Advertisement

ಪಂಚರಾಜ್ಯಗಳಲ್ಲಿ ಯಾರ ಅಲೆ, ಎಷ್ಟು ತೀವ್ರತೆ?

11:01 PM Jan 08, 2022 | Team Udayavani |

ದೇಶದಲ್ಲಿ ಕೊರೊನಾ 3ನೇ ಅಲೆಯ ಪ್ರಸರಣವು ಜೋರಾಗಿರುವಂತೆಯೇ, ಪಂಚರಾಜ್ಯಗಳಲ್ಲಿ ಚುನಾವಣೆಯ ಸಂಚಲನ ಶುರುವಾಗಿದೆ. ಉತ್ತರಪ್ರದೇಶ, ಪಂಜಾಬ್‌, ಉತ್ತರಾಖಂಡ, ಗೋವಾ, ಮಣಿಪುರ ವಿಧಾನಸಭೆ ಚುನಾವಣೆಗಳಿಗೆ ಮುಹೂರ್ತವೂ ನಿಗದಿಯಾಗಿದೆ. ಇನ್ನೇನು 2 ತಿಂಗಳಲ್ಲಿ ಹೈವೋಲ್ಟೆàಜ್‌ ಎಲೆಕ್ಷನ್‌ ಮುಗಿದು, ಫ‌ಲಿತಾಂಶವೂ ಹೊರಬೀಳಲಿದೆ. ಹೀಗಿರುವಾಗ, ಚುನಾವಣೆಯ ಹೊಸ್ತಿಲಲ್ಲಿರುವ ಈ ಐದೂ ರಾಜ್ಯಗಳ ಸದ್ಯದ ರಾಜಕೀಯ ಪರಿಸ್ಥಿತಿ ಹೇಗಿದೆ ನೋಡೋಣ ಬನ್ನಿ.

Advertisement

ಉತ್ತರ ಪ್ರದೇಶ: ಯಾರಿಗೆ ಜಯದ ಯೋಗ?
ಇಡೀ ದೇಶದಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ಇರುವಷ್ಟು ಮಹತ್ವ ಬೇರಾವ ರಾಜ್ಯಕ್ಕೂ ಇಲ್ಲ. ಇದಕ್ಕೆ ಕಾರಣ, ಈ ರಾಜ್ಯದ ವಿಸ್ತೀರ್ಣ, ಕ್ಷೇತ್ರಗಳ ಸಂಖ್ಯೆ ಮತ್ತು ರಾಷ್ಟ್ರ ರಾಜಕಾರಣದ ಮೇಲೆ ಬೀರುವ ಪ್ರಭಾವ. ಉ.ಪ್ರದೇಶದಲ್ಲಿ 403 ಕ್ಷೇತ್ರಗಳಿವೆ. 80 ಲೋಕಸಭಾ ಕ್ಷೇತ್ರಗಳೂ ಇವೆ. ಈ ರಾಜ್ಯದಲ್ಲಿ ಅಧಿಕಾರಕ್ಕೇರುವ ಪಕ್ಷ, ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣದ ಮೇಲೆ ಪ್ರಭಾವ ಬೀರಬಲ್ಲದು ಎಂಬ ಮಾತುಗಳಿವೆ.

ಸದ್ಯ ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಯೋಗಿ ಆದಿತ್ಯನಾಥ್‌ ಸಿಎಂ ಆಗಿದ್ದಾರೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 312 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಅಖೀಲೇಶ್‌ ಯಾದವ್‌ ಅವರ ಸಮಾಜವಾದಿ ಪಕ್ಷ 47, ಮಾಯಾವತಿ ಅವರ ಬಿಎಸ್‌ಪಿ 19 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಕಾಂಗ್ರೆಸ್‌ ಏಳರಲ್ಲಿ ಮಾತ್ರ ಗೆದ್ದಿತ್ತು.

ಈ ಬಾರಿ ಎಲ್ಲ ಪಕ್ಷಗಳೂ ಗೆಲುವಿಗಾಗಿ ಹಾತೊರೆಯುತ್ತಿವೆ. ಬಿಜೆಪಿ ಕಳೆದ ಬಾರಿಯಷ್ಟೇ ಸೀಟುಗಳನ್ನು ಗೆದ್ದು ಅಧಿಕಾರ ಉಳಿಸಿಕೊಳ್ಳುವ ಹವಣಿಕೆಯಲ್ಲಿದ್ದರೆ, ಈ ಬಾರಿ ಏನಾದರೂ ಮಾಡಿ ಅಧಿಕಾರಕ್ಕೇರಲೇಬೇಕು ಎಂದು ಎಸ್‌ಪಿ ಟೊಂಕ ಕಟ್ಟಿದೆ. ಬಿಜೆಪಿ-ಎಸ್‌ಪಿ ಅಬ್ಬರದ ನಡುವೆ ಬಿಎಸ್‌ಪಿ ಅಬ್ಬರ ಸಂಪೂರ್ಣ ಕಡಿಮೆಯಾಗಿದೆ. ಅತ್ತ ಕಾಂಗ್ರೆಸ್‌ ನೇರವಾಗಿ ಪ್ರಿಯಾಂಕಾ ವಾದ್ರಾ ಅವರ ಮುಖವನ್ನೇ ಇರಿಸಿಕೊಂಡು ಚುನಾವಣೆ ಎದುರಿಸಲು ಸಜ್ಜಾಗಿದೆ. ಈಗಾಗಲೇ ಮಹಿಳಾ ಕೇಂದ್ರಿತವಾಗಿ ಹಲವಾರು ಭರವಸೆಗಳನ್ನು ನೀಡಿದೆ.

ಬಿಜೆಪಿ ಮಾತ್ರ ಮೋದಿ-ಯೋಗಿ ಆದಿತ್ಯನಾಥ್‌ ಅವರ ಮೇಲೆ ನಂಬಿಕೆ ಇರಿಸಿಕೊಂಡಿದೆ. ಇದುವರೆಗಿನ ಚುನಾವಣಾ ಸಮೀಕ್ಷೆಗಳು ಬಿಜೆಪಿಯೇ ಮತ್ತೂಮ್ಮೆ ಗೆಲ್ಲಬಹುದು ಎಂದು ಭವಿಷ್ಯ ನುಡಿದಿವೆ. ಆದರೆ, ಕಳೆದ ಬಾರಿಯಷ್ಟು ಸ್ಥಾನ ಗೆಲ್ಲಲು ಆಗುವುದಿಲ್ಲ ಎಂದು ಹೇಳಿವೆ. ಜತೆಗೆ ಅಯೋಧ್ಯೆ ರಾಮಮಂದಿರ ನಿರ್ಮಾಣ ಮತ್ತು ವಾರಾಣಸಿಯ ಅಭಿವೃದ್ಧಿಯಿಂದಾಗಿ ಹಿಂದೂ ಮತಗಳು ತಮ್ಮ ಕೈಹಿಡಿಯಬಲ್ಲವು ಎಂಬ ವಿಶ್ವಾಸದಲ್ಲಿ ಬಿಜೆಪಿ ಇದೆ. ಎಸ್‌ಪಿ ತನ್ನ ಕುಟುಂಬದೊಳಗಿನ ವಿರಸವನ್ನು ಕಡಿಮೆ ಮಾಡಿಕೊಂಡಿದೆ. ಜತೆಗೆ ಮುಸ್ಲಿಂ, ದಲಿತ ಮತ್ತು ಹಿಂದುಳಿದವರ ಮತಗಳ ಜತೆಗೆ ಬ್ರಾಹ್ಮಣ ಮತಗಳ ಮೇಲೂ ಕಣ್ಣು ಹಾಕಿದೆ. ಕಾಂಗ್ರೆಸ್‌ ನೇರವಾಗಿ ಮಹಿಳಾ ಮತಗಳ ಮೇಲೆ ಗಮನಹರಿಸಿದೆ. ಹೀಗಾಗಿ, ಈ ಚುನಾವಣೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಎಂದರೆ ತಪ್ಪಾಗಲಾರದು.

Advertisement

ಇದನ್ನೂ ಓದಿ:ಪಂಚರಾಜ್ಯ ಚುನಾವಣೆ: ಕೇಂದ್ರ ಬಜೆಟ್ ಮಂಡನೆಯಲ್ಲಿ ಹಸ್ತಕ್ಷೇಪವಿಲ್ಲ; ಸಿಇಸಿ

ಪಂಜಾಬ್‌: ಆಪ್‌ ಅದೃಷ್ಟ ಖುಲಾಯಿಸುತ್ತಾ?
ಹಲವಾರು ಕಾರಣಗಳಿಂದಾಗಿ ಈ ಬಾರಿಯ ಪಂಜಾಬ್‌ ವಿಧಾನಸಭೆ ಚುನಾವಣೆ ಹೆಚ್ಚು ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಫಿರೋಜ್‌ಪುರ ರ್ಯಾಲಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತೆರಳಿದ್ದ ವೇಳೆ ಭಾರೀ ಭದ್ರತಾ ಲೋಪವಾಗಿದ್ದು, ಕಾಂಗ್ರೆಸ್‌ ವಿರುದ್ಧ ಬಿಜೆಪಿ ಇದನ್ನು ಬಳಸಿಕೊಳ್ಳುತ್ತಿದೆ.

2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಎಡಿ-ಬಿಜೆಪಿ ಮೈತ್ರಿಕೂಟವನ್ನು ಸೋಲಿಸಿದ್ದ ಕಾಂಗ್ರೆಸ್‌ನ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರು ಅಧಿಕಾರದ ಗದ್ದುಗೇರಿದ್ದರು. 117 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 77, ಆಪ್‌ 20 ಮತ್ತು ಅಧಿಕಾರದಲ್ಲಿದ್ದ ಎಸ್‌ಎಡಿ ಮೈತ್ರಿಕೂಟ 18 ಸ್ಥಾನಗಳನ್ನು ಗಳಿಸಿದ್ದವು. ಚುನಾವಣೆಗೂ ಮುನ್ನ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರು, ರಾಜ್ಯಾದ್ಯಂತ ಓಡಾಡಿ ಪಕ್ಷವನ್ನು ಬಲಪಡಿಸಿದ್ದರು. ಹೀಗಾಗಿಯೇ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೇರಲು ಸಾಧ್ಯವಾಗಿತ್ತು. ಆದರೆ, ನಂತರದ ದಿನಗಳಲ್ಲಿ ಕಾಂಗ್ರೆಸ್‌ ಆಂತರಿಕ ಕಚ್ಚಾಟ ಹೆಚ್ಚಾಯಿತು. ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗಿದ್ದ ನವಜೋತ್‌ ಸಿಂಗ್‌ ಸಿಧು ಮತ್ತು ಅಮರೀಂದರ್‌ ನಡುವೆ ಕಂದಕವೂ ಹೆಚ್ಚಿತು. ಹೀಗಾಗಿಯೇ, ಇತ್ತೀಚೆಗಷ್ಟೇ ಅಮರೀಂದರ್‌ ಸಿಂಗ್‌ ಸಿಎಂ ಸ್ಥಾನಕ್ಕೆ ಮತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಹೊಸ ಪಕ್ಷ ಕಟ್ಟಿ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಮತ್ತು ಸಿಎಂ ಚರಣ್‌ಜಿತ್‌ ಸಿಂಗ್‌ ಚೆನ್ನಿ ಅವರ ಮುಖವನ್ನು ಇರಿಸಿಕೊಂಡು ಕಾಂಗ್ರೆಸ್‌ ಚುನಾವಣೆಗೆ ತಯಾರಿ ನಡೆಸಿದೆ. ಇಲ್ಲಿ ಚೆನ್ನಿ ದಲಿತ ಸಮುದಾಯಕ್ಕೆ ಸೇರಿದ್ದು, ಈ ಮತಗಳ ಮೇಲೆ ಕಣ್ಣಿಟ್ಟಿದೆ. ಆದರೆ, ಕಳೆದ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಪ್‌, ಈ ಬಾರಿ ಅಧಿಕಾರಕ್ಕೇರುವ ಬಯಕೆ ಇರಿಸಿಕೊಂಡಿದೆ.

ಬಿಜೆಪಿಯಿಂದ ದೂರವಾಗಿರುವ ಶಿರೋಮಣಿ ಅಕಾಲಿ ದಳ, ರೈತ ಹೋರಾಟವನ್ನೇ ಮುನ್ನೆಲೆಯಲ್ಲಿ ಇರಿಸಿಕೊಂಡು ಚುನಾವಣೆಗೆ ತಯಾರಾಗಿದೆ. ಆದರೆ, ಈ ಎಲ್ಲಾ ಸಂಗತಿಗಳ ನಡುವೆ, ಚುನಾವಣಾ ಸಮೀಕ್ಷೆಗಳ ಪ್ರಕಾರ, ಅರವಿಂದ ಕೇಜ್ರಿವಾಲ್‌ ಅವರ ಆಪ್‌ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆಯಬಹುದು. ಆದರೆ, ರಾಜಕೀಯ ಸ್ಥಿತ್ಯಂತರದ ಲಾಭ ಪಡೆದುಕೊಳ್ಳುವ ಇರಾದೆಯಲ್ಲಿ ಬಿಜೆಪಿ ಇದೆ.

ಉತ್ತರಾಖಂಡದಲ್ಲಿ ತ್ರಿಕೋನ ಸ್ಪರ್ಧೆ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರಕ್ಕೇರಿರುವ ಬಿಜೆಪಿಗೆ ಈ ಬಾರಿ 2 ಪಕ್ಷಗಳಿಂದ ಸವಾಲು ಎದುರಾಗಿದೆ. ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್‌ ಅಲ್ಲದೇ, ಅರವಿಂದ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಕ್ಷವೂ ಚುನಾವಣಾ ಕಣಕ್ಕೆ ಧುಮುಕಿದೆ. ವರ್ಷದ ಹಿಂದೆಯೇ ಆಗಿನ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌ ವಿರುದ್ಧ ಜನರ ಅಸಮಾಧಾನವನ್ನು ಮನಗಂಡ ಆಡಳಿತಾರೂಢ ಬಿಜೆಪಿಯು, ಕೆಲವೇ ತಿಂಗಳ ಅವಧಿಯಲ್ಲಿ 3 ಸಿಎಂಗಳನ್ನು ಬದಲಾಯಿಸಿದೆ. ಈಗ ಹೊಸ ಮುಖ, ಸಿಎಂ ಪುಷ್ಕರ್‌ ಸಿಂಗ್‌ ಧಮಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದೆ. ಡಬಲ್‌ ಎಂಜಿನ್‌ ಸರ್ಕಾರದ ಮಂತ್ರ, ಇತ್ತೀಚೆಗೆ ಪ್ರಧಾನಿ ಅವರು ಉದ್ಘಾಟಿಸಿದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮತದಾರರ ವಿಶ್ವಾಸವನ್ನು ಮರಳಿ ಗಳಿಸಲು ಪ್ರಯತ್ನಿಸಿದೆ.

ಇನ್ನು, ಕಳೆದ ವರ್ಷದ ಆಗಸ್ಟ್‌ನಲ್ಲೇ ಆಮ್‌ ಆದ್ಮಿ ಪಕ್ಷವು, ನಿವೃತ್ತ ಸೇನಾ ಕರ್ನಲ್‌ ಅಜಯ್‌ ಕೊಥಿಯಾಲ್‌ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದೆ. ಕೇದಾರನಾಥದಲ್ಲಿ ಜಲಪ್ರಳಯ ಉಂಟಾದಾಗ ಜನರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೊಥಿಯಾಲ್‌ರನ್ನು ಜನರು ಪ್ರೀತಿಯಿಂದ “ಭೋಲೆ ಕಾ ಫೌಜಿ’ ಎಂದು ಕರೆಯುತ್ತಾರೆ. ಇದು ಆಪ್‌ಗೆ ಪಾಸಿಟಿವ್‌ ಆಗುವ ಸಾಧ್ಯತೆಯಿದೆ. ಇನ್ನು, ಕಾಂಗ್ರೆಸ್‌ನ ರಾಜ್ಯ ಘಟಕದಲ್ಲಿ ಆಂತರಿಕ ಭಿನ್ನಮತವು ಈ ಹಿಂದೆಯೇ ಸ್ಫೋಟಗೊಂಡಿದೆ. ಅದರ ನಡುವೆಯೂ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಚುನಾವಣಾ ಪ್ರಚಾರದ ಹೊಣೆಯನ್ನು ಮಾಜಿ ಸಿಎಂ ಹರೀಶ್‌ ರಾವತ್‌ರಿಗೆ ವಹಿಸಿ, ಪಕ್ಷವನ್ನು ಸ್ವತಂತ್ರವಾಗಿ ಮುನ್ನಡೆಸುವ ಅಧಿಕಾರ ನೀಡಿದ್ದಾರೆ. ಅವರು ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮುಂದುವರಿಸಿದ್ದಾರೆ.

ಗೋವಾ ಒಲವು ಯಾರ ಕಡೆ?
ಗೋವಾ “ಬಹುಕೋನೀಯ ಸ್ಪರ್ಧೆ’ಗೆ ಸಜ್ಜಾಗಿದೆ. ಸಿಎಂ ಪ್ರಮೋದ್‌ ಸಾವಂತ್‌ ನೇತೃತ್ವದ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಮಮತಾ ಬ್ಯಾನರ್ಜಿಯವರ ಟಿಎಂಸಿ ಈ ಬಾರಿ ಗೋವಾಗೆ ಲಗ್ಗೆಯಿಟ್ಟಿದ್ದು, ಮಹಾರಾಷ್ಟ್ರವಾದಿ ಗೋಮಂತಕ್‌ ಪಾರ್ಟಿ(ಎಂಜಿಪಿ)ಯೊಂದಿಗೆ ಗೋವಾದಲ್ಲಿ ಹೆಜ್ಜೆ ಗುರುತು ಮೂಡಿಸುವ ನಿರೀಕ್ಷೆಯಲ್ಲಿದೆ. ಇನ್ನೊಂದೆಡೆ, ಕೇಜ್ರಿವಾಲ್‌ರ ಆಮ್‌ ಆದ್ಮಿ ಪಕ್ಷ ಕೂಡ ಅದೃಷ್ಟ ಪರೀಕ್ಷಿಸಲಿದೆ. ಗೋವಾ ಫಾರ್ವರ್ಡ್‌ ಪಾರ್ಟಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ಗೆ ಇದು “ಮಾಡು ಇಲ್ಲವೇ ಮಡಿ’ ಚುನಾವಣೆ. ಏಕೆಂದರೆ, ಈಗಾಗಲೇ ಪಕ್ಷದ ಅನೇಕ ಘಟಾನುಘಟಿ ನಾಯಕರು ನಿಷ್ಠೆ ಬದಲಿಸಿ, ಪಕ್ಷಾಂತರ ಮಾಡಿದ್ದಾರೆ. 2017ರ ಚುನಾವಣೆಯಲ್ಲಿ ಕಾಂಗ್ರೆಸ್‌ 17 ಸೀಟು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ, ಬಿಜೆಪಿ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಗದ್ದುಗೆಗೇರಿತ್ತು. ನಂತರ ಕಾಂಗ್ರೆಸ್‌ನಲ್ಲಿ ಸರಣಿ ರಾಜೀನಾಮೆ ಪರ್ವ ಆರಂಭವಾಗಿ, ಈಗ ಪಕ್ಷದ ಶಾಸಕರ ಸಂಖ್ಯೆ 2ಕ್ಕಿಳಿದಿದೆ. ಬಿಜೆಪಿ ಶಾಸಕರ ಸಂಖ್ಯೆ 25ಕ್ಕೇರಿದೆ. ಅಲ್ಲದೇ, ಟಿಎಂಸಿ ಮತ್ತು ಆಪ್‌ ಪ್ರವೇಶದಿಂದ ಬಿಜೆಪಿಯೇತರ ಮತ ವಿಭಜನೆಯಾಗುವ ಆತಂಕವೂ ಕಾಂಗ್ರೆಸ್‌ನಲ್ಲಿ ಮನೆ ಮಾಡಿದೆ. ಅಧಿಕಾರಕ್ಕೆ ಬಂದರೆ, ಒಬಿಸಿ ಸಮುದಾಯದವರನ್ನು ಸಿಎಂ ಆಗಿ, ಕ್ರಿಶ್ಚಿಯನ್‌ ಸಮುದಾಯದವರನ್ನು ಡಿಸಿಎಂ ಆಗಿಯೂ ನೇಮಿಸುವುದಾಗಿ ಆಪ್‌ ಭರವಸೆ ನೀಡಿದೆ. ಟಿಎಂಸಿ ಈಗಾಗಲೇ ಮಾಜಿ ಸಿಎಂ ಲೂಯಿಜಿನೋ ಫ‌ಲೇರೋರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದೆ. 2011ರ ಗಣತಿ ಪ್ರಕಾರ, ರಾಜ್ಯದಲ್ಲಿ ಹಿಂದೂಗಳ ಸಂಖ್ಯೆ ಶೇ.65ಕ್ಕಿಂತಲೂ ಹೆಚ್ಚಿದ್ದು, ಕ್ರಿಶ್ಚಿಯನ್‌ ಜನಸಂಖ್ಯೆ ಶೇ.30ಕ್ಕಿಂತಲೂ ಕೆಳಗಿಳಿದಿದೆ. ಹೀಗಾಗಿ, ಗೋವಾದಲ್ಲಿ ಹಿಂದೂ, ಕೊಂಕಣಿ ಮತ ಸೆಳೆಯುವ ಕಾರ್ಯತಂತ್ರವನ್ನು ಬಿಜೆಪಿ ಅನುಸರಿಸಿದೆ.

ಇದನ್ನೂ ಓದಿ:ಪಂಜಾಬ್‌ನ ಪೊಲೀಸ್‌ ಮಹಾನಿರ್ದೇಶಕರೇ ಬದಲು; 100 ದಿನಗಳಲ್ಲಿ 3ನೇ ಡಿಜಿಪಿ

ಮಣಿಪುರದಲ್ಲಿ ಕೈ-ಕಮಲ ಪೈಪೋಟಿ
ಮಣಿಪುರದಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಪೈಪೋಟಿಯಿದೆ. 2017ರಲ್ಲಿ ಕಾಂಗ್ರೆಸ್‌ಗೆ 28 ಸ್ಥಾನಗಳು ಬಂದರೂ, ನಂತರದಲ್ಲಿ ಹಲವು ನಾಯಕರು ಪಕ್ಷ ತೊರೆದಿದ್ದಾರೆ. ಕಳೆದ 5 ವರ್ಷಗಳಲ್ಲಿ 13 ಕಾಂಗ್ರೆಸ್‌ ಶಾಸಕರು ಪಕ್ಷಾಂತರ ಮಾಡಿದ್ದಾರೆ. ಕಾಂಗ್ರೆಸ್‌ಗೆ ರಾಜ್ಯ ಘಟಕದಲ್ಲಿನ ಒಳಜಗಳ ಹೊಡೆತ ನೀಡುವ ಸಾಧ್ಯತೆಯಿದೆ. ವರ್ಚಸ್ಸಿರುವ ನಾಯಕರ ಕೊರತೆ ಯೂ ಇದೆ. ಇನ್ನು, 3 ಸ್ಥಳೀಯ ಪಕ್ಷಗಳೊಂದಿಗೆ ಸೇರಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ, ಮತ್ತೆ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿದೆ. ಆದರೆ, ಇಲ್ಲೂ ಸವಾಲುಗಳಿವೆ. ಮಿತ್ರಪಕ್ಷ ಎನ್‌ಪಿಎಫ್-ಬಿಜೆಪಿ ಮಧ್ಯದ‌ ಸಂಬಂಧ ಈಗ ಹಳಸಿದೆ. ಎನ್‌ಪಿಎಫ್ನ ಕೆಲವು ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆದಿರುವುದೇ ಇದಕ್ಕೆ ಕಾರಣ. ಮತ್ತೂಂದು ಮಿತ್ರಪಕ್ಷ ಎನ್‌ಪಿಪಿ ಕೂಡ ಏಕಾಂಗಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದೆ. ಇತ್ತೀಚೆಗೆ ನಾಗಾಲ್ಯಾಂಡ್‌ನಲ್ಲಿ ಸೇನಾಪಡೆ ತಪ್ಪಾಗಿ 14 ನಾಗರಿಕರನ್ನು ಹತ್ಯೆಗೈದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಬಿಜೆಪಿಗೆ ಮುಳುವಾಗಲಿದೆಯೇ ಎಂಬ ಪ್ರಶ್ನೆ ಯಿದೆ. ಜತೆಗೆ, ಸಿಎಂ ಬಿರೇನ್‌ ಸಿಂಗ್‌ ವಿರುದ್ಧ ಬಿಜೆಪಿಯೊಳಗೇ ಅಸಮಾಧಾನವಿರುವುದು ಕೂಡ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ.

ರಾಜೀನಾಮೆ ಪರ್ವ ಶುರು
ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ರಾಜೀನಾಮೆ ಪರ್ವ ಆರಂಭವಾಗಿದೆ. ಶನಿವಾರ ಸಂಜೆ ಉ.ಪ್ರದೇಶದ ಕಾನ್ಪುರ ಸಿಪಿ ಅಸೀಮ್‌ ಅರುಣ್‌ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ. ಅವರು ಬಿಜೆಪಿಗೆ ಸೇರ್ಪಡೆಯಾಗಿ ಕನೌಜ್‌ ಸದಾರ್‌ನಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ. ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ರಾಜೇಶ್ವರ್‌ ಸಿಂಗ್‌ ಅವರೂ ವಿಆರ್‌ಎಸ್‌ ತೆಗೆದುಕೊಂಡಿದ್ದು, ಬಿಜೆಪಿ ಟಿಕೆಟ್‌ನಲ್ಲಿ ಸಹೀಬಾಬಾದ್‌ನಲ್ಲಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

ಜನರ ಆಶೀರ್ವಾದ ಮತ್ತು ಡಬಲ್‌ ಎಂಜಿನ್‌ ಸರ್ಕಾರದ ಸಾಧನೆಯಿಂದಾಗಿ ಬಿಜೆಪಿಯು ಅಭೂತಪೂರ್ವ ಗೆಲುವಿನೊಂದಿಗೆ ಮತ್ತೂಮ್ಮೆ ಅಧಿಕಾರಕ್ಕೇರಲಿದೆ.
-ಯೋಗಿ ಆದಿತ್ಯನಾಥ್‌, ಉ.ಪ್ರದೇಶ ಸಿಎಂ

ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಸರ್ಕಾರಗಳು ಕೈಗೊಂಡ ಅಭಿವೃದ್ಧಿ, ಜನಕಲ್ಯಾಣ ಯೋಜನೆಗಳಿಂದಾಗಿ ಜನರು ಬಿಜೆಪಿ ಮೇಲೆ ವಿಶ್ವಾಸವಿಟ್ಟು ಮತ್ತೊಂದು ಛಾನ್ಸ್‌ ನೀಡುತ್ತಾರೆ ಎಂಬ ವಿಶ್ವಾಸವಿದೆ.
-ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ಪಂಚರಾಜ್ಯಗಳ ಚುನಾವಣೆ ದಿನಾಂಕವು ಪ್ರಕಟವಾಗಿದೆ. ಆಮ್‌ ಆದ್ಮಿ ಪಕ್ಷವು ರೆಡಿಯಾಗಿದೆ.
-ಅರವಿಂದ ಕೇಜ್ರಿವಾಲ್‌, ಆಪ್‌ ನಾಯಕ

ಮಾರ್ಚ್‌ 10ರಂದು ದೊಡ್ಡ ಕ್ರಾಂತಿಯೇ ನಡೆಯಲಿದೆ. ಉತ್ತರಪ್ರದೇಶವು ಬದಲಾಗಲಿದೆ. ಬಿಜೆಪಿ ಸರ್ಕಾರಕ್ಕೆ ವಿದಾಯ ಹೇಳಲು ಉ.ಪ್ರದೇಶದ ಜನರು ಸಿದ್ಧರಾಗಿದ್ದಾರೆ.
-ಅಖಿಲೇಶ್ ಯಾದವ್‌, ಎಸ್‌ಪಿ ನಾಯಕ

ಪಂಚರಾಜ್ಯಗಳ ಚುನಾವಣೆಯು ಬಿಜೆಪಿಯನ್ನು ಸೋಲಿಸಲು, ನಿರುದ್ಯೋಗ, ಬೆಲೆಯೇರಿಕೆ, ಮಹಿಳೆಯರು ಮತ್ತು ದಲಿತರ ವಿರುದ್ಧದ ದೌರ್ಜನ್ಯಕ್ಕೆ ಅಂತ್ಯಹಾಡಲು ಹಾಗೂ ಅನ್ನದಾತರಿಗೆ ನ್ಯಾಯ ಒದಗಿಸಲು ಜನರಿಗೆ ಸಿಕ್ಕಿರುವ ಸದವಕಾಶ.
-ರಂದೀಪ್ ಸುರ್ಜೇವಾಲ,ಕಾಂಗ್ರೆಸ್‌ ವಕ್ತಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next