Advertisement

ಅಧಿವೇಶನ ಶುರು; ಸದನ ಖಾಲಿ, ಖಾಲಿ; ಪರಿಷತ್ ನಲ್ಲಿ ಗೌರಿಗಿಲ್ಲ ಸಂತಾಪ!

11:46 AM Nov 13, 2017 | Sharanya Alva |

ಬೆಳಗಾವಿ:ಸೋಮವಾರ ಬೆಳಗಾವಿಯ ಸುವರ್ಣಸೌಧದಲ್ಲಿ ಆರಂಭಗೊಂಡ 8ನೇ ಚಳಿಗಾಲದ ಅಧಿವೇಶನದ ಮೊದಲ ದಿನವೇ ಹೆಚ್ಚಿನ ಸಂಖ್ಯೆಯ ಶಾಸಕರು, ಸಚಿವರು ಗೈರುಹಾಜರಾಗಿದ್ದರೆ, ಮತ್ತೊಂದೆಡೆ ವಿಧಾನಪರಿಷತ್ ನಲ್ಲಿ ಒಬ್ಬರೂ ಸಚಿವರು ಭಾಗವಹಿಸದಿರುವುದನ್ನು ಖಂಡಿಸಿ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕರು ಸಭಾತ್ಯಾಗ ನಡೆಸಿದರು.

Advertisement

ಕಲಾಪದ ಆರಂಭಕ್ಕೂ ಮುನ್ನ ಅಧಿವೇಶನದಲ್ಲಿ ಕೇವಲ 17 ಮಂದಿ ಶಾಸಕರು ಮಾತ್ರ ಹಾಜರಾಗಿದ್ದರು, ಇದರಿಂದ ಅಸಮಾಧಾನಗೊಂಡ ಸ್ಪೀಕರ್ ಕೆಬಿ ಕೋಳಿವಾಡ ಅವರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು. ನಂತರ ಕಲಾಪ ಆರಂಭಗೊಂಡಿತ್ತು.

ಆದರೆ ಕಲಾಪದಲ್ಲಿ 53 ಶಾಸಕರು ಹಾಗೂ ಕೇವಲ 8 ಮಂದಿ ಸಚಿವರು ಮಾತ್ರ ಭಾಗವಹಿಸಿದ್ದರು. ಉಳಿದ ಶಾಸಕರು, ಸಚಿವರು ಎಲ್ಲಿಗೆ ಹೋಗಿರುವುದಾಗಿ ಸ್ಪೀಕರ್ ಪ್ರಶ್ನಿಸಿದರು. ಇದಕ್ಕೆ ಬಿಜೆಪಿ ಶಾಸಕರು ಧ್ವನಿಗೂಡಿಸಿದರು.

ವಿಧಾನಸಭೆಯಲ್ಲಿ ಮಾಜಿ ಸಿಎಂ ಧರಂಸಿಂಗ್, ಪತ್ರಕರ್ತೆ ಗೌರಿ ಲಂಕೇಶ್ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಕಲಾಪ ಪುನರಾರಂಭಗೊಂಡಿತು. ಖಾಸಗಿ ವೈದ್ಯರ ಮುಷ್ಕರದ ಬಗ್ಗೆ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಪ್ರಸ್ತಾಪಿಸಿ, ಖಾಸಗಿ ವೈದ್ಯರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ವೈದ್ಯರಿಂದ ಬೆಳಗಾವಿಯಲ್ಲಿ ಹೋರಾಟ, ಆಸ್ಪತ್ರೆಗಳಲ್ಲಿ ರೋಗಿಗಳ ಪರದಾಟ

Advertisement

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರೆ, ಮತ್ತೊಂದೆಡೆ ಸುವರ್ಣಸೌಧದ ಹೊರಭಾಗದಲ್ಲಿ ರಾಜ್ಯದ ಬೇರೆ, ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಖಾಸಗಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಏತನ್ಮಧ್ಯೆ ಖಾಸಗಿ ವೈದ್ಯರ ಪ್ರತಿಭಟನೆಯಿಂದಾಗಿ ಆಸ್ಪತ್ರೆಯಲ್ಲಿ ರೋಗಿಗಳು ಪರದಾಡುತ್ತಿದ್ದಾರೆ ಎಂದು ವರದಿ ವಿವರಿಸಿದೆ.

ವಿಧಾನಪರಿಷತ್ ನಲ್ಲಿ ಗೌರಿ ಲಂಕೇಶ್ ಗೆ ಸಂತಾಪ ಇಲ್ಲ:

ವಿಧಾನಪರಿಷತ್ ನಲ್ಲಿ ಅಗಲಿದ ಗಣ್ಯರಿಗೆ ಸಭಾಪತಿ ಡಿಎಚ್ ಶಂಕರಮೂರ್ತಿ ಅವರು ಸಂತಾಪ ಸೂಚಿಸಿದರು, ಆದರೆ ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ಗೆ ಮೇಲ್ಮನೆಯಲ್ಲಿ ಸಂತಾಪ ಸೂಚಿಸಿಲ್ಲ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next