ಮುದಗಲ್ಲ: ಕಾಡು-ಮೇಡುಗಳಲ್ಲಿ ವಾಸಿಸುವ ಬಂಜಾರ ಜನಾಂಗ ದುಶ್ಚಟಗಳಿಗೆ ಬಲಿಯಾಗದೇ ಧರ್ಮದ ಮಾರ್ಗದಲ್ಲಿ ಸಾಗಿ ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಕೆಸರಟ್ಟಿಯ ಶಂಕಲಿಂಗ ಗುರುಪೀಠದ ಬಾಲ ತಪಸ್ವಿ ಸೋಮಲಿಂಗ ಸ್ವಾಮಿಜಿ ಹೇಳಿದರು.
ಸಮೀಪದ ದೇಸಾಯಿ ಭೋಗಾಪುರ ತಾಂಡಾದಲ್ಲಿ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವ ಹಾಗೂ ಪುರಾಣ ಮಂಗಲೋತ್ಸವ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯ ಪಕ್ಷಗಳಿಂದ ತಾಂಡಾಗಳಲ್ಲಿ ಒಡಕು ಉಂಟಾಗಿ ಮನಸುಗಳು ಕಲುಷಿತವಾಗುತ್ತಿವೆ. ಚುನಾವಣೆಯಲ್ಲಿ ಮಾತ್ರ ರಾಜಕಾರಣ ಮಾಡಬೇಕು. ಚುನಾವಣೆ ಬಳಿಕ ಎಲ್ಲರೂ ಒಂದಾಗಿ ಸಾಮಾಜಿಕ ಕೆಲಸಗಳನ್ನು ಮಾಡಿದಾಗ ಮಾತ್ರ ಬಂಜಾರ ಸಮಾಜ ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಬೆಳೆಯಲು ಸಾಧ್ಯ ಎಂದರು.
ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಎಲ್.ಟಿ. ನಾಯ್ಕ ಮಾತನಾಡಿ, ಸಮಾಜದಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಜೊತೆಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿಸಬೇಕು, ಹಿರಿಯರಿಗೆ- ಕಿರಿಯರು ಗೌರವ ಕೊಡುವುದನ್ನು ಕಲಿಯಬೇಕು, ವೃದ್ಧ ತಂದೆ-ತಾಯಿಗಳ ಪಾಲನೆ-ಪೋಷಣೆ ಮಾಡಬೇಕು. ಸುಖ ಸುಮ್ಮನೆ ಜಗಳ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಿಸುವುದನ್ನು ಕೈ ಬಿಟ್ಟು ಸಣ್ಣಪುಟ್ಟ ಸಮಸ್ಯೆಗಳು ಬಂದರು ನಮ್ಮಲ್ಲಿಯೇ ಬಗೆಹರಿಸಿಕೊಂಡು ಇತರೆ ಸಮಾಜಕ್ಕೆ ಬಂಜಾರರು ಮಾದರಿಯಾಗಬೇಕಿದೆ ಎಂದರು.
ನಾಗಲಾಪುರ ಗ್ರಾಪಂ ಅಧ್ಯಕ್ಷೆ ರಿಂದಾಭಾಯಿ ಕೃಷ್ಣ ರಾಠೊಡ, ದೇವಪ್ಪ ರಾಠೊಡ, ವೆಂಕನಗೌಡ ಪೊಲೀಸ್ ಪಾಟೀಲ್ ಹಡಗಲಿ, ಶರಣ ಮಾನಪ್ಪ ಆಶಿಹಾಳ ತಾಂಡಾ, ಗುತ್ತೆದಾರ ಲಿಂಗಪ್ಪ ಚವ್ಹಾಣ, ಶ್ರೀನಿವಾಸ ಯರದೊಡ್ಡಿ ತಾಂಡಾ, ತಿಪ್ಪಣ್ಣ ರಾಠೊಡ ಮಾತನಾಡಿದರು.
ತಲೇಖಾನ ಗ್ರಾಪಂ ಅಧ್ಯಕ್ಷ ಮೌನೇಶ ರಾಠೊಡ, ಪಾಂಡುರಂಗ ನಾಯ್ಕ, ಸರೋಜಮ್ಮ ಕಸ್ತೂರಿ ತಾಂಡಾ, ಪತ್ಯಪ್ಪ ದಾದುಡಿ ತಾಂಡಾ, ಸೀನಪ್ಪ ಕಿರಾಣ್ಣನ ತಾಂಡಾ, ಹನುಮಂತಪ್ಪ ಮೇಸ್ತ್ರಿ ಇದ್ದರು.