ಉಡುಪಿ: ರಾಜಕೀಯ ಸ್ವಾತಂತ್ರ್ಯದಿಂದ ರಾಮರಾಜ್ಯವೂ, ಗಾಂಧೀಜಿಯವರ ಸ್ವರಾಜ್ಯ ಕಲ್ಪನೆ ಯಿಂದ ಗ್ರಾಮೀಣ ಬದುಕಿನ ಸುರಾಜ್ಯವೂ ಕೈಗೂಡುವಂತಾಗಬೇಕು ಎಂದು ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಶನ್‌ನ ಸಹಾಯಕ ಪ್ರಾಧ್ಯಾಪಕ ಶ್ರೀರಾಜ್ ಗುಡಿ ಆಶಯ ವ್ಯಕ್ತಪಡಿಸಿದರು.
ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದಿಂದ ಬುಧವಾರ ಆಯೋಜಿಸಿದ ಗಾಂಧಿ ಜಯಂತಿಯಂದು ಪ್ರಧಾನ ಉಪನ್ಯಾಸ ನೀಡಿದ ಅವರು ಪತ್ರಕರ್ತ, ರಾಜಕಾರಣಿ, ಮುತ್ಸದ್ದಿ, ಸಾಮಾಜಿಕ ಸುಧಾರಣೆಕಾರ, ಆರ್ಥಿಕ ತಜ್ಞ, ಪರಿಸರವಾದಿ, ಆರೋಗ್ಯದ ವಿಷಯದಲ್ಲಿ ವೈದ್ಯ ಹೀಗೆ ಅನೇಕಾನೇಕ ಬಗೆಗಳಲ್ಲಿ ಗಾಂಧಿಯವರನ್ನು ಅರ್ಥೈಸಬಹುದು, ಕಣ್ಣು ತೆರೆದು ನೋಡಿದರೆ ಬೇರೆ ಬೇರೆ ತೆರನಾದ ಗಾಂಧಿ ಕಾಣಿಸಿ ಕೊಳ್ಳುತ್ತಾರೆ ಎಂದರು.
ಗಾಂಧಿಯವರು ಸ್ವಾತಂತ್ರ್ಯ ಎನ್ನುವು ದನ್ನು ಸ್ವರಾಜ್ಯ (ಸೆಲ್ಫ್ ರೂಲ್) ಎಂದು ನೋಡಿದರು. ನಮಗೆ ನಾವೇ ಆಡಳಿತವನ್ನು ಮಾಡುವ ಬಗೆ ಇದು. ಈಗ ಸಿಕ್ಕಿದ ರಾಜಕೀಯ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಲಿಕ್ಕಾಗಿ ಗಾಂಧಿ ಪರಿಗಣಿಸಿದರು. ಸ್ವರಾಜ್ಯವನ್ನು ರಾಜಕೀಯ ಶಾಸ್ತ್ರವಾಗಿ ನೋಡದೆ ವ್ಯಕ್ತಿಗತವಾಗಿ ನೋಡ ಬೇಕೆಂದು ಹೇಳುತ್ತಿದ್ದರು. ಕೆಲವು ಬಾರಿ ಪ್ರಜಾಪ್ರಭುತ್ವದಲ್ಲಿ ನಿರಂಕುಶತೆಯೂ ಬರಬಹುದು, ನಾವೇ ಚುನಾಯಿಸಿದ ವ್ಯಕ್ತಿಗಳಿಗೆ ಅಹಂಕಾರ ಬಂದಾಗ ಅವರನ್ನು ಪ್ರಶ್ನಿಸುವ ಆತ್ಮಾನುಶಾಸನ ವನ್ನು ಅಳವಡಿಸಿದರೆ ಪ್ರಶ್ನಿಸುವ ಅಧಿಕಾರ ಬರುತ್ತದೆ ಎಂದು ಗಾಂಧಿ ನಂಬಿದ್ದರು ಎಂದು ಗುಡಿ ಹೇಳಿದರು.
ಗ್ರಾಮೀಣ ಭಾಗದ ಸುರಾಜ್ಯ ಸ್ಥಾಪನೆಯಾಗಬೇಕಾದರೆ ಅಲ್ಲಲ್ಲಿ ಸ್ಥಳೀಯವಾಗಿ ಉದ್ಯೋಗ ದೊರಕ ಬೇಕೆಂಬ ಕಲ್ಪನೆ ಅವರಿಗಿತ್ತು. ಉದಾಹರಣೆಗೆ ಇಲ್ಲಿನ ನೇಕಾರಿಕೆ ನಶಿಸುತ್ತಿದೆ. ನಾವು ನಿತ್ಯ ಖಾದಿಧಾರಿ ಗಳಾಗದಿದ್ದರೂ ವರ್ಷಕ್ಕೊಮ್ಮೆ ಸ್ಥಳೀಯವಾಗಿ ತಯಾರಾದ ಬಟ್ಟೆ ಖರೀದಿಸಿದರೂ ಸಾಕು. ಸ್ವಾತಂತ್ರ್ಯ, ಸ್ವರಾಜ್ಯ, ಸುರಾಜ್ಯವೆಂದರೆ ನನ್ನ ಸಮಾಜ, ನನ್ನ ಊರಿನ ಜನರಿಗೆ ಉದ್ಯೋಗ ಸಿಗುವಂತಹ ಮಾನಸಿಕತೆ ಬೆಳೆಯಬೇಕು. ದೂರದ ಅಮೆರಿಕಕ್ಕೆ ಹೋಗುವ ಬದಲು ಗ್ರಾಮಗಳಲ್ಲಿ ಅದನ್ನೇ ಕಾಣುವ ದಿನಗಳು ಬರಬೇಕಾಗಿದೆ ಎಂದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಜಿ. ವಿಜಯ, ಪ.ಪೂ.ಕಾ. ಪ್ರಾಂಶುಪಾಲೆ ಮಾಲತಿದೇವಿ ಉಪಸ್ಥಿತರಿದ್ದರು. ಗಾಂಧಿ ಅಧ್ಯಯನ ಕೇಂದ್ರದ ಸಂಶೋಧಕ ಯು. ವಿನೀತ್ ರಾವ್ ಸ್ವಾಗತಿಸಿ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.
ಅಮೆರಿಕಕ್ಕೆ ಹೋಗದ ಗಾಂಧಿಗೆ ಈಗಲ್ಲಿ ಅಧ್ಯಯನ
ಈಗ ಗಾಂಧಿಯವರ 150ನೇ ಜನ್ಮಜಯಂತಿ ಸಂದರ್ಭ ಅಮೆರಿಕಕ್ಕೆ ಹೋಗದ ಗಾಂಧಿ ಕುರಿತು ಅಲ್ಲಿ ಅಧ್ಯಯನ ನಡೆಯುತ್ತಿದೆ. ಅವರನ್ನು ವಿರೋಧಿಸಿದ ಐರೋಪ್ಯ ರಾಷ್ಟ್ರಗಳಲ್ಲಿ ಈಗ ಗಾಂಧಿ ಪ್ರತಿಮೆಗೆ ಹಾರಾರ್ಪಣೆ ಆಗುತ್ತಿದೆ. ಈಗಲೂ ಗಾಂಧಿ ವಿಚಾರ ಯಶಸ್ಸಾಗುತ್ತಿದೆ ಎನ್ನುವುದಕ್ಕೆ ಅಣ್ಣಾ ಹಜಾರೆ, ನರ್ಮದಾ ಬಚಾವೋ ಆಂದೋಲನ ಸಾಕ್ಷಿ. ದಿಲ್ಲಿಯಲ್ಲಿ ಶಿಕ್ಷಣ ಸಚಿವರು ಸರಕಾರಿ ಶಾಲೆಗಳಲ್ಲಿ ನೈತಿಕ ಶಿಕ್ಷಣವನ್ನು ಜಾರಿಗೊಳಿಸುವ ಮೂಲಕ ಯಶಸ್ಸು ಕಾಣುತ್ತಿದ್ದಾರೆ. ಈಗ ಗಾಂಧಿ ಇರುತ್ತಿದ್ದರೆ ಇಂಟರ್‌ನೆಟ್ ತಂತ್ರಜ್ಞಾನವನ್ನೂ ಒಪ್ಪಿಕೊಳ್ಳುತ್ತಿದ್ದರು ಎಂದು ಶ್ರೀರಾಜ್ ಗುಡಿ ಹೇಳಿದರು.