಳ್ಳನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಇದೇ 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೇ ಪಾಠ ಕಲಿಸಲು ಕನ್ನಡಿಗರು ಸಿದ್ಧವಾಗಿದ್ದಾರೆ.
ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಕಳೆದ ಚುನಾವಣೆಯಲ್ಲಿ ಜನತೆಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದಾರೆ. ಐದು ವರ್ಷಗಳ ಕಾಂಗ್ರೆಸ್ ಸರ್ಕಾರ ಬಡವರ ಸಂಕಷ್ಟಗಳನ್ನು ಈಡೇರಿಸಿದ್ದು ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜು, ಜಿಪಂ ಮಾಜಿ ಅದ್ಯಕ್ಷ ಧರ್ಮೇಂದ್ರ ರಾಜು, ತಾಪಂ ಉಪಾಧ್ಯಕ್ಷ ಹೆಜ್ಜಿಗೆ ಗೋವಿಂದರಾಜನ್, ತಾಪಂ ಮಾಜಿ ಅಧ್ಯಕ್ಷ ಚಾಮರಾಜು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ, ಬಿಳಿಗೆರೆ ಗ್ರಾಪಂ ಅಧ್ಯಕ್ಷ ಲಿಂಗಣ್ಣ, ಎಪಿಎಂಸಿ ಸದಸ್ಯ ಬಸವರಾಜು ಮತ್ತಿತರರು ಹಾಜರಿದ್ದರು.