Advertisement

ರಾಜಕಾರಣದಲ್ಲಿ ಮಾನವೀಯ ವಿಜ್ಞಾನ ಅಗತ್ಯ

11:53 AM Feb 28, 2018 | |

ಬೆಂಗಳೂರು: ಮಾನವೀಯ ವಿಜ್ಞಾನ ಇಲ್ಲದ ರಾಜಕಾರಣದಲ್ಲಿ ಸಮಾನತೆ, ಬಡವರ, ರೈತರಪರ ಕಾಳಜಿ ಮತ್ತು ದೀನದಲಿತ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಭಾರತೀಯ ಅಂಚೆ ಇಲಾಖೆಯು ಕೆ.ಸಿ.ರೆಡ್ಡಿ ಸರೋಜಮ್ಮ ವೆಲ್‌ಫೆರ್‌ ಫೌಂಡೇಷನ್‌ ಸಹಯೋಗದಲ್ಲಿ ಹೊರತಂದಿರುವ ರಾಜ್ಯದ  ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರ ವಿಶೇಷ ಅಂಚೆ ಲಕೋಟೆ ಮತ್ತು ಮೈ ಸ್ಟಾಂಪ್‌ ಬಿಡುಗಡೆ ಮಾಡಿ ಮಾತನಾಡಿದರು.

ಕೆ.ಸಿ.ರೆಡ್ಡಿಯವರು ಸುಗಮ ಆಡಳಿತಗಾರ ಮತ್ತು ಪ್ರಗತಿಪರ ರಾಜಕೀಯ ಚಿಂತನೆಯ ಧೀಮಂತ ನಾಯಕನಾಗಿದ್ದರು. ಅವಿಭಜಿತ ಕೋಲಾರ ಜಿಲ್ಲೆಯ ರಾಯಲ್‌ ಸೀಮೆಯವರಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು. ರಾಜಕೀಯದಲ್ಲಿ ಬೇರೆಯವರು ಬೆಳೆಯಬೇಕು ಎಂಬ ಮನೋಧರ್ಮ ಹೊಂದಿದ್ದ ವ್ಯಕ್ತಿತ್ವ ಕೆ.ಸಿ.ರೆಡ್ಡಿಯವರದು ಎಂದು ತಿಳಿಸಿದರು.

ನಿವೃತ್ತ ಐಪಿಎಸ್‌ ಅಧಿಕಾರಿ ಶಂಕರ ಬಿದರಿ ಮಾತನಾಡಿ, ಮೈಸೂರು ಸಂಸ್ಥಾನದಲ್ಲಿ ಪ್ರಜ್ಞಾಪ್ರಭುತ್ವ ವ್ಯವಸ್ಥೆ ನೆಲೆಗೊಳಿಸಲು ಸಾಕಷ್ಟು ಶ್ರಮಿಸಿದ್ದ ಕೆ.ಸಿ.ರೆಡ್ಡಿಯವರು, ತಮ್ಮ ಪಿತಾೃರ್ಜಿತ ಆಸ್ತಿಯನ್ನು ಸಮಾಜಕ್ಕೆ ನೀಡಿದ್ದರು ಎಂದರು.

ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್‌, ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್‌, ಮುಖ್ಯ ಪೋಸ್ಟ್‌ಮಾಸ್ಟರ್‌ ಜನರಲ್‌ ಡಾ.ಚಾರ್ಲ್ಸ್‌ ಲೋಬೋ, ಸಮಾಜ ಸೇವಕ ಸುಭಾಶ್‌ ರೆಡ್ಡಿ, ಲೇಖಕ ಮಮು ಆಂಜನಪ್ಪ ರೆಡ್ಡಿ, ಕೆ.ಸಿ.ರೆಡ್ಡಿ ಸರೋಜಮ್ಮ ವೆಲ್‌ಫೆರ್‌ ಫೌಂಡೇಷನ್‌ ಕಾರ್ಯದರ್ಶಿ ವಸಂತ ಕವಿತಾ ಶ್ರೀಕರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ರಾಜ್ಯಕ್ಕೆ ಸೇವೆ ಸಲ್ಲಿಸಿದವರಲ್ಲಿ ಕೆ.ಸಿ.ರೆಡ್ಡಿಯವರು ಅಗ್ರಶ್ರೇಣಿಯಲ್ಲಿದ್ದಾರೆ. ಬೆಂಗಳೂರಿನಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಅವರ ಚಿಂತನೆಯೇ ಕಾರಣ. ಎಚ್‌ಎಎಲ್‌, ಎಚ್‌ಎಂಟಿ ಮೊದಲಾದ ಬೃಹತ್‌ ಕೈಗಾರಿಕೆಗಳು ಅವರಿಂದಾಗಿಯೇ ಬೆಂಗಳೂರಿಗೆ ಬಂದಿದೆ.
-ಎಂ.ವಿ.ರಾಜಶೇಖರನ್‌, ಮಾಜಿ ಕೇಂದ್ರ ಸಚಿವ

ಕೆ.ಸಿ.ರೆಡ್ಡಿಯವರ ಪುತ್ಥಳಿಯನ್ನು ವಿಧಾನಸೌಧದ ಮುಂದೆ ಸ್ಥಾಪಿಸಲು ರಾಜ್ಯ ಸರ್ಕಾರ ಒಪ್ಪಿದೆ. ರಾಜ್ಯದ ಸ್ವಾತಂತ್ರ್ಯಕ್ಕಾಗಿ ಮೈಸೂರು ಚಲೋ ಮೂಲಕ 42 ದಿನಗಳ ಹೋರಾಟ ಮಾಡಿದ ಧೀಮಂತ ನಾಯಕ ಕೆ.ಸಿ.ರೆಡ್ಡಿ. ಅವರ ಸ್ಮರಣೆ ಸದಾ ಆಗುತ್ತಿರಬೇಕು.
-ವಸಂತ ಕವಿತಾ ಶ್ರೀಕರ್‌, ಕೆ.ಸಿ.ರೆಡ್ಡಿ ಫೌಂಡೇಶನ್‌, ಕಾರ್ಯದರ್ಶಿ

ಏನಿದು ಅಂಚೆ ಲಕೋಟೆ: ಭಾರತೀಯ ಅಂಚೆ ಇಲಾಖೆ ವಿಶೇಷ ಸಂದರ್ಭದಲ್ಲಿ ಅಂಚೆ ಲಕೋಟೆಯನ್ನು ಮುದ್ರಿಸುತ್ತದೆ. ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರ 42ನೇ ವಾರ್ಷಿಕ ಪುಣ್ಯತಿಥಿಯಂದು ಅವರಿಗೆ ಅರ್ಪಣೆಯ ರೂಪದಲ್ಲಿ ವಿಶೇಷ ಅಂಚೆ ಲಕೋಟಿ ಮತ್ತು ಮೈ ಸ್ಟಾಂಪ್‌ ಬಿಡುಗಡೆ ಮಾಡಿದೆ. ಅಂಚೆ ಲಕೋಟೆಯ ಎದುರು ಭಾಗದಲ್ಲಿ ಕೆ.ಸಿ.ರೆಡ್ಡಿಯವರ ಭಾವಚಿತ್ರ ಮತ್ತು ವಿಧಾನಸೌಧ, ಹಿಂಭಾಗದಲ್ಲಿ ಅವರ ಸಾಧನೆ ಮತ್ತು ಕಿರು ಪರಿಚಯ ಇದೆ. ಇದರ ಮೌಲ್ಯ 20ರೂ.

Advertisement

Udayavani is now on Telegram. Click here to join our channel and stay updated with the latest news.

Next