ಹಿಂದುತ್ವವನ್ನೇ ಮುಖ್ಯ ವಿಷಯವಾಗಿಸಿಕೊಂಡ ಬಿಜೆಪಿ ಅದರಲ್ಲಿ ಭರ್ಜರಿ ಯಶಸ್ಸು ಕಂಡಿದೆ; 2014ರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಅದೂ ಪೂರ್ಣ ಬಹುಮತದೊಂದಿಗೆ! ಇನ್ನು ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಎಲ್ಲೆಲ್ಲಿ ಬಿಜೆಪಿಯನ್ನು ಊಹಿಸಲೂ ಸಾಧ್ಯವಿರಲಿಲ್ಲವೋ, ಆ ರಾಜ್ಯಗಳಲ್ಲೂ ಅಧಿಕಾರ ಪಡೆದಿದೆ. ಕೆಲವು ರಾಜ್ಯಗಳಲ್ಲಿ ಬೇರೆಬೇರೆ ತಂತ್ರಗಾರಿಕೆ ಬಳಸಿದ್ದರೂ ಒಟ್ಟಾರೆ ಹಿಂದುತ್ವ ಬಿಜೆಪಿಯ ಕೈಹಿಡಿದಿದೆ. ಅದೇ ಸಮಯದಲ್ಲಿ “ಹಿಂದುತ್ವ’ದ ಮತಗಳು ಕಾಂಗ್ರೆಸ್ ಅನ್ನು ಕೈಬಿಟ್ಟಿವೆ. ಇಡೀ ದೇಶದಲ್ಲಿ ಹಿಂದೂಧರ್ಮದ ಪರ ದೊಡ್ಡದಾಗಿ ಅಭಿಮಾನ ಪ್ರಕಟಗೊಳ್ಳುತ್ತಿದೆ.
ಈ ಪರಿಸ್ಥಿತಿಯನ್ನು ಮನಗಂಡ ಕಾಂಗ್ರೆಸ್ ಹಲವು ವರ್ಷಗಳ ಹಿಂದೆಯೇ ಮೃದು ಹಿಂದುತ್ವಕ್ಕೆ ವಾಲುವ ಸುಳಿವು ನೀಡಿತ್ತು. ಮುಖ್ಯವಾಗಿ ಮಧ್ಯಪ್ರದೇಶದಲ್ಲಿ ಇಂತಹ ಯತ್ನವನ್ನು ಕಾಂಗ್ರೆಸ್ ಮಾಡಿತ್ತು. ದೇಶದ ಉಳಿದ ಕಡೆಗಳಲ್ಲೂ ಕಾಂಗ್ರೆಸ್ ಪಾಳೆಯದ ಅಲ್ಲಲ್ಲಿ ನಿಧಾನಕ್ಕೆ ಮೃದು ಹಿಂದುತ್ವದ ಮಾತುಗಳು ಕೇಳಿ ಬರಲು ಶುರುವಾಗಿದೆ. ಕೆಲವು ವರ್ಷಗಳ ಹಿಂದೆ ರಾಹುಲ್ ಗಾಂಧಿ, ತಮ್ಮದು ಮುಸ್ಲಿಮ್ ಧರ್ಮ ಎಂದು ಧಾರ್ಮಿಕ ಕೇಂದ್ರವೊಂದರ ಲೆಡ್ಜರ್‌ನಲ್ಲಿ ಬರೆದಿದ್ದರು ಎಂಬ ಗಲಾಟೆ ಶುರುವಾಗಿತ್ತು. ಆಮೇಲೆ ಸ್ವತಃ ರಾಹುಲ್ ತಮ್ಮ ಯಜ್ಞೊàಪವೀತವನ್ನು ತೋರಿಸಿ, ತಾನೊಬ್ಬ ಬ್ರಾಹ್ಮಣ, ತನ್ನದು ಕೌಲ ಗೋತ್ರ ಎಂದಿದ್ದರು! ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು.
ಇತ್ತೀಚೆಗೆ ಸಂಸತ್‌ನಲ್ಲಿ ಮಣಿಪುರದ ಬಗ್ಗೆ ಮಾತನಾಡಿದ್ದ ರಾಹುಲ್, ಭಾರತ್ ಮಾತಾ ಎಂಬ ಪದ ಬಳಸಿದ್ದರು. ಸಾಮಾನ್ಯವಾಗಿ ಈ ರೀತಿಯ ಪದಗಳ ಬಳಕೆ ಕಾಂಗ್ರೆಸ್‌ನಲ್ಲಿ ಬಹಳ ಕಡಿಮೆಯಿರುತ್ತದೆ. ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕಮಲ್‌ನಾಥ್, ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ, ರುದ್ರಾಭಿಷೇಕ ಮಾಡಿಸುತ್ತಿದ್ದಾರೆ, ಇತ್ತೀಚೆಗೆ ದೇಶದಲ್ಲಿ ಪ್ರಖ್ಯಾತರಾಗಿರುವ ಯುವ ಗುರು ಧೀರೇಂದ್ರ ಶಾಸ್ತ್ರೀಯನ್ನೂ ಭೇಟಿಯಾಗಿದ್ದಾರೆ. ಇದು ಕಾಂಗ್ರೆಸ್‌ನಲ್ಲಿ ಚರ್ಚೆಗಳಿಗೆ ಕಾರಣವಾಗಿದೆ.
ಒಂದು ಗುಂಪು ಧಾರ್ಮಿಕರ ಭಾವನೆಯನ್ನು ಗೌರವಿಸಬೇಕು, ಹಿಂದುತ್ವದ ಅಂಶಗಳನ್ನೂ ತುಸು ಪರಿಗಣಿಸಬೇಕು ಎಂದು ವಾದಿಸುತ್ತಿದ್ದರೆ, ಮತ್ತೂಂದು ಗುಂಪು ಹಿಂದಿನಂತೆಯೇ ಮತಾತೀತ ನಿಲುವನ್ನು ಮುಂದುವರಿಸಬೇಕು ಎಂದು ಬಯಸಿದೆ. ಹಳೆಯ ನಿಲುವನ್ನೇ ಮುಂದುವರಿಸಬೇಕು ಎಂದು ವಾದ ಮಾಡುತ್ತಿರುವವರ ಸಾಲಿನಲ್ಲಿ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಐಯ್ಯರ್ ನಿಲ್ಲುತ್ತಾರೆ. ಬಿಜೆಪಿಯಂತೆಯೇ ನಾವೂ, ಅದೇ ಅನುಕರಣೆ ಮಾಡಿದರೆ, ಬಿಜೆಪಿಗೆ ಪರ್ಯಾಯವೊಂದನ್ನು ನೀಡುವುದು ಹೇಗೆ? ಕಾಂಗ್ರೆಸ್ ಸೈದ್ಧಾಂತಿಕ ಕಾರಣಕ್ಕೆ, ವ್ಯಾವಹಾರಿಕ ಕಾರಣಕ್ಕೆ ಹಿಂದುತ್ವವನ್ನು ಬಳಸುತ್ತಿದೆ. ಅದು ಸರಿಯಲ್ಲ ಎನ್ನುವುದು ಮಣಿಶಂಕರ್ ವಾದ.