Advertisement

ನದಿಗಳಿಗೆ ಕಲುಷಿತ ನೀರು ಸೇರ್ಪಡೆಯಾಗದಂತೆ ನಿಗಾ ಅಗತ್ಯ

07:48 PM Sep 05, 2021 | Team Udayavani |

ಮಂಗಳೂರು ಹೊರವಲಯದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮೂಲವಾಗಿರುವ ಫಲ್ಗುಣಿ ನದಿ ಹಾಗೂ ಮರವೂರು ಡ್ಯಾಂಗೆ ಪಚ್ಚನಾಡಿ ಘನತ್ಯಾಜ್ಯ ಯಾರ್ಡ್‌ನ  ಭೂಭರ್ತಿ (ಲ್ಯಾಂಡ್‌ಫಿಲ್ಲಿಂಗ್‌) ಪ್ರದೇಶದಿಂದ ಹೊರಹರಿಯುವ ಕಲುಷಿತ ನೀರು ಸೇರ್ಪಡೆಯಾಗಿ ಮಲಿನಗೊಂಡಿದ್ದು ಆರೋಗ್ಯಕ್ಕೆ ಹಾನಿಕಾರಿ ಅಂಶ ಗಳನ್ನು ಒಳಗೊಂಡಿದೆ ಎಂದು ಎಂಬುದಾಗಿ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಮಾಹಿತಿಯಲ್ಲಿ ಹೊರಗೆಡವಿರುವ ಅಂಶಗಳು ನಿಜಕ್ಕೂ ಆಘಾತಕಾರಿಯಾಗಿದ್ದು ಇದನ್ನು ಗಂಭೀರ ವಾಗಿ ಪರಿಗಣಿಸಿ ಸೂಕ್ತ ಕ್ರಮಗಳಿಗೆ ಮುಂದಾಗಬೇಕಾದ ತುರ್ತು ಅವಶ್ಯಕತೆ ಇದೆ.

Advertisement

ಕಲುಷಿತ ನೀರು, ತ್ಯಾಜ್ಯಗಳು ಸೇರಿ ಕುಡಿಯುವ ನೀರು ಮಲಿನಗೊಳ್ಳುತ್ತಿರುವುದು ಕೇವಲ ಫಲ್ಗುಣಿ, ಮರವೂರು ಡ್ಯಾಂನ ಸಮಸ್ಯೆ ಮಾತ್ರ ಅಲ್ಲ. ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ನೇತ್ರಾವತಿ ನದಿ ಕೂಡ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ.

ಮರವೂರು ಡ್ಯಾಂನಿಂದ ಸುತ್ತಮುತ್ತಲಿನ ಸುಮಾರು 20 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಇದೀಗ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬಹಿರಂಗ ಪಡಿಸಿರುವ ಮಾಹಿತಿ ಡ್ಯಾಂನ ಕುಡಿಯುವ ನೀರಿನ ಶುದ್ಧತೆಯ ವಾಸ್ತವಿಕತೆಯನ್ನು ಬಹಿರಂಗ ಪಡಿಸಿದೆ ಮಾತ್ರವಲ್ಲದೆ ಜನರ ಆರೋಗ್ಯದ ಕುರಿತಂತೆಯೂ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರವಾಗಿದೆ.

ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ದಿನಕ್ಕೆ ಸುಮಾರು 300 ಟನ್‌ಗಳಷ್ಟು ಘನ ತ್ಯಾಜ್ಯ ಸಂಗ್ರಹವಾಗಿ ಪಚ್ಚನಾಡಿಯ ಡಂಪಿಂಗ್‌ಯಾರ್ಡ್‌ಗೆ ಬರುತ್ತಿದೆ. ಇದರಲ್ಲಿ ಬಹುಪಾಲು ಘನತ್ಯಾಜ್ಯವನ್ನು ಈಗಲೂ ಲ್ಯಾಂಡ್‌ಫಿಲ್ಲಿಂಗ್‌ ಮೂಲಕ ನಿರ್ವಹಿಸಲಾಗುತ್ತದೆ. ಘನ ತ್ಯಾಜ್ಯ ಶೇಖರಣಾ ಪ್ರದೇಶದಿಂದ ಹರಿಯುವ ಕೊಳಚೆ ನೀರು ಫಲ್ಗುಣಿ ನದಿಗೆ ಸೇರುತ್ತಿದೆ ಎಂಬ ವಿಚಾರ ಈ

ಹಿಂದೆಯೇ ಹಲವಾರು ಬಾರಿ ಕೇಳಿಬಂದಿತ್ತು. ಈ ಬಗ್ಗೆ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಲ್ಲಿ ಪರಿಸರ ನಿಯಂತ್ರಣ ಮಂಡಳಿ ನ್ಯಾಯಾಲಯಕ್ಕೆ ಸಲ್ಲಿಸಿರುವ 22 ಪುಟಗಳ ಮಾಹಿತಿ ಇದನ್ನು ಧೃಡಪಡಿಸಿದೆ.

Advertisement

ಈ ಒಂದು ಸಮಸ್ಯೆಯನ್ನು ಸರಕಾರ, ಮಹಾನಗರ ಪಾಲಿಕೆ ಗಂಭೀರವಾಗಿ ಪರಿಗಣಿಸಿ, ಲ್ಯಾಂಡ್‌ಫಿಲ್ಲಿಂಗ್‌ ಯಾರ್ಡ್‌ನಿಂದ ಕಲುಷಿತ ನೀರು ಕುಡಿಯುವ ನೀರು ಮೂಲಗಳಿಗೆ ಸೇರದಂತೆ ಕ್ರಮಗಳಿಗೆ ಮುಂದಾಗಬೇಕಾಗಿದೆ. ಈ

ನಿಟ್ಟಿನಲ್ಲಿ ತ್ಯಾಜ್ಯ ನಿರ್ವಹಣೆಗೆ ಲ್ಯಾಂಡ್‌ಫಿಲ್ಲಿಂಗ್‌ನಂತಹ ಹಳೆಯ ಮಾದರಿಗಳ ಬದಲಿಗೆ ವೈಜ್ಞಾನಿಕ ಮಾದರಿಗಳನ್ನು ಅಳವಡಿಸುವ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಬೇಕಾಗಿದೆ.

ಪರಿಸರ ನಿಯಂತ್ರಣ ಮಂಡಳಿಯ ಮಾಹಿತಿ ತುಂಬೆ ವೆಂಟೆಡ್‌ಡ್ಯಾಂನ ನೀರಿನ ಶುದ್ದತೆಯ ಬಗ್ಗೆಯೂ ಗಮನಹರಿಸುವಂತೆ ಮಾಡಿದೆ. ಇಲ್ಲಿಯೂ ಕಲುಷಿತ ನೀರು ಸೇರ್ಪಡೆಯಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವ ಎಚ್ಚರಿಕೆಯನ್ನು ರವಾನಿಸಿದೆ.

             

 –ಸಂ.

Advertisement

Udayavani is now on Telegram. Click here to join our channel and stay updated with the latest news.

Next