ಕರ್ನಾಟಕದಲ್ಲಿ ಚುನಾವಣೆಗಳು ಘೋಷಣೆಯಾಗಿ, ರಾಜಕೀಯ ಪಕ್ಷಗಳೆಲ್ಲಾ ಪ್ರಚಾರ ಮಾಡುವುದಕ್ಕೆ ಸಿನಿಮಾ ತಾರೆಯರ ಬೆನ್ನುಬಿದ್ದರೆ, ಈ ಕಡೆ ಸಿನಿಮಾದವರು ರಾಜಕೀಯವನ್ನು ತೋರಿಸುವುದಕ್ಕೆ ಮುಂದಾಗುತ್ತಿದ್ದಾರೆ. ಕನ್ನಡದಲ್ಲಿ ರಾಜಕೀಯ, ಚುನಾವಣೆಗಳಿಗೆ ಸಂಬಂಧಪಟ್ಟ ಸಿನಿಮಾಗಳು ಹೊಸದೇನಲ್ಲ. ಈಗಾಗಲೇ ಸಾಕಷ್ಟು ಅಂತಹ ಚಿತ್ರಗಳು ಬಂದಿವೆ. ಆದರೆ, ಈ ವಾರ ರಾಜಕೀಯ ಮತ್ತು ಚುನಾವಣೆಗೆ ಸಂಬಂಧಿಸಿದ ಮೂರು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಹೌದು, ಈ ಶುಕ್ರವಾರ (ಏಪ್ರಿಲ್ 27) ಮೂರು ರಾಜಕೀಯ ಕುರಿತಾದ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಟಿ.ಎಸ್. ನಾಗಾಭರಣರ “ಕಾನೂರಾಯಣ’, ನಂಜುಂಡೇಗೌಡರ “ಹೆಬ್ಬೆಟ್ಟ್ ರಾಮಕ್ಕ’ ಮತ್ತು ಅಶೋಕ್ ಕಶ್ಯಪ್ ಅವರ “ಧ್ವಜ’ ಚಿತ್ರಗಳು ಬಿಡುಗಡೆಯಾಗುತ್ತಿವೆ. “ಕಾನೂರಾಯಣ’ದಲ್ಲಿ ಪ್ರಮುಖವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಆರ್ಥಿಕ ಶಿಸ್ತಿನ ಬಗ್ಗೆ ಬೆಳಕು ಚೆಲ್ಲಲಾಗಿದೆ.
ಗ್ರಾಮೀಣ ಭಾಗದಲ್ಲಿ ಆರ್ಥಿಕ ಶಿಸ್ತು ಸಾಧಿಸುವುದು ಹೇಗೆ ಎಂಬ ವಿಷಯದ ಕುರಿತ ಈ ಚಿತ್ರದಲ್ಲಿ ಹಳ್ಳಿಗಳಲ್ಲಿನ ರಾಜಕೀಯ, ಚುನಾವಣೆ ಎಲ್ಲವೂ ಇದೆ. ಇನ್ನು “ಹೆಬ್ಬೆಟ್ಟ್ ರಾಮಕ್ಕ’ ಮಹಿಳೆ ಸುತ್ತ ಸಾಗುವ ಕಥೆ. ರಾಜ್ಯದಲ್ಲಿ ಮಹಿಳಾ ಮೀಸಲಾತಿ ಎಷ್ಟರಮಟ್ಟಿಗೆ ಜಾರಿಗೆ ಬಂದಿದೆ, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಇರುವ ಮೀಸಲಾತಿ ಸರಿಯಾಗಿ ಸದ್ಬಳಕೆಯಾಗುತ್ತಿದೆಯಾ,
ಆನಕ್ಷರಸ್ಥ ಮಹಿಳೆಯರು ಚುನಾವಣೆಯಲ್ಲಿ ಗೆದ್ದು ಆ ಸ್ಥಾನವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ವಿಷಯಗಳ ಕುರಿತಾಗಿ ಚಿತ್ರ ಸುತ್ತುತ್ತದೆ. ಇನ್ನು “ಧ್ವಜ’ ಚಿತ್ರವು ತಮಿಳಿನ “ಕೋಡಿ’ಯ ರೀಮೇಕ್ ಆಗಿದ್ದು, ರಾಜಕೀಯ ಪಕ್ಷದ ಒಬ್ಬ ಕಾರ್ಯಕರ್ತನ ಹತ್ಯೆಯ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ. ಹಾಗಾಗಿ ಈ ಮೂರೂ ಚಿತ್ರಗಳು ರಾಜಕೀಯ, ಚುನಾವಣೆಗಳ ಸುತ್ತುತ್ತವೆ ಎನ್ನುವುದು ವಿಶೇಷ.
“ಕಾನೂರಾಯಣ’ ಚಿತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟ ಟ್ರಸ್ಟ್‌ನ ವತಿಯಿಂದ ನಿರ್ಮಾಣವಾಗಿದೆ. ಆ ಟ್ರಸ್ಟ್‌ನ ವಿವಿಧ ಸಂಘಗಳಲ್ಲಿ ಸುಮಾರು 20 ಲಕ್ಷ ಸದಸ್ಯರಿದ್ದು, ಒಬ್ಬೊಬ್ಬ ಸದಸ್ಯ ತಲಾ 20 ರೂಪಾಯಿ ಹಾಕಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಒಂದು ಚಿತ್ರಕ್ಕೆ ಅಷ್ಟೊಂದು ಸಂಖ್ಯೆಯ ನಿರ್ಮಾಪಕರು ಇದೇ ಮೊದಲು.
ಈ ಚಿತ್ರದಲ್ಲಿ ಸ್ಕಂದ ಅಶೋಕ್, ಸೋನು ಗೌಡ, ದೊಡ್ಡಣ್ಣ, ಸುಂದರ್ ರಾಜ್, ಅಶ್ವತ್ಥ್ ನೀನಾಸಂ ಸೇರಿದಂತೆ ಹಲವರು ನಟಿಸಿದ್ದಾರೆ. “ಹೆಬ್ಬೆಟ್ಟ್ ರಾಮಕ್ಕ’ ಚಿತ್ರದಲ್ಲಿ ದೇವರಾಜ್, ತಾರಾ ಮುಂತಾದವರು ನಟಿಸಿದರೆ, “ಧ್ವಜ’ ಚಿತ್ರದಲ್ಲಿ ರವಿ, ಪ್ರಿಯಾಮಣಿ, ಟಿ.ಎನ್. ಸೀತಾರಾಂ, ದಿವ್ಯ ಉರುಡುಗ ಮುಂತಾದವರು ನಟಿಸಿದ್ದಾರೆ.