ಬೆಂಗಳೂರು: ವೀರಶೈವ-ಲಿಂಗಾಯತ ಎರಡು ಒಂದೇ ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಆದರೆ, ಕೆಲವು ರಾಜಕಾರಣಿಗಳು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಆರೋಪಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅಖೀಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ಬಿ.ಎಸ್. ಸಚ್ಚಿದಾನಂದ ಮೂರ್ತಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾಸಭೆಯನ್ನು ಗಣನೆಗೆ ತೆಗೆದುಕೊಳ್ಳದೆ ವೀರಶೈವ-ಲಿಂಗಾಯತರ ಬಗ್ಗೆ ಯಾವುದೇ ಜ್ಞಾನವಿಲ್ಲದಿರುವವರ ಸಮಿತಿ ರಚಿಸಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
ಅದು ತಿರಸ್ಕಾರವೂ ಆಗಿತ್ತು. ಹೈಕೋರ್ಟ್ ಸಹ ಕೇಂದ್ರದ ನಿಲುವನ್ನು ಸಮ್ಮತಿಸಿದೆ. ಈ ಹಿಂದೆ ಮಹಾಸಭಾ ವತಿಯಿಂದ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಯಲ್ಲಿ “ವೀರಶೈವ-ಲಿಂಗಾಯತ ಧರ್ಮಕ್ಕೆ’ ಪ್ರತ್ಯೇಕ ಧರ್ಮ ಮತ್ತು ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ನೀಡುವಂತೆ ಮನವಿ ಮಾಡಲಾಗಿತ್ತು. ಈ ಮನವಿಯಲ್ಲಿ ಎಲ್ಲೂ ವೀರಶೈವ-ಲಿಂಗಾಯತ ಎರಡಕ್ಕೂ ಪ್ರತ್ಯೇಕ ಧರ್ಮ ನೀಡುವಂತೆ ಪ್ರಸ್ತಾಪಿಸಿರಲಿಲ್ಲ.
ಈ ಮನವಿ ಪತ್ರಕ್ಕೆ ಮಾಜಿ ಸಿಎಂ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಗೃಹ ಸಚಿವ ಎಂ.ಬಿ ಪಾಟೀಲ್, ವಿಧಾನಪರಿಷತ್ ಸದಸ್ಯ ಬಿ.ಎಸ್ ಹೊರಟ್ಟಿ, ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಸಂಸದರು ಸಹಿಹಾಕಿದ್ದರು. ಆದರೆ, ಇದನ್ನು ಮಾಜಿ ಮುಖ್ಯಮಂತ್ರಿಗಳು ಅರ್ಥಮಾಡಿಕೊಳ್ಳದೆ ಧರ್ಮದ ಬಗ್ಗೆ ವಿನಾಕಾರಣ ಮಾತನಾಡುತ್ತಿದ್ದಾರೆ.
“ಧರ್ಮರಾಜಕಾರಣ ಒಳ್ಳೆಯದಲ್ಲ. ಪ್ರಸ್ತಾವದ ಕುರಿತು ಮಹಾಸಭೆ ಮತ್ತು ಸಮಾಜದ ಸ್ವಾಮೀಜಿಗಳು ತೀರ್ಮಾನ ತೆಗೆದುಕೊಳ್ಳಲಿದ್ದಾರೆ’ ಎಂದು ಕೆಲವು ಸಚಿವರು ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಸ್ವಾಗತಾರ್ಹ. ಇದನ್ನು ಎಲ್ಲಾ ರಾಜಕಾರಣಿಗಳೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.