ಜಮ್ಮು:ಸ್ಥಳೀಯ ಚುನಾವಣೆ (ಬ್ಲಾಕ್ ಡೆವಲಪ್ ಮೆಂಟ್ ಕೌನ್ಸಿಲ್) ಘೋಷಣೆಯಾದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಗೃಹ ಬಂಧನದಲ್ಲಿ ಇರಿಸಿದ್ದ ಬಹುತೇಕ ರಾಜಕೀಯ ಮುಖಂಡರನ್ನು ಬುಧವಾರ ಬಿಡುಗಡೆಗೊಳಿಸಿದ್ದು, ನಿರ್ಬಂಧವನ್ನು ತೆರವುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಸೆಪ್ಟೆಂಬರ್ ನಲ್ಲಿ ಬಿಡಿಸಿ(ಬ್ಲಾಕ್ ಡೆವಲಪ್ ಮೆಂಟ್ ಕೌನ್ಸಿಲ್) ಚುನಾವಣೆಯನ್ನು ಘೋಷಿಸಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ವಿವರಿಸಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ನಂತರ ಆಗಸ್ಟ್ 5ರಿಂದ ಮುಂಜಾಗ್ರತಾ ಕ್ರಮವಾಗಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಹಾಗೂ ಜಮ್ಮು-ಕಾಶ್ಮೀರ ನ್ಯಾಷನಲ್ ಪ್ಯಾಂಥರ್ಸ್ ಪಕ್ಷದ ಮುಖಂಡರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು.
ನ್ಯಾಷನಲ್ ಕಾನ್ಫರೆನ್ಸ್ ನ ದೇವೇಂದರ್ ರಾಣಾ, ಎಸ್ ಎಸ್ ಸಾಲಾಥಿಯಾ, ಕಾಂಗ್ರೆಸ್ ನ ರಾಮನ್ ಭಲ್ಲಾ, ಜೆಕೆಎನ್ ಪಿಪಿಯ ಹರ್ಷದೇವ್ ಸಿಂಗ್ ಸೇರಿದಂತೆ ಕೆಲವು ಪ್ರಮುಖ ರಾಜಕೀಯ ಮುಖಂಡರನ್ನು ಬಿಡುಗಡೆಗೊಳಿಸಿದ್ದಾರೆ.
ಏತನ್ಮಧ್ಯೆ ಎನ್ ಸಿಪಿಯ ಓಮರ್ ಅಬ್ದುಲ್ಲಾ, ಫಾರೂಖ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ, ಜಮ್ಮು-ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ಸಜ್ಜಾದ್ ಗನಿ ಸೇರಿದಂತೆ ಹಲವರು ಗೃಹಬಂಧನ ಮುಂದುವರಿಸಲಾಗಿದೆ ಎಂದು ವರದಿ ವಿವರಿಸಿದೆ.