Advertisement

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ನಿಧನ : ರಾಜಕೀಯ ಮುಖಂಡರ ಸಂತಾಪ

10:42 AM Mar 11, 2023 | Team Udayavani |

ಬೆಂಗಳೂರು: ಮಾಜಿ ಸಂಸದರು ಹಾಗೂ ಕೆ.ಪಿ.ಸಿ.ಸಿ.ಯ ಕಾರ್ಯಾಧ್ಯಕ್ಷರಾಗಿದ್ದ ಧ್ರುವನಾರಾಯಣ ಅವರು ನಿಧನರಾದ ವಿಷಯ ಅತ್ಯಂತ ಬೇಸರ ಉಂಟುಮಾಡಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತೇನೆ ಹಾಗೂ ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ಈ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ.

Advertisement

ಸಿದ್ದರಾಮಯ್ಯ ಸಂತಾಪ:

ನನ್ನ ಆತ್ಮೀಯರಾದ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಧ್ರುವನಾರಾಯಣ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ‌ಕೋರುತ್ತೇನೆ.

ರಾಜಕೀಯ ನಾಯಕ ಮತ್ತು ಸಂಸದೀಯ ಪಟುವಾಗಿ ತನ್ನ ಶ್ರಮ, ಪ್ರಬುದ್ದತೆ ಮತ್ತು ಬದ್ಧತೆಯಿಂದ ಅತ್ಯುನ್ನತ ಸ್ಥಾನಕ್ಕೇರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಧ್ರುವನಾರಾಯಣ್ ಅವರ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡದ್ದು ನಾಡಿಗೆ ಮತ್ತು ಜನತೆಗೆ ತುಂಬಲಾರದ ನಷ್ಟ. ಅವರ ಸಾಧನೆಯ ಬದುಕು ಶಾಶ್ವತವಾಗಿ ನಮ್ಮ ನೆನಪಲ್ಲಿರುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಧ್ರುವನಾರಾಯಣ ನಿಧನಕ್ಕೆ ಎಂ.ಬಿ.ಪಾಟೀಲ ಸಂತಾಪ:

Advertisement

ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅಕಾಲಿಕ ನಿಧನಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಪಕ್ಷದ ಸಹವರ್ತಿ ನಾಯಕನ‌ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಎಂ.ಬಿ.ಪಾಟೀಲ, ನನ್ನ ಆತ್ಮೀಯರಾಗಿದ್ದ ನಮ್ಮ ಪಕ್ಷದ ಕಾರ್ಯಧ್ಯಕ್ಷರು, ಮಾಜಿ ಸಂಸದರು, ಸರಳ ಸಜ್ಜನಿಕೆಯ ಸ್ನೇಹಜೀವಿ ರಾಜಕಾರಣಿ ಎಂದೇ ಖ್ಯಾತರಾಗಿದ್ದರು. ಧ್ರುವನಾರಾಯಣ ನಿಧನದ ಸುದ್ದಿ ಆಘಾತ ತರಿಸಿದ್ದು ತೀವ್ರ ಕಂಬನಿ ಮಿಡಿಯುತ್ತೇನೆ.  ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಹೆಚ್‌ ಡಿಡಿ ಸಂತಾಪ:

ರಾಜ್ಯ ಕಾಂಗ್ರೆಸ್ ನ ಹಿರಿಯ ಮುಖಂಡ ಆರ್. ಧ್ರುವನಾರಾಯಣ ಅವರು ನಿಧನರಾದ ಸುದ್ದಿ ಕೇಳಿ ತೀವ್ರ ಆಘಾತ ಮತ್ತು ದುಃಖವಾಗಿದೆ. ಇವರ ಅಗಲಿಕೆಯಿಂದ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರಿಗೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬ ಹಾಗೂ ನಾಡಿನ ಜನತೆಗೆ ಈ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಹೆಚ್‌.ಡಿ. ಮಾಜಿ ಪ್ರಧಾನಿ ದೇವೇಗೌಡ ಅವರು ಸಂತಾಪ ಸೂಚಿಸಿದ್ದಾರೆ.

ಹೆಚ್‌. ಡಿಕೆ ಸಂತಾಪ:

ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರು, ಸರಳ ಸಜ್ಜನ ರಾಜಕಾರಣಿಯಾಗಿದ್ದ ಆರ್.ಧ್ರುವನಾರಾಯಣ ಅವರು ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿ ಕೇಳಿ ನನಗೆ ತೀವ್ರ ದಿಗ್ಭ್ರಮೆ, ಆಘಾತ ಉಂಟಾಗಿದೆ. ಅತ್ಯಂತ ಸ್ನೇಹಶೀಲ ವ್ಯಕ್ತಿಯಾಗಿದ್ದ ಅವರು ವಿಭಿನ್ನ ರಾಜಕಾರಣಿ ಆಗಿದ್ದರು. ಸೋಲುಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತಿದ್ದ ಅವರು ಮತ್ತೊಬ್ಬರಿಗೆ ಮಾದರಿ ಆಗಿದ್ದರಲ್ಲದೆ, ಶಾಸಕರಾಗಿ, ಲೋಕಸಭೆ ಸದಸ್ಯರಾಗಿ ರಾಜ್ಯಕ್ಕೆ ಎಣೆ ಇಲ್ಲದ ಸೇವೆ ಮಾಡಿದ್ದರು. ಅವರನ್ನು ಕಳೆದುಕೊಂಡಿದ್ದು ವೈಯಕ್ತಿಕವಾಗಿ ನನಗೆ ಬಹಳ ದುಃಖ ಉಂಟು ಮಾಡಿದೆ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next