Advertisement

ಸಂಧ್ಯಾಕಾಲೇಜಿನಲ್ಲಿ ಹೊಂಬೆಳಗಿನ ಅನುಭವ

06:10 PM Jun 13, 2019 | Team Udayavani |

ತುಂಬ ವಿಷಯಗಳನ್ನು ವಿದಾಯ ಸಮಾರಂಭದ ವೇದಿಕೆಯ ಮೇಲೆ ಎಲ್ಲರ ಮುಂದೆಯೇ ಹೇಳಿಬಿಡಬೇಕು ಎಂದು ಮನಸ್ಸಲ್ಲಿತ್ತು, ಆದರೆ ಸ್ಟೇಜ್ ಹತ್ತುವುದೆಂದರೆ ನನಗೆ ನಡುಕ, ಮಾತೇ ಹೊರಡಲ್ಲ. ಆದರೂ ನಿನ್ನೆ ಹತ್ತಿಪ್ಪತ್ತು ಸೆಕೆಂಡ್‌ ಮಾತಾಡಿದೆ, ಮೂರು ವರ್ಷದಲ್ಲಿ ಅದು ನನ್ನ ಸಾಧನೆ ಎಂದರೂ ತಪ್ಪಲ್ಲ.

Advertisement

ಈ ಮೂರು ವರ್ಷದಲ್ಲಿ ಕಲಿತದ್ದು ಅಪಾರ. ಆದರೆ, ಈ ಹೊತ್ತು ಮೂರು ವರ್ಷಗಳಲ್ಲಿ ನಮ್ಮೊಂದಿಗೆ ನಮ್ಮವರಾಗಿಯೇ ಇದ್ದ ನಿಮ್ಮೆಲ್ಲರನ್ನು ನೆನಪಿಸಲೇಬೇಕು. ಕೇವಲ ಪ್ರೀತಿ ಮತ್ತು ಗೌರವ ತೋರಿಸಿದಿರಿ ಎಂದರೆ ಇದು ಸುಮ್ಮನೆ ನಿಮ್ಮನ್ನು ಮೆಚ್ಚಿಸಲು ಬರೆದದ್ದು ಎಂದು ಅನ್ನಿಸಿ ನಿಮಗೆಲ್ಲರಿಗೂ ನಾಟಕೀಯವೆನಿಸಬಹುದು. ಆದರೆ, ನಮ್ಮೊಳಗೆ ಪ್ರೀತಿ, ಗೌರವ, ಅಸಮಾಧಾನ, ಅಸೂಯೆ, ಅಭಿಪ್ರಾಯ ವಿರೋಧ, ಕೋಪ ಇವುಗಳೆಲ್ಲ ಇದ್ದೇ ಇತ್ತು. ಇವುಗಳಿಲ್ಲದೇ ನಾವು ಮನುಷ್ಯರಾಗಲೂ ಸಾಧ್ಯವಿಲ್ಲ. ಈ ಮಾನವ ಸಹಜಗುಣಗಳು ಯಾರೋ ಅಪರಿಚಿತ ವ್ಯಕ್ತಿಯೊಂದಿಗೆ ಸಾಮಾನ್ಯವಾಗಿ ಇರೋದಿಲ್ಲ. ನಮ್ಮ ಕಾಲೇಜಿನವ ಎಂದು ನಿಮ್ಮೆದೆಯೊಳಗೆ ನಾನು ಇದ್ದಿದ್ದಕ್ಕೆ ನೀವು ನನ್ನೊಂದಿಗೆ ಪ್ರೀತಿ ತೋರಿಸಿರಿ, ಕೋಪ ಮಾಡಿಕೊಂಡಿರಿ, ಗೌರವಿಸಿದಿರಿ, ಗಲಾಟೆ ಮಾಡಿದಿರಿ ಹೀಗೆ ನಿಮ್ಮೆದೆಯೊಳಗೆ ನನಗೊಂದು ಸ್ಥಾನ ನೀಡಿದ್ದಕ್ಕಾಗಿ ನಿಮಗೆ ನಾನು ಚಿರಋಣಿ.
ಶಿಕ್ಷಕರ ಬಗ್ಗೆ ನೆನಪಿಸಬೇಕಾದರೆ ಈ ಸಂಬಂಧವೇ ಒಂದು ಸೋಜಿಗ ನನಗೆ ! ಅವರೊಂದಿಗೆ ವಿದ್ಯಾರ್ಥಿಗಳಾಗುವ ತನಕ ಯಾರೋ ಆಗಿರುವ ನಾವು, ಅವರ ವಿದ್ಯಾರ್ಥಿಗಳಾದರೆ ನಮ್ಮ ನೋವು-ನಲಿವು ಅವರದ್ದಾಗುತ್ತದೆ, ನಮ್ಮೊಂದಿಗೆ ನಗುತ್ತಾರೆ, ನಮಗಾಗಿ ಮರುಗುತ್ತಾರೆ. ಅದರಲ್ಲೂ ಮಹಿಳೆ ನಮಗೆ ಶಿಕ್ಷಕರಾದರೆ ತಾಯಿಯೇ ನಮ್ಮೊಡನೆ ಇದ್ದಾರೆ ಎಂಬ ಅನುಭೂತಿ. ಹಾಗಾಗಿಯೇ ಇರಬೇಕು ಪ್ರಾಥಮಿಕ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಶಿಕ್ಷಕಿಯರು ಇರುವುದು. ಅಂಗನವಾಡಿಯಲ್ಲಂತೂ ಚೀಚರಮ್ಮ ಅಂತ ಕರೆಯುತ್ತಿದ್ದದ್ದು.

ಆದರೆ, ಕಾಲೇಜಿನ ಶಿಕ್ಷಕರು ಇದೆಲ್ಲಕ್ಕಿಂತಲೂ ಮೇಲೆ, ಸ್ನೇಹಿತರಂತೆ ಇದ್ದುದು ಈ ಮೂರು ವರ್ಷದಲ್ಲಿ ನನ್ನ ಅನುಭವ. ಹಾಗಾಗಿಯೇ ಇಲ್ಲೂ ಮೂರು ವರ್ಷಗಳಲ್ಲಿ ನಾನು ಅವರೊಂದಿಗೆ ಚೆನ್ನಾಗಿಯೇ ಇದ್ದೆ ಎಂದು ಹೇಳುವುದಿಲ್ಲ. ಸ್ನೇಹಿತರೆಂದರೆ ಗಲಾಟೆ, ಕೋಪ, ಅಸಮಾಧಾನ ಇದ್ದೇ ಇರುತ್ತದೆ, ಹಾಗೆಯೇ ನಮ್ಮ ಕಾಲೇಜಿನ ಶಿಕ್ಷಕರೊಂದಿಗೆ ಪ್ರೀತಿ ತೋರಿಸಿದ್ದೇನೆ, ಚರ್ಚಿಸಿದ್ದೇನೆ, ಕೋಪ ತೋರಿಸಿದ್ದೇನೆ, ವಿರೋಧಿಸಿದ್ದೇನೆ ಕೂಡ.

ವಿದಾಯ ಸಮಾರಂಭದಲ್ಲಿ ಮೋಕ್ಷಿತ್‌ ಹೇಳಿದಂತೆ ಇವತ್ತಿನ ಕಾಲದಲ್ಲಿ ಈ ಇಂಟರ್‌ನೆಟ್‌ನಿಂದಾಗಿ ಯಾರೂ ಯಾರಿಗೂ ದೂರವಾಗುವುದಿಲ್ಲ. ಆದರೂ ಪ್ರತಿದಿನ ಮುಖ ನೋಡುತ್ತಿದ್ದವರು ಸಂಪ್ರದಾಯದಂತೆ ವಿದಾಯ ಹೇಳಿ ಅಲ್ಲೂ ಸಂಭ್ರಮಿಸಬೇಕು, ಸಂಭ್ರಮಿಸಲೂ ಈಗ ಕಾರಣಗಳೂ ಬೇಕಿಲ್ಲ ಅಲ್ವ? ಎಲ್ಲೋ ಇದ್ದ ನಾವುಗಳು ಈ ಮೂರು ವರ್ಷ ಒಟ್ಟಿಗೆ ಇದ್ದು ಇವತ್ತು ಹೊಸತನದೆಡೆಗೆ ನಡೆಯುತ್ತಿದ್ದೇವೆ.

-ಬಾಪು ಅಮ್ಮೆಂಬಳ
ಅಂತಿಮ ಬಿ. ಎ.,
ವಿಶ್ವ ದ್ಯಾನಿಲಯ ಸಂಧ್ಯಾಕಾಲೇಜು, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next