Advertisement

ಬಿರುಗಾಳಿಗೆ ನೆಲಕಚ್ಚಿದ ಪಾಲಿಹೌಸ್‌

08:59 PM Jun 01, 2019 | Team Udayavani |

ಮುಳಬಾಗಿಲು: ತಾಲೂಕಿನಲ್ಲಿ ಶುಕ್ರವಾರ ಸಂಜೆ ಬಿದ್ದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ 5 ಪಾಲಿಹೌಸ್‌ಗಳು ನಾಶವಾಗಿದ್ದು, ಕೋಟ್ಯಂತರ ರೂ. ನಷ್ಟವಾಗಿದೆ. ಇತರೆ ಹಳ್ಳಿಗಳಲ್ಲಿ 137 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಟೊಮೆಟೋ, ಮಾವು ನೆಲಕಚ್ಚಿದ್ದು, ನಗರದಲ್ಲಿ 2 ಮನೆಗಳ ಚಾವಣಿ ಹಾರಿ ಹೋಗಿದೆ.

Advertisement

ತಾಲೂಕಿನ ಕಪ್ಪಲಮಡಗು ಗ್ರಾಮ ಸಹಾಯಕ ಕೆ.ಎಚ್‌.ನಟರಾಜ್‌ ಅವರು 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಗ್ರೀನ್‌ಹೌಸ್‌, 5 ಲಕ್ಷ ರೂ. ವೆಚ್ಚದಲ್ಲಿ ನಾಟಿ ಮಾಡಿದ್ದ ಕ್ಯಾಪ್ಸಿಕಂ ಸಸಿ ಬಿರುಗಾಳಿ ಸಹಿತ ಮಳೆಗೆ ಸಂಪೂರ್ಣ ನಾಶವಾಗಿದೆ. ಈ ಗ್ರೀನ್‌ಹೌಸ್‌ ನಿರ್ಮಾಣಕ್ಕೆ 30 ಲಕ್ಷ ರೂ. ಸಾಲ ಪಡೆದಿದ್ದಾಗಿ ನಟರಾಜ್‌ ತಿಳಿಸಿದರು. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಎನ್‌.ವಡ್ಡಹಳ್ಳಿ ಗ್ರಾಮದಲ್ಲಿ ಹನುಮಪ್ಪ ಅವರ 32 ಲಕ್ಷ ರೂ. ವೆಚ್ಚದ ಗ್ರೀನ್‌ಹೌಸ್‌ ಶೇ.25 ನಾಶವಾಗಿ, 6 ರಿಂದ 7 ಲಕ್ಷ ರೂ. ನಷ್ಟ ಉಂಟಾಗಿದೆ. ಬೆಳೆದಿದ್ದ ರೋಜ್‌ ಗಿಡಗಳಿಗೆ ತೊಂದರೆಯಾಗಿಲ್ಲ. ವಿ.ಗುಟ್ಟಹಳ್ಳಿ ರೈತ ಕಳೆದ ವರ್ಷ ಕೃಷಿಭಾಗ್ಯ ಯೋಜನೆಯಡಿ ಗ್ರೀನ್‌ಹೌಸ್‌ ನಿರ್ಮಿಸಿದ್ದರು. ಬೆಳೆ ಬೆಳೆಯಲು ಸಿದ್ಧತೆಯಲ್ಲಿರುವಾಗಲೇ ಬಿರುಗಾಳಿ ಸಹಿತ ಮಳೆಗೆ ಸಂಪೂರ್ಣ ನಾಶವಾಗಿ, 32 ಲಕ್ಷ ರೂ. ನಷ್ಟವಾಗಿದೆ.

ಅದೇರೀತಿ ನಗರದ ಹೊರವಲಯದ ಕೆಜಿಎಫ್ ರಸ್ತೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಕೃಷಿಭಾಗ್ಯ ಯೋಜನೆಯಡಿ ರಮಾದೇವಿ ಮತ್ತು ವಿಶ್ವನಾಥ್‌ ಪ್ರತ್ಯೇಕವಾಗಿ ತಲಾ 32 ಲಕ್ಷ ರೂ. ವೆಚ್ಚದಲ್ಲಿ ಎರಡು ಗ್ರೀನ್‌ಹೌಸ್‌ ನಿರ್ಮಿಸಿದ್ದರು. ಅದರಲ್ಲಿ ರೋಜ್‌ ಹೂ ಬೆಳೆದಿದ್ದರು. ಬೆಂಗಳೂರು, ಕೋಲ್ಕತ್ತಾ ಮುಂತಾದ ನಗರಗಳಿಗೆ ಸಾಗಾಣಿಕೆ ಮಾಡುತ್ತಿದ್ದರು. ಈಗ ಗ್ರೀನ್‌ಹೌಸ್‌ ಬಿರುಗಾಳಿ ಸಹಿತ ಮಳೆಗೆ ಶೇ.25 ಹಾನಿಯಾಗಿ 15 ಲಕ್ಷ ರೂ. ನಷ್ಟ ಸಂಭವಿಸಿದೆ.

ಹಳ್ಳಿಗಳಲ್ಲಿ ರೈತರು ಬೆಳೆದಿರುವ 70-80 ಹೆಕ್ಟೇರ್‌ ಟೊಮೆಟೋ, 55 ಹೆಕ್ಟೇರ್‌ ಮಾವು ಮತ್ತು ಅನಹಳ್ಳಿ ಗ್ರಾಮದಲ್ಲಿ ಗೋಪಾಲ್‌, ಸುಬ್ಬಣ್ಣ ಮತ್ತು ಗೋಪಾಲ್‌, ನಾಗಪ್ಪ ಎಂಬ ಇಬ್ಬರು ರೈತರು 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಎರಡು ಬಾಳೆ ತೋಟ ನಾಶವಾಗಿದೆ.

Advertisement

ತಾಯಲೂರು ಜಿಪಂ ಸದಸ್ಯೆ ಮುನಿಲಕ್ಷ್ಮಮ್ಮ 10 ತಿಂಗಳ ಹಿಂದೆ ಕಪ್ಪಲಮಡಗು ಸಮೀಪ 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕುರಿಶೆಡ್‌ ಸಂಪೂರ್ಣ ನಾಶವಾಗಿ 20 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಆಕೆಯ ಪುತ್ರ ಶಂಕರ್‌ ತಿಳಿಸಿದರು. ಅದೇ ರೀತಿ ಮುಳಬಾಗಿಲು ನಗರದ ಖಲೀಪಾಮೊಹಲ್ಲಾ ವಾಸಿಯಾದ ಚಾನ್‌ಷರೀಫ್ ಅವರು

-ಕದರೀಪುರ ಗ್ರಾಮದಂಚಿನಲ್ಲಿ 5 ವರ್ಷಗಳ ಹಿಂದೆ ನಿರ್ಮಿಸಿದ್ದ ನೆಲಗಡಲೆ ಮಿಲ್‌ನ ಚಾವಣಿಗೆ ಹಾಕಲಾಗಿದ್ದ ಜಿಂಕ್‌ಶೀಟ್‌ಗಳು ಸಂಪೂರ್ಣ ಹಾರಿ ಹೋಗಿ ದೂರದಲ್ಲಿ ಬಿದ್ದಿದ್ದರಿಂದ 5 ರಿಂದ 6 ಲಕ್ಷ ರೂ. ನಷ್ಟ ಉಂಟಾಗಿದೆ. ಅಲ್ಲದೇ, ನಗರದ ಬೋವಿ ಕಾಲೋನಿಯ ಮುನಿಯಪ್ಪ ಮತ್ತು ವೆಂಕಟೇಶಪ್ಪ ಅವರ ಮನೆಗಳ ಚಾವಣಿ ಹಾರಿ ಹೋಗಿದ್ದು, 1.50 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next