Advertisement

ರಾಜಕೀಯ ಸ್ಥಾನ ಪಲ್ಲಟ ಶೋಭೆ ತರದು

01:23 AM Jul 08, 2019 | Lakshmi GovindaRaj |

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಸ್ಥಾನಪಲ್ಲಟ ಶೋಭೆ ತರುವುದಿಲ್ಲ ಎಂದು ಕವಿ ಪ್ರೊ.ದೊಡ್ಡರಂಗೇಗೌಡ ಅವರು ಅಭಿಪ್ರಾಯಪಟ್ಟರು. ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ, ನಯನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿ ಅವರು ಮಾತನಾಡಿದರು.

Advertisement

ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ನೋಡಿದಾಗ ಮನಸ್ಸಿಗೆ ನೋವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ ಕೆಲಸಗಳು ನಡೆಯುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಿದ ಜನತೆಗೆ ಗೌರವ ಇಲ್ಲದಂತಾಗಿದೆ. ಈ ರೀತಿಯ ಬೆಳವಣಿಗೆಗಳು ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದರು.

ನಮ್ಮ ಸುತ್ತಮುತ್ತ ಹಲವು ಪ್ರತಿಭಾವಂತರಿದ್ದಾರೆ. ಅವರು ಎಲೆಮರೆ ಕಾಯಂತೆ ಸಂಸ್ಕೃತಿ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ. ಇಂಥವರನ್ನು ಸರ್ಕಾರ ಮತ್ತು ಸಂಘ ಸಂಸ್ಥೆಗಳು ಹುಡುಕಿ ಗೌರವಿಸಬೇಕು. ಆ ನಿಟ್ಟನಲ್ಲಿ ಆತ್ಮಶ್ರೀ ಸಾಂಸ್ಕೃತಿಕ ಪ್ರತಿಷ್ಠಾನ ಉತ್ತಮ ಕೆಲಸ ಮಾಡುತ್ತಿದ್ದು, ಈ ಕಾರ್ಯ ಹೀಗೇ ನಡೆಯಲಿ ಎಂದು ಆಶಿಸಿದರು.

ಸಂಸ್ಕೃತದಲ್ಲಿ ಜ್ಞಾನ ಸಂಪತ್ತಿದೆ: ಸಂಸ್ಕೃತ ಭಾಷೆಯಲ್ಲಿ ಅಪಾರ ಜ್ಞಾನ ಸಂಪತ್ತಿದ್ದು, ಜರ್ಮನ್ನರೂ ಈಗ ಸಂಸ್ಕೃತ ಓದಿನ ಕಡೆಗೆ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ, ನಾವೆಲ್ಲರೂ ಸಂಸ್ಕೃತದಲ್ಲಿರುವ ತಿರುಳನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಆದರೆ, ನಮ್ಮ ಯುವ ಸಮುದಾಯ ಇಂದು ಮೊಬೈಲ್‌ನಲ್ಲಿಯೇ ಕಾಲ ಕಳೆಯುತ್ತಿದ್ದು, ಪೋಷಕರು ಈ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಎಂದು ತಿಳಿಸಿದರು.

ಮೊಬೈಲ್‌ನಲ್ಲಿ ಕೆಟ್ಟದ್ದೂ ಇದೆ, ಒಳ್ಳೆಯದ್ದೂ ಇದೆ. ಇದರಲ್ಲಿ ಒಳ್ಳೆಯ ಅಂಶಗಳನ್ನ ಮಾತ್ರ ಸ್ವೀಕರಿಸಿ ಸಾಗಬೇಕು. ಪುಸ್ತಕಗಳನ್ನು ಕೊಂಡು ಓದುವ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು ಎಂದು ದೊಡ್ಡರಂಗೇಗೌಡ ಅವರು ಯುವ ಸಮುದಾಯದಲ್ಲಿ ಮನವಿ ಮಾಡಿದರು.

Advertisement

ಪುಸ್ತಕ ಓದುವ ಹವ್ಯಾಸ ಬೆಳೆಸಿ: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಾಯಣ್ಣ ಮಾತನಾಡಿ, ಕನ್ನಡ ಸಾಹಿತ್ಯ ಲೋಕದಲ್ಲಿ ಅಪ್ರತಿಮ ಸಾಹಿತಿಗಳಿದ್ದಾರೆ. ಅಂತಹ ಮೇರು ಸಾಹಿತಿಗಳ ಪುಸ್ತಕಗಳನ್ನು ಓದುವ ಸಂಸ್ಕೃತಿಯನ್ನು ಪೋಷಕರು ಮಕ್ಕಳಲ್ಲಿ ಬೆಳಸಬೇಕು. ಆಗ ಮಾತ್ರ ಕನ್ನಡ ಪರಂಪರೆಯನ್ನು ಸಂರಕ್ಷಿಸಿಕೊಳ್ಳಲು ಸಾಧ್ಯ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕೊಳದ ಮಠದ ಶಾಂತವೀರ ಸ್ವಾಮೀಜಿ, ಪ್ರತಿಷ್ಠಾನದ ಅಧ್ಯಕ್ಷ ಡಾ.ಗುಣವಂತ ಮಂಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next