Advertisement

ದಿವ್ಯಾಂಗರ ವಿಚಾರದಲ್ಲಿ ರಾಜಕಾರಣ ಸಲ್ಲ

01:13 AM Jun 24, 2019 | Team Udayavani |

ಬೆಂಗಳೂರು: ವಿಕಲಚೇತನರ ವಿಷಯದಲ್ಲಿ ರಾಜಕೀಯ ಮಾಡುವುದು ಅಮಾನವೀಯತೆಯ ಬಹುದೊಡ್ಡ ಪ್ರತಿಕ. ಹೀಗಾಗಿ ರಾಜ್ಯ ಸರ್ಕಾರ ಈ ಕೂಡಲೇ 2016ರ ದಿವ್ಯಾಂಗರ ಹಕ್ಕು ಕಾಯ್ದೆಯನ್ನು ಅನುಷ್ಠಾನ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಬಸವನಗುಡಿಯ ಬಿಎಂಎಸ್‌ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಕ್ಷಮ ಸಂಸ್ಥಾಪನಾ ದಿನಾಚರಣೆ, ಹೆಲನ್ಸ್‌ ಕೆಲ್ಲರ್‌ ಜಯಂತಿ ಹಾಗೂ ವಿಶ್ವಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರ 2016ರಲ್ಲಿ ದಿವ್ಯಾಂಗರ ಹಕ್ಕು ಕಾಯ್ದೆ ರಾಜ್ಯದಲ್ಲಿ ಇನ್ನೂ ಅನುಷ್ಠಾನ ಆಗಿಲ್ಲ. ವಿಕಲಚೇತನರ ಕಲ್ಯಾಣ ರಾಜಕಾರಣದ ವಿಚಾರವಲ್ಲ. ಇವರ ಜತೆ ರಾಜಕಾರಣ ಮಾಡುವುದು ಅಮಾನವೀಯತೆಯ ಬಹುದೊಡ್ಡ ಪ್ರತಿಕ. ಕರ್ನಾಟಕದಲ್ಲೂ ಈ ಕಾಯ್ದೆ ಜಾರಿಗೆ ತರಲು ನಾವೆಲ್ಲರೂ ಒಟ್ಟಾಗಿ ಸರ್ಕಾರಕ್ಕೆ ಮನವಿ ಮಾಡಬೇಕು ಎಂದರು.

ವಿಕಲಚೇತನರ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತೆ ಕೇಂದ್ರ ಸರ್ಕಾರ 2016ರಲ್ಲಿ ದಿವ್ಯಾಂಗರ ಹಕ್ಕು ಕಾಯ್ದೆ ಜಾರಿಗೆ ತಂದಿದೆ. ಈ ಕಾಯ್ದೆಯಲ್ಲಿ ಇನ್ನಷ್ಟು ಬದಲಾವಣೆ ಅಥವ ತಿದ್ದುಪಡಿಗಳು ಆಗಬೇಕಿದ್ದರೆ ಸಲಹೆ ನೀಡಿದಲ್ಲಿ, ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು. ಜತೆಗೆ ಕಾಯ್ದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.

ವಿಕಲಚೇತನರ ಕಲ್ಯಾಣದ ಹಿತದೃಷ್ಟಿಯಿಂದ ಸಮಾಜ ಸೂಕ್ಷ್ಮ ಸಂವೇದನೆ ಬೆಳೆಸಿಕೊಳ್ಳಬೇಕಿದೆ. ವಿಕಲಚೇತನರ ಕುರಿತಾಗಿ ಪ್ರತಿಯೊಬ್ಬರೂ ಕೆಲವೊಂದು ಸೂಕ್ಷ್ಮತೆಗಳನ್ನು ವೈಯಕ್ತಿಕವಾಗಿ ಅವಡಿಸಿಕೊಳ್ಳಬೇಕಾಗುತ್ತದೆ. ಜತೆಗೆ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ವಿಕಲಚೇತನರ ಸ್ನೇಹಿ ನೀತಿ, ನಿರೂಪಣೆಗಳು ಸಿದ್ಧವಾಗಬೇಕಿದೆ. ಮೆಟ್ರೋ, ಬಸ್‌, ವಿಮಾನ ನಿಲ್ದಾಣಗಳಲ್ಲಿ ದಿವ್ಯಾಂಗರಿಗೆ ಪೂರಕವಾದ ನೀತಿ ಭಾರತದಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ದಿವ್ಯಾಂಗರನ್ನು ಗಮನದಲ್ಲಿಟ್ಟುಕೊಂಡು ಆರ್ಕಿಟೆಕ್ಚರ್‌ ಯೋಜನೆ ಸಿದ್ಧಪಡಿಸುವುದು ನಮ್ಮ ಸಂಸ್ಕೃತಿಯಲ್ಲೇ ಬರಬೇಕು. ಹೀಗಾಗಿ ಸಕ್ಷಮವು ಆರ್ಕಿಟೆಕ್ಚರ್‌ ಕಾಲೇಜು ಹಾಗೂ ನಗರಾಭಿವೃದ್ಧಿ ಯೋಜನೆಗಳ ಜತೆಗೆ ಸಮಾಲೋಚನೆ ಮಾಡಿ, ದಿವ್ಯಾಂಗರಿಗೆ ಪೂರಕವಾದ ನೀತಿ ಸಿದ್ಧಪಡಿಸಲು ಮನವಿ ಮಾಡಬೇಕು ಎಂದು ಸಲಹೆ ನೀಡಿದರು.

ಸಮಾಜ ಅಥವಾ ದೇಶದ ಪಯಣದಲ್ಲಿ ಯಾರನ್ನು ಹಿಂದೆ ಬಿಡಬಾರದು. ಪ್ರಧಾನಿಯವರ ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ನ ಮೂಲ ಪರಿಕಲ್ಪನೆಯೇ ಎಲ್ಲರ ಅಭಿವೃದ್ಧಿಯಾಗಿದೆ. ರಾಷ್ಟ್ರೀಯ ಪಯಣದಲ್ಲಿ ನಾವೆಲ್ಲರೂ ಒಟ್ಟಿಗೆ ಗುರಿ ಮುಟ್ಟಬೇಕು. ಇದು 100 ಮೀಟರ್‌ ಓಟದ ಸ್ಪರ್ಧೆಯಲ್ಲ. ಎಲ್ಲರ ಅಭಿವೃದ್ಧಿಯ ಪಯಣ ಎಂದು ವಿಶ್ಲೇಷಿಸಿದರು.

ದಿವ್ಯಾಂಗ ಮಕ್ಕಳಿಗೆ ಶಾಲಾ ಪರಿಕರ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಮಿತ್ರ ಜೋತಿ ಸಂಸ್ಥೆಯ ಮ್ಯಾನೇಜಿಂಗ್‌ ಟ್ರಸ್ಟಿ ಮಧು ಸಿಂಘಲ್‌ ಅವರನ್ನು ಸನ್ಮಾನಿಸಲಾಯಿತು. ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ನಿರ್ದೇಶಕ ಜಯ ವಿಭವ ಸ್ವಾಮಿ, ಸಕ್ಷಮ ಕರ್ನಾಟಕ ಅಧ್ಯಕ್ಷ ಸುಧೀರ್‌ ಪೈ, ಬೆಂಗಳೂರು ಘಟಕದ ಅಧ್ಯಕ್ಷ ಡಾ.ಕಿರಣ್‌ ಎಸ್‌.ಮೂರ್ತಿ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next