Advertisement

ದುರುಗಮ್ಮನ ಜಾತ್ರೆಯಲ್ಲಿ ಭಕ್ತರ ಮೇಲೆ ಪೂಜಾರಿ ನಡಿಗೆ!

07:03 AM Jan 07, 2019 | Team Udayavani |

ಹರಪನಹಳ್ಳಿ: ದೇವರ ಕೇಲುಗಳನ್ನು ಹೊತ್ತ ಪೂಜಾರಿಗಳ ಪಾದಸ್ಪರ್ಶದಿಂದ ಕಾಯಿಲೆಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿಂದ ಭಾನುವಾರ ಬೆಳಗ್ಗೆ ಮೈ ಕೊರೆಯುವ ಚಳಿಯಲ್ಲೂ ಸಾಲಾಗಿ ಮಲಗಿದ್ದ ಸಹಸ್ರಾರು ಭಕ್ತರ ಬೆನ್ನ ಮೇಲೆ ಪೂಜಾರಿಗಳು ನಡೆದುಕೊಂಡು ಹೋಗುವ ವಿಶಿಷ್ಠ ಆಚರಣೆ ದಂಡಿನ ದುರುಗಮ್ಮ ಜಾತ್ರೆಯಲ್ಲಿ ನಡೆಯಿತು.

Advertisement

ಅರಸೀಕೆರೆ ಗ್ರಾಮದಲ್ಲಿ ಪ್ರತಿ ವರ್ಷ ಜರುಗುವ ದಂಡಿನ ದುರುಗಮ್ಮದೇವಿ ಜಾತ್ರೆಯಲ್ಲಿ ಈ ಆಚರಣೆ ನಡೆದುಕೊಂಡು ಬರುತ್ತಿದೆ. ಪ್ರತಿ ವರ್ಷ ಡಿಸೆಂಬರ್‌ ಅಥವಾ ಜನವರಿ ತಿಂಗಳಲ್ಲಿ 3 ದಿನಗಳ ಕಾಲ ಕಾರ್ತಿಕೋತ್ಸವ ಅಂಗವಾಗಿ ಜರುಗುವ ದಂಡಿನ ದುರುಗಮ್ಮದೇವಿ ಜಾತ್ರೆಯ ಕೊನೆಯ ದಿನ ಭಾನುವಾರ ಬೆಳಗಿನ ಜಾವ ದೇವಸ್ಥಾನದಿಂದ ದಂಡಿನ ದುರುಗಮ್ಮ ದೇವಿಯನ್ನು 2 ಕಿ.ಮೀ. ದೂರವಿರುವ ಹೊಳೆಗೆ(ಹೊಂಡ) ಗಂಗಾ ಪೂಜೆಗೆ ಕರೆ ತರಲಾಯಿತು. ಪೂಜೆ ಮುಗಿಸಿಕೊಂಡು ದೇವಿಯ ಕೇಲು(ಪೂಜಾ ಸಾಮಗ್ರಿಗಳುಳ್ಳ ಮಡಿಕೆ) ಹೊತ್ತ ಇಬ್ಬರು ಪೂಜಾರಿಗಳು ದೇವಸ್ಥಾನದವರೆಗೆ ದಾರಿಯುದ್ದಕ್ಕೂ ಬೋರಲಾಗಿ ಮಲಗಿಕೊಂಡ ಭಕ್ತರ ಮೈ ಮೇಲೆ ನಡೆಯುತ್ತಾ ಮುಂದೆ ಸಾಗಿದರು. ಒಟ್ಟು 8 ಜನರಿದ್ದ ಪೂಜಾರಿಗಳ ತಂಡದಲ್ಲಿ ಕೇಲು ಹೊತ್ತ ಇಬ್ಬರು ಭಕ್ತರ ಮೈ ಮೇಲಿಂದ ಸಾಗಿದರೇ ಉಳಿದ 6
ಜನರು ವಾದ್ಯಮೇಳ, ದೇವಿ ಮೂರ್ತಿಯೊಂದಿಗೆ ಅಕ್ಕ-ಪಕ್ಕದಲ್ಲಿದ್ದರು.

ವಿವಿಧ ಜಿಲ್ಲೆಗಳಿಂದ ಅಪಾರ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ದಂಡಿನ ದುರುಗಮ್ಮ ದೇವಿಯು ಹೊಳೆ ಪೂಜೆ ಮುಗಿಸಿಕೊಂಡು ದೇವಸ್ಥಾನಕ್ಕೆ ಹಿಂದಿರುವಾಗ ನಡೆಯುತ್ತಿದ್ದ ಬಲಿ ಪದ್ಧತಿಗೆ ಪೊಲೀಸರು ಕಳೆದ ಮೂರು ವರ್ಷದಿಂದ ಬ್ರೇಕ್‌ ಹಾಕಿದ್ದಾರೆ. ದೇವಿಯ 3 ದಿನದ ಜಾತ್ರೆಯಲ್ಲಿ ದೇವಸ್ಥಾನಕ್ಕೆ ಬಂದ ಅಕ್ಕಿ, ಹಾಲು, ಮೊಸರು ಶೇಖರಿಸಲಾಗುತ್ತದೆ. 

ಭಾನುವಾರ ಸಂಜೆ ವೇಳೆಗೆ ಜಾತಿಭೇದವಿಲ್ಲದೇ ದೇವಸ್ಥಾನದ ಮುಂಭಾಗ ಆವರಣದಲ್ಲಿ ದುರ್ಗಿಯರ ಊಟ ಎನ್ನುವ ಹೆಸರಿನಲ್ಲಿ ಎಲ್ಲ ಸಮುದಾಯವರು ಸಹಪಂಕ್ತಿಯಲ್ಲಿ ಪ್ರಸಾದ ಸೇವಿಸುವುದು ಜಾತ್ರೆ ವಿಶೇಷವಾಗಿದೆ. 

ಸಾವಿರಾರು ವರ್ಷಗಳ ಹಿಂದೆ ಬಳ್ಳಾರಿ ಸೀಮೆಯಲ್ಲಿ ಸಂಭವಿಸಿದ ಭೀಕರ ಕಾಯಿಲೆ ಇಡಿ ಜೀವ ಸಂಕುಲವನ್ನು ತಲ್ಲಣಗೊಳಿಸಿತ್ತು. ಸಹಸ್ರಾರು ಸಾವು, ನೋವು ಸಂಭವಿಸಿದವು. ಆಗ ಪಾರ್ವತಿ ದೇವಿ ದುರ್ಗೆಯಾಗಿ ಬಂದು ಬಳ್ಳಾರಿಯಲ್ಲಿ ನೆಲೆಸಿದಳು. ರಾಜರ ಓಲೆ ಮುಟ್ಟಿಸಲು ಹೋದ ಅರಸೀಕೆರೆಯ ಮರಿಯಜ್ಜನ ಕಟ್ಟಿಗೆಯಲ್ಲಿ ದೇವಿಯು ಅರಸಿಕೇರಿಗೆ ಬಂದಳು. ಇಲ್ಲಿ ದೇವಿ ಅನೇಕ ಪವಾಡಗಳನ್ನು ಮಾಡಿದ್ದು, ದೇವಸ್ಥಾನ ನಿರ್ಮಾಣವಾಗಿ ನೂರಾರು ವರ್ಷಗಳ ಹಿಂದಿನಿಂದ ಈ ಜಾತ್ರೆ, ಪದ್ಧತಿ ಮುಂದುವರೆಯುತ್ತಾ
ಬಂದಿದೆ ಎನ್ನುತ್ತಾರೆ ಗ್ರಾಮದವರಾದ ಇತಿಹಾಸ ಉಪನ್ಯಾಸಕ ಪಿ.ದುರುಗೇಶ್‌

Advertisement

ಕಾಯಿಲೆಗಳು ದೂರವಾಗುವ ನಂಬಿಕೆ
ಅನೇಕ ಸಮಸ್ಯೆಗಳಿಗೆ ಒಳಗಾದವರು ಜಾತ್ರೆಯಲ್ಲಿ ನಿನಗೆ ಅಡ್ಡ ಮಲಗುತ್ತೇವೆ ಎಂದು ದೇವಿಗೆ ಹರಕೆ ಹೊತ್ತಿರುತ್ತಾರೆ. ಹೀಗಾಗಿ ದೇವಿ ಸಾಗಿ ಬರುವ ದಾರಿಯಲ್ಲಿ ಮಲಗಿಕೊಂಡು ದುರುಗಮ್ಮ ದೇವಿಯ ಕೇಲು ಹೊತ್ತು ಬರುವ ದಲಿತ ಪೂಜಾರಿಗಳ ಪಾದ ಸ್ಪರ್ಶ ಮಾಡಿಸಿಕೊಂಡಲ್ಲಿ ದೇವಿಯ ಪಾದ ಸ್ಪರ್ಶದಿಂದ ಕಾಯಿಲೆಗಳು, ಕಷ್ಟ-ಕಾರ್ಪಣ್ಯಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಈ ಆಚರಣೆ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ ಎನ್ನುತ್ತಾರೆ ಗ್ರಾಮದ ದಲಿತ ಮುಖಂಡ ಪೂಜಾರ ಮರಿಯಪ್ಪ.

ಟ್ರ್ಯಾಕ್ಟರ್‌ ಚಲಾಯಿಸಿ ನೀರು ಪೂರೈಸಿದ ಪಿಡಿಒ
ಹರಪನಹಳ್ಳಿ:
ತಾಲೂಕಿನ ಅರಸೀಕೆರೆ ಗ್ರಾಮದ ದಂಡಿ ದುರುಗಮ್ಮದೇವಿ ಕಾರ್ತಿಕೋತ್ಸವ ಅಂಗವಾಗಿ ನಡೆಯುತ್ತಿರುವ ಜಾತ್ರೋತ್ಸವಕ್ಕೆ ಆಗಮಿಸಿರುವ ಭಕ್ತರಿಗೆ ನೀರಿನ ಅಭಾವ ಉಂಟಾಗದಂತೆ ಅರಸೀಕೆರೆ ಪಿಡಿಒ ಟಿ.ಅಂಜಿನಪ್ಪ ಅವರು ಸ್ವತಃ ನೀರಿನ ಟ್ಯಾಂಕ್‌ ಟ್ರಾಕ್ಟರ್‌ ಚಲಾಯಿಸಿಕೊಂಡು ನೀರು ಪೂರೈಸಿರುವುದಕ್ಕೆ ಸಾರ್ವಜನಿಕರ ಮೆಚ್ಚುಗೆಗೆ ವ್ಯಕ್ತವಾಗಿದೆ. ಡ್ರೈವರ್‌ ಕೊರತೆಯಿಂದಾಗಿ ಸ್ವತಃ ತಾವೇ ಟ್ರಾಕ್ಟರ್‌ ಚಲಾಯಿಸುವ ಅನಿವಾರ್ಯತೆ ಬಂದಿದೆ ಎಂದು ಪಿಡಿಒ ಟಿ.ಅಂಜಿನಪ್ಪ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next