ಹುಬ್ಬಳ್ಳಿ: ಮೀಸಲಾತಿ ವಿಚಾರದಲ್ಲೂ ಕಾಂಗ್ರೆಸ್ ರಾಜಕೀಯಕ್ಕೆ ಮುಂದಾಗಿದೆ. ಇದು ಸರಿಯಾದ ನಡೆ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವರ್ಗದವರೊಂದಿಗೆ ಚರ್ಚಿಸಿ ಸರ್ವರಿಗೂ ಸಮ್ಮತವಾಗುವ ರೀತಿಯಲ್ಲಿ ಮೀಸಲಾತಿ ಹಂಚಿಕೆ ಮಾಡಿದ್ದರೂ ಸಹ ಅದನ್ನು ವಿರೋಧಿಸುವ, ಪ್ರಚೋದನೆ ನೀಡುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು.
50-60 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಒಳ ಮೀಸಲು ಜಾರಿಗೆ ಮುಂದಾಗಲಿಲ್ಲ, ಸಿಎಂ ಧೈರ್ಯ ಮಾಡಿ ಜಾರಿಗೆ ಮುಂದಾದರೆ ವಿರೋಧಿಸುವ ಕಾರ್ಯಕ್ಕೆ ಮುಂದಾಗಿದೆ ಎಂದರು.
ಮೀಸಲು ವಿಚಾರದಲ್ಲಿ ಬಂಜಾರ ಸಮಾಜದವರು ಕೆಲ ತಪ್ಪು ತಿಳಿವಳಿಕೆಯಿಂದ ಹೋರಾಟಕ್ಕೆ ಮುಂದಾಗಿರುವುದು, ಮಾಜಿ ಸಿಎಂ ಯಡಿಯೂರಪ್ಪ ಅವರ ನಿವಾಸದ ಮೇಲೆ ಕಲ್ಲು ಎಸೆದಿರುವುದು ದುರದೃಷ್ಟಕರ. ಮೀಸಲು ಬಗ್ಗೆ ಏನಾದರು ಗೊಂದಲ, ಶಂಕೆಗಳಿದ್ದರೆ ನೇರವಾಗಿ ಸಿಎಂ ಅವರೊಂದಿಗೆ ಚರ್ಚಿಸಲಿ, ಅದು ಬಿಟ್ಟು ಬೀದಿಗಿಳಿಯುವುದು ಬೇಡ ಎಂದರು.
Related Articles
ಇದನ್ನೂ ಓದಿ:ಶಿಕಾರಿಪುರದ ಗಲಭೆ ಹಿಂದೆ ರಾಜಕೀಯ ವಾಸನೆ: ಗೃಹ ಸಚಿವ ಆರಗ ಜ್ಞಾನೇಂದ್ರ
ರಾಹುಲ್ ಗಾಂಧಿ ಪ್ರಕರಣದಲ್ಲಿ ಕೇಂದ್ರ ಸರಕಾರ ರಾಜಕೀಯ ಸೇಡಿನ ಕ್ರಮಕ್ಕೆ ಮುಂದಾಗಿಲ್ಲ. ಬದಲಾಗಿ ಕೋರ್ಟ್ ತೀರ್ಪು, ಕಾನೂನು ಅಡಿಯಲ್ಲಿ ಕ್ರಮ ಕೈಗೊಂಡಿದೆ. ತಪ್ಪು ಎನ್ನಿಸಿದರೆ ಕಾಂಗ್ರೆಸ್ ನವರು ಕೋರ್ಟ್ ಮೊರೆ ಹೋಗಲಿ, ಕಾನೂನು ಹೋರಾಟ ಮಾಡುವುದು ಬಿಟ್ಟು, ಬೀದಿ ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಎಲ್ಲೆಲ್ಲಿ ಹೋಗೊದ್ದಾರೊ ಅಲ್ಲಿ ಕಾಂಗ್ರೆಸ್ ಅವಸಾನ ಕಂಡಿದೆ ರಾಜ್ಯಕ್ಕೆ ಬಂದರೆ ಇಲ್ಲಿಯೂ ಅದೇ ಆಗಲಿದೆ. ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಪಕ್ಷ ಅಭ್ಯರ್ಥಿಗಳ ಪಟ್ಟಿ ಘೋಷಣೆ ವಿಳಂಬವಾಗಿಲ್ಲ ಬದಲಾಗಿ, ಚುನಾವಣೆ ದಿನಾಂಕ ಘೋಷಣೆ ನಂತರದಲ್ಲಿ ಪಟ್ಟಿ ಬಿಡುಗಡೆ ಆಗಲಿದೆ ಎಂದರು.