ಚಿಕ್ಕಮಗಳೂರು: ಹುಲ್ಲೆಮನೆ ಕುಂದೂರಿನಲ್ಲಿ ಮಹಿಳೆ ಮೇಲೆ ಕಾಡಾನೆ ದಾಳಿ ಪ್ರಕರಣಕ್ಕೆ ಸಂಬಂಧಿಸಿ ರಾಜಕೀಯ ಮತ್ತು ಇತರ ವಿಚಾರಗಳಿಗಾಗಿ ಮೂಡಿಗೆರೆ ಚರ್ಚೆಯ ಕೇಂದ್ರ ಬಿಂದುವಾಗಿದ್ದು, ಬಿಜೆಪಿ ಟಿಕೆಟ್ ಆಕಾಂಕ್ಷಿ ದೀಪಕ್ ದೊಡ್ಡಯ್ಯ ಅಮಾವಾಸ್ಯೆಯ ದಿನ ಈಶ್ವರನ ಎದುರು ಪ್ರಮಾಣ ಮಾಡಿರುವುದು ಹೊಸ ಚರ್ಚೆ ಹುಟ್ಟು ಹಾಕಿದೆ.
ಘಟನೆ ನಡೆದ ಸಂಜೆ ಸ್ಥಳಕ್ಕೆ ಹೋಗಿದ್ದಾಗ ಶಾಸಕ ಕುಮಾರಸ್ವಾಮಿ ಮೇಲೆ ಉದ್ರಿಕ್ತರು ಕೈ ಮಾಡಿದ್ದರು, ಬಟ್ಟೆಗಳನ್ನು ಹರಿದು ಹಾಕಲಾಗಿತ್ತು. ಈ ವೇಳೆ ದೀಪಕ್ ದೊಡ್ಡಯ್ಯ ವಿರುದ್ಧ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದರು. ದೀಪಕ್ ದೊಡ್ಡಯ್ಯ ಸಂಚಿನಿಂದಲೇ ಹಲ್ಲೆಯಾಗಿದೆ ಎಂದಿದ್ದರು.
ಆ ಹಲ್ಲೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಅಮಾವಾಸ್ಯೆ ದಿನ ಓಂಕಾರೇಶ್ವರನ ಸನ್ನಿಧಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಅರ್ಚಕರ ಸಮ್ಮುಖದಲ್ಲಿ ಪ್ರಸಾದ ಮುಟ್ಟಿ ದೀಪಕ್ ದೊಡ್ಡಯ್ಯ ಪ್ರಮಾಣ ಮಾಡಿದ್ದಾರೆ.
ಎಸ್ ಸಿ ಮೀಸಲು ಕ್ಷೇತ್ರವಾದ ಮೂಡಿಗೆರೆಯಲ್ಲಿ ದೀಪಕ್ ದೊಡ್ಡಯ್ಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು,ಈ ಘಟನೆಗಳು ರಾಜಕೀಯವಾಗಿ ತೀವ್ರ ಚರ್ಚೆಗಳಿಗೆ ಕಾರಣವಾಗಿದೆ.