ಹುಬ್ಬಳ್ಳಿ: ಚುನಾವಣೆ ಘೋಷಣೆಯಾಗುವ ಮೊದಲೇ ಉತ್ತರ ಕರ್ನಾಟಕ ಭಾಗದತ್ತ ಎಲ್ಲ ರಾಜಕೀಯ ಪಕ್ಷಗಳು ದಾಂಗುಡಿ ಇಡುತ್ತಿದ್ದು, ಎಲ್ಲ ಹಿರಿಯ ನಾಯಕರ ಕಣ್ಣು ಇತ್ತಲೇ ನೆಟ್ಟಿದೆ.
ಕಳೆದ ಒಂದು ವಾರದಲ್ಲಿ ಉತ್ತರ ಕರ್ನಾಟಕವನ್ನೇ ಕೇಂದ್ರೀಕರಿಸಿಕೊಂಡಿರುವ ರಾಜಕೀಯ ನೇತಾರರರು ಪ್ರಚಾರ ರ್ಯಾಲಿಯಲ್ಲಿ ತೊಡಗಿದ್ದಾರೆ. ಗುರುವಾರವಂತೂ ಮೂರೂ ರಾಜಕೀಯ ಪಕ್ಷಗಳ ಘಟಾನುಘಟಿಗಳು ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಪ್ರಚಾರದಲ್ಲಿ ತೊಡಗಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಬ್ಬರಿಗೂ ಈ ಭಾಗ ಪ್ರತಿಷ್ಠೆಯ ಕಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಲ್ಯಾಣ ಕರ್ನಾಟಕದಲ್ಲಿ ಅಬ್ಬರದ ಹವಾ ಎಬ್ಬಿಸಿದ್ದರು. ಈ ಮೂಲಕ ಖರ್ಗೆ ನೆಲದಲ್ಲಿಯೇ ಕಾಂಗ್ರೆಸ್‌ಗೆ ಅಭಿವೃದ್ಧಿಯ ಸವಾಲು ಎಸೆದರು.
ಹಾವೇರಿಯಲ್ಲಿ ಕಾಂಗ್ರೆಸ್ ತನ್ನ ಜನಧ್ವನಿ ಯಾತ್ರೆಯನ್ನು ಮುಂದುವರೆಸಿದೆ. ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿಹಾಯ್ದರು. ಕೇಂದ್ರ, ರಾಜ್ಯ ಸರ್ಕಾರಗಳು ಡಂಬಲ್ ಎಂಜಿನ್ ಸರ್ಕಾರವಲ್ಲ. ಬದಲಾಗಿ ಡಬ್ಟಾ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
Related Articles
ಈ ಬೆನ್ನಲ್ಲೇ, ಈಗಾಗಲೇ ಭರವಸೆ ನೀಡಿದಂತೆ ಗೃಹಲಕ್ಷೀ¾ ಯೋಜನೆಯಡಿ ಪ್ರತಿಯೊಂದು ಕುಟುಂಬದ ಮಹಿಳೆಗೆ ಮಾಸಿಕ 2 ಸಾವಿರ ರೂ., ಪ್ರತಿಮನೆಗೆ 200 ಯೂನಿಟ್ ಉಚಿತ ವಿದ್ಯುತ್, 10ಕೆಜಿ ಅಕ್ಕಿಯನ್ನು ಕೊಟ್ಟೇ ಕೊಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಸಂತರು, ಶರಣರ ಮೇಲೆ ಶಪಥ ಮಾಡಿದರು.
ಜೆಡಿಎಸ್ ಪಕ್ಷ ಪಂಚರತ್ನ ಯಾತ್ರೆಯನ್ನು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಗುರುವಾರ ನಡೆಸಿದ್ದು, ಮೋದಿ ಅವರ ಕರ್ನಾಟಕ ಪ್ರವಾಸವನ್ನು ಟೀಕಿಸಿದರು. ಪ್ರಧಾನಿ ಮೋದಿ ಕರ್ನಾಟಕ ರಾಜ್ಯ ಭೇಟಿ ಖೋಖೋ ಕ್ರೀಡೆಯಂತಾಗಿದೆ. ಬರ್ತಾರೆ-ಹೋಗ್ತಾರೆ. ಲಗೋರಿ ಆಟನಾ, ಖೋಖೋ ಆಟನಾ ಎಂದು ತಿಳಿಯದಾಗಿದೆ ಎಂದು ವ್ಯಂಗ್ಯವಾಡಿದರು.
ನಾಳೆ ನಡ್ಡಾ:
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಶನಿವಾರ ವಿಜಯಪುರ ಜಿಲ್ಲೆಯ ಸಿಂಧಗಿಗೆ ಭೇಟಿ ನೀಡಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.