ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಗ್ಯವಾಗಿದ್ದು, ಗುರುವಾರವೇ ಮನೆಗೆ ಮರಳಬೇಕಿತ್ತು. ಆದರೆ ಸೋಂಕು ತಗುಲಬಾರದು ಎಂಬ ಕಾರಣಕ್ಕೆ ಒಂದೆರಡು ದಿನ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಸಿದ್ದರಾಮಯ್ಯ ಅವರು ಆಸ್ಪತ್ರೆಯಲ್ಲಿ ಇರುವವರಲ್ಲ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿದ್ದಾರಷ್ಟೇ. ರಾಜಕಾರಣ ಬೇರೆ, ಸಂಬಂಧಗಳು ಬೇರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ನನ್ನ ತಲೆ ಕಡಿದರೂ ನಾನು ಪಕ್ಷ ಬಿಡಲ್ಲ. ಹಾಗೆಯೇ ಸಿದ್ದರಾಮಯ್ಯ ಕೂಡ ಅವರ ಪಕ್ಷ ಬಿಡಲ್ಲ. ನನ್ನ ಪಕ್ಷದ ಬಗ್ಗೆ ಅವರೇನಾದರೂ ಹೇಳಿದರೆ ನಾನು ಸುಮ್ಮನಿರಲ್ಲ. ಅವರ ಪಕ್ಷದ ಬಗ್ಗೆ ನಾನು ಏನಾದರೂ ಹೇಳಿದರೂ ಅವರು ಸುಮ್ಮನಿರಲ್ಲ. ಆದರೆ ರಾಜಕೀಯ ಹೊರತುಪಡಿಸಿ ನಮ್ಮಲ್ಲಿ ಉತ್ತಮ ಮಾನವೀಯ ಸಂಬಂಧಗಳಿವೆ ಎಂದು ತಿಳಿಸಿದರು.
ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ಕಿತ್ತಾಡುತ್ತಿದ್ದೆವು. ಬಳಿಕ ಒಟ್ಟಿಗೆ ಕುಳಿತು ಟೀ ಕುಡಿಯುತ್ತಿದ್ದೆವು. ನಾವು ಕಿತ್ತಾಡುವುದನ್ನು ನೋಡಿ ಈ ಜನ್ಮದಲ್ಲಿ ಇವರು ಮುಖ ನೋಡಲ್ಲ ಎಂದು ಎಲ್ಲ ಅಂದುಕೊಳ್ಳುತಿದ್ದರು. ಆದರೆ ಅವರು ಮುಖ್ಯಮಂತ್ರಿಯಾಗಿದ್ದಾಗ ಊಟಕ್ಕೆ ಅವರ ಪಕ್ಕದಲ್ಲೇ ಆಸನ ಹಾಕಿಸಿ ಕಾಯುತ್ತಿದ್ದರು ಎಂದು ಗುಣಗಾನ ಮಾಡಿದರು.
ಒಮ್ಮೆ ಸದನದಲ್ಲಿ ಮಾತಿನ ಚಕಮಕಿ ನಡೆದಿತ್ತು. ನಾನು ಅಂದಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಕೊಠಡಿಯಲ್ಲಿ ಕುಳಿತಿದ್ದೆ. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಬರುತ್ತಿದ್ದಂತೆ ನಾನು ಹೊರಡಲು ಎದ್ದೆ. ಆಗ ಈಶ್ವರಪ್ಪ ಕುಳಿತುಕೊಳ್ಳಿ, ಎಲ್ಲಿಗೆ ಹೋಗ್ತಿದ್ದೀರಿ ಎಂದು ಸಿದ್ದರಾಮಯ್ಯ ಹೇಳುತ್ತಲೇ ಒಟ್ಟಿಗೆ ಟೀ ಕುಡಿದೆವು. ಇವೆಲ್ಲವೂ ರಾಜಕಾರಣ ಹೊರತುಪಡಿಸಿ ಇರುವ ಸಂಬಂಧಗಳು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೊಂದಿಗೂ ಇಂತಹದ್ದೇ ಸಂಬಂಧವಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೊಡ್ಡವರು. ಅಲ್ಲಿಯವರೆಗೂ ನಾನು ಹೋಗಿಲ್ಲ ಎಂದು ಹೇಳಿದರು.