Advertisement

ಯತ್ನಾಳ್‌ ಸರಿಹೋಗದಿದ್ದರೆ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ

12:52 PM Apr 15, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ 3 ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಮೂರು ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ಯ ಮಾಡಿರುವ ಕಾರ್ಯತಂತ್ರಗಳು, ಪಕ್ಷದೊಳಗಿನ ಇತರೆ ಗೊಂದಲಗಳ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಜತೆ ಸಂದರ್ಶನ.

Advertisement

 3 ಕ್ಷೇತ್ರದ ಉಪ ಚುನಾವಣೆ ಹೇಗಿದೆ ?

ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಮತ್ತು ನಾಯಕರು ಶ್ರಮ ವಹಿಸುತ್ತಿದ್ದಾರೆ. ಉಸ್ತುವಾರಿಗಳನ್ನು ನೇಮಿಸಿದ್ದೇವೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ. ಜನರ ಒಲವು ನಮ್ಮ ಪಕ್ಷದ ಪರವಾಗಿದೆ.

 ಚುನಾವಣೆಯಲ್ಲಿ ಸಿಡಿ ಪ್ರಕರಣ ಪರಿಣಾಮ ಬೀರುತ್ತಾ ?

ಉಪ ಚುನಾವಣೆಯಲ್ಲಿ ಸುರೇಶ್‌ ಅಂಗಡಿ ಯವರು ಮಾಡಿರುವ ಕೆಲಸದ ಬಗ್ಗೆ ಅಲ್ಲಿನ ಜನರು ಗುರುತಿಸಿದ್ದಾರೆ. ಅವರ ಸಜ್ಜನ ರಾಜಕೀಯದ ಬಗ್ಗೆ ಅನುಕಂಪ ಇದೆ. ಈ ಕುರಿತು ಅಲ್ಲಿ ಚರ್ಚೆಯಾಗುತ್ತಿವೆ. ಅದನ್ನು ಬಿಟ್ಟು ಬೇರೆ ವಿಷಯ ಅಲ್ಲಿ ಚರ್ಚೆಯಾಗುತ್ತಿಲ್ಲ.

Advertisement

 ಮಸ್ಕಿಯಲ್ಲಿ ಬಿಜೆಪಿ ಹಣ ಹಂಚಿಕೆ ಮಾಡಿ ಚುನಾವಣೆ ಗೆಲ್ಲಲು ಪ್ರಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ?

ಅಂದರೆ, ಕಾಂಗ್ರೆಸ್‌ ಇದುವರೆಗೂ ಹಣ ಹಂಚಿಯೇ ಗೆಲುವು ಸಾಧಿಸಿತ್ತಾ? 73 ವರ್ಷಗಳ ಕಾಲ ಕಾಂಗ್ರೆಸ್‌ ಈ ದೇಶದಲ್ಲಿ ಆಡಳಿತ ಮಾಡಿತ್ತು. ಅವರು ಚುನಾವಣೆಗೆ ಹಣ ಹಂಚಿಯೇ ಗೆಲುವು ಸಾಧಿಸಿದ್ದರಾ? ಸಿದ್ದರಾಮಯ್ಯ ಅವರು ಮೊನ್ನೆಯ ಚುನಾವಣೆಯನ್ನು ಹಣ ಹಂಚಿಯೇ ಗೆಲುವು ಸಾಧಿಸಿದ್ದರಾ? ಅದಕ್ಕೆ ಉತ್ತರ ಕೊಡಲಿ

 ಅಂದ್ರೆ ಅವರು ಹಣ ಹಂಚಿದ್ದರೆ ನೀವೂ ಹಣ ಹಂಚಿಯೇ ಗೆಲ್ಲುತ್ತೀರಾ ?

ಅಲ್ಲಾ ರೀ, ಅವರು ಹಾಗೆ ಗೆದ್ದಿದ್ದರೆ ನಾವೂ ಹಾಗೇ ಗೆಲ್ಲುತ್ತೇವೆ. ಮೊದಲು ಅವರು ಹಣ ಹಂಚಿ ಗೆದ್ದಿದ್ದೇವೆ ಎಂದು ಹೇಳಲಿ. ನಾವೂ ಮಾಡ್ತೀವಿ ಅಂತ ಹೇಳಿದ್ದಲ್ಲ. ಅವರು ಹಣ ಕೊಟ್ಟೇ ಗೆದ್ದಿದ್ದಾ ?

 ತೇಜಸ್ವಿನಿ ಅನಂತಕುಮಾರ್‌ , ಮಂಗಳಾ ಅಂಗಡಿ ಅವರಿಗೆ ಟಿಕೆಟ್‌ ನೀಡುವ ವಿಚಾರದಲ್ಲಿ ದ್ವಂದ್ವ ನಿಲುವು ಯಾಕೆ ?

ಚುನಾವಣೆಯಲ್ಲಿ ಯಾವ ರೀತಿಯ ತೀರ್ಮಾ ನ ತೆಗೆದುಕೊಳ್ಳಬೇಕು ಎನ್ನುವುದನ್ನು ಪಕ್ಷದ ಹೈಕಮಾಂಡ್‌ ತೀರ್ಮಾನಿಸುತ್ತದೆ. ಇಲ್ಲಿ ಅನಿವಾ ರ್ಯವಾಗಿ ತೀರ್ಮಾನ ತೆಗೆದುಕೊಂಡಿದ್ದೇವೆ. ಗೆಲ್ಲುವ ದೃಷ್ಟಿಯಿಂದ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ.

 ಬಿಜೆಪಿಯಲ್ಲಿ ನಿಮ್ಮನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ ಅಂತ ಸಿದ್ದರಾಮಯ್ಯ ಆರೋಪಿಸುತ್ತಾರಲ್ಲಾ ?

ಅವರನ್ನು ಕಾಂಗ್ರೆಸ್‌ನಲ್ಲಿ ಲೆಕ್ಕಕ್ಕೇ ಇಟ್ಟಿಲ್ಲ. ಅವರಿಗೆ ನನ್ನ ವಿಷಯವೇಕೆ ? ಮುಖ್ಯಮಂತ್ರಿಯಾದವರನ್ನು ಜನರೂ ಕಡೆಗಣಿಸಿದ್ದಾರೆ. ಕಾಂಗ್ರೆಸ್‌ ಲೆಕ್ಕಕ್ಕೆ ಇಟ್ಟಿಲ್ಲ. ಒಂದು ಕ್ಷೇತ್ರದಲ್ಲಿ ಜನರೇ ಅವರನ್ನು ಸೋಲಿಸಿ ಕಳುಹಿಸಿದ್ದಾರೆ. ಅದಕ್ಕೆ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪ್ರಚಾರದಲ್ಲಿರಲಿ ಅಂತ ಮಾತನಾಡುತ್ತಾರೆ.

ಚುನಾವಣೆ ನಂತರ ನಾಯಕತ್ವ ಬದಲಾವಣೆ ಆಗುತ್ತದಾ ?

ಈ ಚುನಾವಣೆಯಲ್ಲಿ ಗೆಲ್ಲುವುದೊಂದೇ ನಮ್ಮ ಗುರಿ. ನಮ್ಮ ಪಕ್ಷದ ಎಲ್ಲ ನಾಯಕರೂ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅದನ್ನೇ ಅಂತಿಮವಾಗಿ ಕೆಲಸ ಮಾಡುತ್ತಿದೇವೆ. ನಮ್ಮಲ್ಲಿ ನಾಯಕತ್ವ ಬದಲಾವಣೆಯ ಯಾವುದೇ ಪ್ರಶ್ನೆ ಇಲ್ಲ. ಇದೆಲ್ಲವೂ ಊಹಾಪೋಹಗಳು.

 ಮುಖ್ಯಮಂತ್ರಿ ವಿರುದ್ಧ ಹಿರಿಯ ಸಚಿವ ಈಶ್ವರಪ್ಪ ಅವರು ನೇರವಾಗಿ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರಲ್ಲಾ ?

ಈಶ್ವರಪ್ಪ ಅವರು ತಮ್ಮ ಇಲಾಖೆಯಲ್ಲಿನ ಅನುದಾನ ಹಂಚಿಕೆ ಬಗ್ಗೆ ರಾಜ್ಯಪಾಲರ ಜೊತೆ ಚರ್ಚೆ ಮಾಡಿದ್ದಾರೆ. ಅವರು ಯಾವುದೇ ರೀತಿಯ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ನನಗೂ ಪತ್ರ ಬರೆದಿದ್ದರು. ಆ ವಿಷಯ ಚರ್ಚಿಸಿ ಬಗೆಹರಿದಿದೆ.

 ಉಪ ಚುನಾವಣೆ ಮುಗಿದ ಮೇಲೆ ಯತ್ನಾಳ್‌ ಅವರನ್ನು ತೆಗೆದು ಹಾಕುತ್ತೀರಾ ?

ಈಗಾಗಲೇ ಯತ್ನಾಳ್‌ಗೆ ನೋಟಿಸ್‌ ನೀಡಲಾಗಿದೆ. ನಮ್ಮಲ್ಲಿ ಕೇಂದ್ರದಲ್ಲಿ ಶಿಸ್ತು ಸಮಿತಿ ಇದೆ. ಆ ಸಮಿತಿ ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ. ಮೂರು ಬಾರಿ ನೋಟಿಸ್‌ ಕೊಡಬೇಕು ಅಂತ ನಿಯಮ ಇದೆ. ಆ ನಂತರವೂ ಯತ್ನಾಳ್‌ ಸರಿ ಹೋಗದಿದ್ದರೆ. ಅವರ ಮೇಲೆ ಏನು  ಕ್ರಮ ಕೈಗೊಳ್ಳಬೇಕೋ ಅದನ್ನು ಮೇಲಿನವರು ತೆಗೆದುಕೊಳ್ಳುತ್ತಾರೆ

 ಚುನಾವಣೆ ಸಂದರ್ಭದಲ್ಲಿ ಕ್ರಮ ಕೈಗೊಂಡರೆ ಪಂಚಮ ಸಾಲಿ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎನ್ನುವ ಕಾರಣಕ್ಕೆ ವಿಳಂಬ ಮಾಡುತ್ತಿದ್ದೀರಾ?

ಯತ್ನಾಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡರೂ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸಮುದಾಯಕ್ಕೂ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆಗಳಿಗೂ ಸಂಬಂಧವಿಲ್ಲ.

-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next