ಬೆಳಗಾವಿ: ಪ್ರವಾಹ ಪೀಡಿತರ ನೆರವಿಗೆ ಮುಂದೆ ನಿಂತು ಕೆಲಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು. ಭಾರೀ ಮಳೆಯಿಂದ ತತ್ತರಿಸಿರುವ ಬೆಳಗಾವಿ ಜಿಲ್ಲೆಗೆ ಶನಿವಾರ ಭೇಟಿ ನೀಡಿದ ಅವರು, ಸಂಕೇಶ್ವರದ ಶಂಕರಲಿಂಗ ಮಂಗಲ ಕಾರ್ಯಾಲಯದಲ್ಲಿ ಆರಂಭಿಸಲಾಗಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರ ಅಹವಾಲು ಆಲಿಸಿ ಮಾತನಾಡಿದರು.
ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸಿಕೊಡಲು ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗುವುದು. ಸಂತ್ರಸ್ತರು ಧೈರ್ಯದಿಂದ ಇರಬೇಕು. ಏನಾದರೂ ಸಮಸ್ಯೆಗಳು ಇದ್ದರೆ ವೈಯಕ್ತಿಕವಾಗಿ ಸಾಧ್ಯವಾದಷ್ಟು ಪರಿಹರಿಸಲು ಸಿದ್ಧ. ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಅಭಯ ನೀಡಿದರು.
ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರದ ಮೂಲಕ ಮನೆ ಹಾಗೂ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು. ಈ ಕುರಿತು ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹೇರಲಾಗುವುದು. ಅ ಧಿಕಾರಿಗಳು ಯುದ್ಧೋಪಾದಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು. ಹಾನಿ ಕುರಿತು ಸಮಗ್ರ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಇನ್ನೂ ಒಂದು ತಿಂಗಳು ಬೇಕಾಗಬಹುದು ಎಂದರು.
ಈ ಮಧ್ಯೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ನೇರವಾಗಿ ಬೆಳಗಾವಿಗೆ ಬರುತ್ತಿದ್ದಾಗ ಮಾರ್ಗ ಮಧ್ಯೆ ಬಸವನ ಕುಡಚಿಯ ಬಳ್ಳಾರಿ ನಾಲಾ ಪ್ರದೇಶ ವೀಕ್ಷಿಸಿದರು. ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಅಭಿಯಂತೆ ಲಕ್ಷ್ಮೀ ನಿಪ್ಪಾಣಿಕರ ಅವರಿಂದ ಕುಮಾರಸ್ವಾಮಿ ಅವರು ಮಾಹಿತಿ ಪಡೆದುಕೊಂಡರು.
ಹತ್ತು ಸಾವಿರ ಬೆಡ್‌ಶೀಟ್: ಉತ್ತರ ಕರ್ನಾಟಕದಲ್ಲಿ ಪ್ರವಾಹ ಪೀಡಿತರಿಗಾಗಿ ಆಹಾರ ಧಾನ್ಯ ಅವಶ್ಯಕತೆ ಇದ್ದರೆ ಸಹಾಯ ಮಾಡುತ್ತೇನೆ. ಹತ್ತು ಸಾವಿರ ಬೆಡ್‌ಶೀಟ್‌ಗಳನ್ನು ಮಧುರೈಯಿಂದ ತರಿಸಿ ಕೊಡುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿ, ನೆರೆಯ ವಿಷಯದಲ್ಲಿ ರಾಜಕೀಯ ಬೆರೆಸುವುದಿಲ್ಲ.
ಇವತ್ತು ಇರುವ ರಾಜಕೀಯ ಪರಿಸ್ಥಿತಿಯಲ್ಲಿ ಅ ಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ತಾರತಮ್ಯ ಮಾಡದೇ ಇಂತಹ ಸಂದರ್ಭದಲ್ಲಿ ಹೆಚ್ಚಿನ ಪರಿಹಾರ ಕೊಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಹೊಣೆ ಇದೆ. ಅಧಿಕಾರಿಗಳ ಮೂಲಕ ಕೆಲಸ ಮಾಡಿಸಿಕೊಳ್ಳಬೇಕು ಎಂದರು.