ಬೆಂಗಳೂರು: ಇತಿಹಾಸ ಪ್ರಸಿದ್ಧ ಬೆಂಗಳೂರಿನ ಹೂವಿನ ಕರಗ ಶಕ್ತ್ಯೋತ್ಸವದ ಧಾರ್ಮಿಕ ವಿಧಿವಿಧಾನಗಳು ಭರದಿಂದ ಸಾಗಿವೆ. ಕರಗ ಶಕ್ತ್ಯೋತ್ಸವದ ಮೂರನೇ ದಿನ ಭಾನುವಾರ ಸಂಪಂಗಿ ಕೆರೆಯ ಅಂಗಳದಲ್ಲಿ ಶಕ್ತಿಪೀಠಕ್ಕೆ ಪೂಜೆ ನಡೆಯಿತು. ಬಳಿಕ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ ನಡೆದ ವಿಶೇಷ ಪೂಜಾ ಕೈಂಕರ್ಯಗಳು, ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಕರಗ ವಿಶೇಷವಾಗಿ ಏಪ್ರಿಲ್ 2ರವರೆಗೆ ದೇವಾಲಯದಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಗಳು ನಡೆಯಲಿವೆ. ಮಾ.28ರಂದು ವಹಿಕುಲ ಬಾಂಧವರಿಂದ ಆರತಿ ನಡೆಯಲಿದೆ.
29ರಂದು ಹಸಿ ಕರಗ, 30ರಂದು ಪೊಂಗಲ್ ಸೇವೆ ನಡೆಯಲಿದೆ. 31ರಂದು ಐತಿಹಾಸಿಕ ಕರಗ ಶಕ್ತ್ಯೋತ್ಸವದ ಹಾಗೂ ಧರ್ಮರಾಯ ಸ್ವಾಮಿ ದೇವರ ರಥೋತ್ಸವ ಜರುಗಲಿದ್ದು, ಬೆಳಗ್ಗೆ 9 ಗಂಟೆಯಿಂದ ಶ್ರೀಧರ್ಮರಾಯ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಅಂದು ರಾತ್ರಿ 12 ಗಂಟೆಗೆ ಹೂವಿನ ಕರಗ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ.
ಹೂವಿನ ಕರಗ ಮೆರವಣಿಗೆ ಅಲಸೂರು ಪೇಟೆ ಆಂಜನೇಯಸ್ವಾಮಿ, ಶ್ರೀರಾಮ ದೇವಾಲಯ ಮತ್ತು ಶ್ರೀಪ್ರಸ್ನ ಗಂಗಾಧರೇಶ್ವರ ಸ್ವಾಮಿ ದೇವಾಲಯ. ನಗರ್ತ ಪೇಟೆಯ ವೇಣುಗೋಪಾಲಸ್ವಾಮಿ ದೇವಾಲಯದಿಂದ ಸಿದ್ದಣ್ಣ ಗಲ್ಲಿ, ಭೈರವೇಶ್ವರ ದೇವಾಲಯದ ಮಾರ್ಗವಾಗಿ ಕಬ್ಬನ್ ಪೇಟೆಯ ಶ್ರೀರಾಮ ಮಂದಿರ,ಆಂಜನೇಯ ಸ್ವಾಮಿ ದೇವಾಲಯ ಗಾಣಿಗರ ಪೇಟೆ ಚೆನ್ನಕೇಶವ ಸ್ವಾಮಿ ದೇವಸ್ಥಾನ, ಚಾಮುಂಡೇಶ್ವರಿ ದೇವಾಲಯ, ಅವೆನ್ಯೂ ರಸ್ತೆಯ ಈಶ್ವರದೇವಾಲಯಗಳಲ್ಲಿ ಪೂಜೆ ಸ್ವೀಕರಿಸಲಿದೆ. ಏ.1ರಂದು ದೇವಾಲಯದಲ್ಲಿ ಪುರಾಣ ಪ್ರವಚನ, ಗಾವುಶಾಂತಿ ನಡೆದು 2ರಂದು ಧ್ವಜಾರೋಹಣದೊಂದಿಗೆ ಕರಗ ಶಕ್ತ್ಯೋತ್ಸವದ ತೆರೆಬೀಳಲಿದೆ.
ಮೊದಲ ಬಾರಿ ಕರಗ ಹೊರುವ ಮನು: ಮುಜರಾಯಿ ಇಲಾಖೆ ಆದೇಶದಂತೆ ಈ ಬಾರಿ ಅರ್ಚಕ ಮನು ಕರಗ ಹೊರಲಿದ್ದು, ಸಂಪ್ರದಾಯ ದಂತೆ ಮಡಿ ಕಾಪಾಡುವ ಸಲುವಾಗಿ ಮೂರು ತಿಂಗಳ ಹಿಂದೇ ದೇವಾಲಯಕ್ಕೆ ಆಗಮಿಸಿರುವ ಮನು, ಪೂಜಾ ಕೈಂಕರ್ಯಗಳು, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದಾರೆ.