Advertisement

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

12:38 AM Jun 17, 2024 | Team Udayavani |

ಶನಿವಾರವಷ್ಟೇ ರಾಜ್ಯ ಕಾಂಗ್ರೆಸ್‌ ಸರಕಾರವು ಪೆಟ್ರೋಲ್‌, ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಏರಿಸಿತ್ತು. ಇದರಿಂದ ಎರಡೂ ಇಂಧನಗಳ ದರ ಪ್ರತೀಲೀಟರ್‌ಗೆ ತಲಾ 3 ರೂ. ಏರಿದೆ. ಈ ಏರಿಕೆಯನ್ನು ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸರಕಾರ ಸಮರ್ಥಿಸಿಕೊಂಡಿದೆ. ಇದರ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ದರ ಇಳಿಕೆ ಮಾಡುವ ವರೆಗೂ ಹೋರಾಟ ನಡೆಸುವುದಾಗಿ ಬಲವಾದ ಎಚ್ಚರಿಕೆ ನೀಡಿದೆ. ಇದರಿಂದ ರಾಜ್ಯದಲ್ಲಿ ರಾಜಕೀಯ ಬೆಂಕಿಯೇ ಎದ್ದಂತಾಗಿದೆ.

Advertisement

ದರ ಇಳಿಸುವವರೆಗೂ ಹೋರಾಟ: ಬಿಜೆಪಿ ಎಚ್ಚರಿಕೆ
ಇಂದು ರಾಜ್ಯಾದ್ಯಂತ ಪ್ರತಿಭಟನೆ; ಸಿಎಂ ಮನೆಗೆ ಮುತ್ತಿಗೆ?
ಬೆಂಗಳೂರು: ತೈಲ ದರ ಏರಿಕೆಯು ರಾಜ್ಯದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಮೊದಲೇ ಬೆಲೆ ಏರಿಕೆ ಯಿಂದ ಕಂಗೆಟ್ಟಿರುವ ಜನತೆಗೆ ಮತ್ತೆ ಬಿಸಿ ತಟ್ಟಿದೆ ಎಂದು ಆರೋಪಿಸಿರುವ ಬಿಜೆಪಿ, ರಾಜ್ಯ ಕಾಂಗ್ರೆಸ್‌ ಸರಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದಿದೆ. ದರಇಳಿಕೆ ಆಗುವ ವರೆಗೂ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ರವಾನೆ ಮಾಡಲಾಗಿದೆ. ಇದರ ಭಾಗವಾಗಿ ಸೋಮವಾರ ಉಗ್ರ ಹೋರಾಟಕ್ಕೆ ಮುಂದಾಗಿದೆ.

ಪೆಟ್ರೋಲ್‌, ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಹೆಚ್ಚಳ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿರುವ ಬಿಜೆಪಿಯು ಸೋಮವಾರ ಬೆಳಗ್ಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾವನವನದಲ್ಲಿ ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸಲಿದೆ.

ತೆರಿಗೆ ಏರಿಕೆಗೆ ರಾಜ್ಯ ಸರಕಾರ ತನ್ನದೇ ಆದ ಸಮರ್ಥ ನೆಗಳನ್ನು ಕೊಡುತ್ತಿದ್ದು, ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಕಡಿಮೆ ಇದೆ ಎಂದಿರುವುದಲ್ಲದೆ, ಕೇಂದ್ರ ಸರರ್ಕಾರ ಅಬಕಾರಿ ಸುಂಕ ಇಳಿಸಬೇಕು ಎಂಬುದಾಗಿಯೂ ಆಗ್ರಹಿಸಿದೆ.

ಸರಕಾರದ ಈ ಸಮರ್ಥನೆಗೆ ತಿರುಗೇಟು ಕೊಟ್ಟಿರುವ ಬಿಜೆಪಿ ನಾಯಕರು, ಗ್ಯಾರಂಟಿಗಳಿಂದ ಲೋಕಸಭೆ ಚುನಾವಣೆಯಲ್ಲೂ ಹೆಚ್ಚು ಸ್ಥಾನ ಗಳಿಸಲಿಲ್ಲ. ಬೊಕ್ಕಸವೂ ಬರಿದಾಗಿದೆ. ಚುನಾವಣೆಯಲ್ಲಿ ಸೋತ ಸೇಡನ್ನು ತೆರಿಗೆ ಹೆಚ್ಚಿಸುವ ಮೂಲಕ ತೀರಿಸಿಕೊಳ್ಳಲು ಹೊರಟಿದೆ. ರಾಜ್ಯ ಸರಕಾರದ ಈ ಜನವಿರೋಧಿ ನೀತಿಯನ್ನು ವಿರೋಧಿಸಿ ರಾಜ್ಯಾದ್ಯಂತ ಹೋರಾಟಕ್ಕಿಳಿಯುವುದಾಗಿ ಪ್ರಕಟಿಸಿದ್ದಾರೆ.

Advertisement

ಸಿಎಂ ಮನೆಗೆ ಮುತ್ತಿಗೆ?
ಸೋಮವಾರ ಬೆಳಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್‌ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸೇರಲಿರುವ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಅಷ್ಟೇ ಅಲ್ಲದೆ ಫ್ರೀಡಂ ಪಾರ್ಕ್‌ನಿಂದ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನೂ ಹಾಕಿಕೊಂಡಿದ್ದಾರೆ.

ಪ್ರತಿಭಟನೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್‌, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಾಜಿ ಡಿಸಿಎಂ ಡಾ| ಅಶ್ವತ್ಥನಾಯಣ ಮತ್ತಿತರರು ಭಾಗಿಯಾಗಲಿದ್ದಾರೆ.

ಸೋಲಿನ ಹತಾಶೆಯಲ್ಲಿ ತೈಲ ದರ ಏರಿಕೆ
ಹಾಸನ: ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಹತಾಶೆಯಿಂದ ನಡೆದುಕೊಳ್ಳುತ್ತಿದೆ. ಯಾರೂ ಊಹಿಸದ ರೀತಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಏರಿಕೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದ ಜನತೆ ಬರಗಾಲದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರತೀ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ 3 ರೂ. ಏರಿಕೆ ಮಾಡಿ ಸರಕಾರ ಬರೆ ಎಳೆದಿದ್ದು, ಜನ ಹಿಡಿಶಾಪ ಹಾಕುತ್ತಿದ್ದಾರೆ. ಡೀಸೆಲ್‌-ಪೆಟ್ರೋಲ್‌ ಬೆಲೆ ಹೆಚ್ಚಿದರೆ ಸರಕು ಸಾಗಣೆ ವೆಚ್ಚ, ಜನರ ದಿನ ಬಳಕೆ ಅಗತ್ಯ ವಸ್ತಗಳ ಬೆಲೆ ಹೆಚ್ಚಲಿದೆ. ಪಂಪ್‌ಸೆಟ್‌, ಟ್ರಾÂಕ್ಟರ್‌ ಬಳಸುವ ರೈತರಿಗೂ ಹೊರೆಯಾಗಲಿದೆ ಎಂದು ಹೇಳಿದರು. ರಾಜ್ಯ ಸರಕಾರದ ವಿರುದ್ಧ ಸೋಮವಾರದಿಂದಲೇ ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಹೋರಾಟ ಆರಂಭಿಸಲಿದೆ. ಬಳಿಕ ರಾಜ್ಯ ಮಟ್ಟದ ಹೋರಾಟ ರೂಪಿಸಲಾಗುವುದು ಎಂದರು.

ಕಾಂಗ್ರೆಸ್‌ ಸರಕಾರ ರಾಜಕೀಯ ದ್ವೇಷ ಬಿಟ್ಟು ಇಂಧನ ದರ ಇಳಿಸಲಿ: ಬಿ.ವೈ.ರಾಘವೇಂದ್ರ
ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ತಿರಸ್ಕರಿಸಿದ ಜನತೆಯ ವಿರುದ್ಧ ಸೇಡು ಎಂಬಂತೆ ರಾಜ್ಯ ಸರಕಾರ ಪೆಟ್ರೋಲ್‌-ಡೀಸೆಲ್‌ ದರ ಏರಿಸಿದೆ. ಕಾಂಗ್ರೆಸ್‌ ರಾಜಕೀಯ ದ್ವೇಷ ಬಿಟ್ಟು ನಿರ್ಧಾರ ಮರುಪರಿಶೀಲಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕಡೆಗಣಿಸಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಕಾಂಗ್ರೆಸ್‌ನ ಲಕ್ಷ್ಮಣ್‌ ಸೇರಿದಂತೆ ಅನೇಕರು ಗ್ಯಾರಂಟಿ ಯೋಜನೆ ಬಗ್ಗೆ ಮರುಪರಿಶೀಲನೆ ಸಲಹೆ ನೀಡಿದ್ದಾರೆ. ಇದೇ ವೇಳೆ ಜನರ ಪ್ರಾಣ ಹಿಂಡಲು ಬೆಲೆ ಏರಿಕೆ ಮಾಡಿದ್ದಾರೆ. ಬೆಲೆ ಏರಿಕೆಯಿಂದ ಬಡವರು, ರೈತರು, ಕೃಷಿ, ಪ್ರವಾಸೋದ್ಯಮದ ಮೇಲೆ ಪ್ರಭಾವ ಬೀರುತ್ತದೆ. ಬಸ್‌ ದರ ಹೆಚ್ಚಲಿದೆ ಎಂದರು.ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆಸಿದ್ದಲ್ಲದೆ ಈಗ ಬೆಲೆ ಏರಿಕೆ ಮಾಡಿ ಖಜಾನೆ ತುಂಬಿಕೊಳ್ಳಲು ಹೊರಟಿದ್ದಾರೆ ಎಂದರು.

ಕಟಾಕಟ್‌ ಜೇಬು ಕತ್ತರಿಸುವ ಸರಕಾರ: ರವಿಕುಮಾರ್‌
ಬೆಂಗಳೂರು: ಸಿದ್ದರಾಮಯ್ಯ ಸರಕಾರ ಕಟಾ ಕಟ್‌ ಸರಕಾರ. ರೈತರ, ಯುವಕರ ಕಟಾ ಕಟ್‌ ಜೇಬ್‌ ಕತ್ತರಿಸುವ ಸರಕಾರ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಟೀಕಿಸಿದ್ದಾರೆ. ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ದರ ಹೆಚ್ಚಳ ಮಾಡಿದ್ದು ಯಾಕೆ? ಈ ಸರಕಾರ ದರ ಹೆಚ್ಚಳದಿಂದ ಬರುವ ಹಣವನ್ನು, ಸೋನಿಯಾ, ರಾಹುಲ್‌, ಸುರ್ಜೆವಾಲಾಗೆ ಕಳುಹಿಸುತ್ತಿದೆಯಾ? ತೆಲಗಾಂಣ ಸರಕಾರಕದ ಅಕೌಂಟ್‌ಗೆ ನೀಡುತ್ತಿದೆಯಾ? ಎಂದು ಪ್ರಶ್ನಿಸಿದರು. ಸರಕಾರದ ನೀತಿಯ ವಿರುದ್ಧ ನಾಳೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತೇವೆ. ದರ ಕಡಿಮೆ ಮಾಡುವ ತನಕ ಹೋರಾಟ ನಿಲ್ಲಿಸಲ್ಲ ಎಂದು ಎಚ್ಚರಿಕೆ ನೀಡಿದರು.

ಲೋಕಸಭೆ ಸೋಲಿನ ಸೇಡಿಗೆ
ತೈಲ ದರ ಏರಿಕೆ: ಆರ್‌. ಅಶೋಕ್‌
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸೋತ ಸೇಡನ್ನು ಕಾಂಗ್ರೆಸ್‌ ಸರಕಾರ ತೈಲ ದರ ಏರಿಕೆ ಮಾಡಿ ಕಳ್ಳ ದಾರಿಯ ಮೂಲಕ ತೀರಿಸಿಕೊಳ್ಳುತ್ತಿದ್ದು, ಈ ಮೂಲಕ ಜನರ ತಲೆ ಮೇಲೆ ಚಪ್ಪಡಿ ಕಲ್ಲು ಹಾಕಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್‌ ಆಕ್ರೋಶ ಹೊರಹಾಕಿದರು.

ರವಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್‌ ಸರಕಾರ ಒಂದು ವರ್ಷದಲ್ಲಿ ಎಲ್ಲ ಬಗೆಯ ಬೆಲೆ ಏರಿಕೆಯ ಭಾಗ್ಯಗಳನ್ನು ನೀಡಿದೆ. ಹಾಲಿನ ದರ, ಅಲ್ಕೋಹಾಲ್‌ ದರ, ಸ್ಟಾಂಪ್‌ ಡ್ನೂಟಿ, ಮಾರ್ಗಸೂಚಿ ದರ, ವಿದ್ಯುತ್‌ ದರ ಹಾಗೂ ಈಗ ತೈಲ ಬೆಲೆ ಏರಿಕೆ ಮಾಡಲಾಗಿದೆ. ಹಿಂದಿನ ಬಿಜೆಪಿ ಸರಕಾರದಲ್ಲಿ ಒಂದು ರೂಪಾಯಿ ಬೆಲೆ ಏರಿಕೆಯಾದಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಸ್ಕೂಟರ್‌ ಶವ ಯಾತ್ರೆ ಮಾಡಿದ್ದರು. 15 ಬಾರಿ ಬಜೆಟ್‌ ಮಂಡಿಸಿದ ಸಿದ್ದರಾಮಯ್ಯ ಅವರಿಗೆ ಯೋಗ್ಯತೆ ಇಲ್ಲ. ಜನರ ಮೇಲೆ ಸೇಡು ತೀರಿಸಿಕೊಳ್ಳಲು ದರ ಏರಿಸಿದ್ದಾರೆ ಎಂದರು.

ಗ್ಯಾರಂಟಿಗಾಗಿ 55,000 ಕೋಟಿ ಮೀಸಲಿಟ್ಟಿರುವುದರಿಂದ ಹಣ ಕೊರತೆಯಾಗಿದೆ. ಆದ್ದರಿಂದ ತೈಲ ದರ ಏರಿಸಲಾಗಿದೆ. ಇದರಿಂದ ಸಹಜವಾಗಿ ತರಕಾರಿ, ಹಾಲು, ಹಣ್ಣು, ಕೊನೆಗೆ ಟೀ ಕಾಫಿಗೂ ದರ ಏರಲಿದೆ. ನಾಳೆಯಿಂದಲೇ ಆಟೊರಿಕ್ಷಾದವರು, ಗೂಡ್ಸ್ ಗಾಡಿಗಳು ದರ ಏರಿಕೆ ಮಾಡುತ್ತಾರೆ ಎಂದರು.

ಬೆಲೆ ಏರಿಕೆ ವಿರುದ್ಧ ರಾಜ್ಯದ ಜನರೇ
ದಂಗೆ ಏಳಬೇಕು: ಕುಮಾರಸ್ವಾಮಿ
ಮಂಡ್ಯ: ರಾಜ್ಯ ಸರಕಾರ ಸ್ವೇಚ್ಛಾಚಾರವಾಗಿ ಹಣ ಲೂಟಿ ಮಾಡುತ್ತಿದೆ. ಈಗಾಗಲೇ ಒಂದು ಇಲಾಖೆಯ ಬೋರ್ಡ್‌ ಕಾರ್ಪೋರೇಷನ್‌ನ 87 ಕೋಟಿ ರೂ.ಎಲ್ಲೆಲ್ಲಿ, ಯಾರ್ಯಾರಿಗೆ ಹೋಗಿದೆ ಎಂಬುದು ಗೊತ್ತಿದೆ. ಸರಕಾರ ಜನರ ಹಣ ದರೋಡೆ ಮಾಡಲು ಮುಂದಾಗಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಆದಿಚುಂಚನಗಿರಿ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಲೆ ಏರಿಕೆ ವಿರುದ್ಧ ಬಿಜೆಪಿ-ಜೆಡಿಎಸ್‌ ಪ್ರತಿಭಟನೆ ಮುಖ್ಯವಲ್ಲ. ಜನರೇ ರಾಜ್ಯ ಸರಕಾರದ ವಿರುದ್ಧ ದಂಗೆ ಏಳಲು, ಹೋರಾಟ ಮಾಡಲು ಮುಂದಾಗಬೇಕು. ಅಭಿವೃದ್ಧಿ ಹಣ ಸದ್ಬಳಕೆ ಮಾಡಿಕೊಳ್ಳುವಂತೆ ಒತ್ತಾಯ ಮಾಡಬೇಕಾಗಿದೆ ಎಂದರು.

ಪೆಟ್ರೋಲ್‌, ಡೀಸೆಲ್‌ ಮೇಲೆ ಸೆಸ್‌ ಹೆಚ್ಚಳ ಮಾಡುವ ಮೂಲಕ ಜನರ ಹಣ ದರೋಡೆ ಮಾಡುತ್ತಿದೆ. ಒಂದು ಕಡೆ ಜನರ ಹಣವನ್ನೇ ಪಡೆದು ಐದು ಗ್ಯಾರಂಟಿಗಳಿಗೆ ಕೊಡಲಾಗುತ್ತಿದೆ. ಗಾದೆ ಮಾತಿನಂತೆ ಯಾರಧ್ದೋ ದುಡ್ಡನ್ನು ಇನ್ಯಾರಿಗೋ ಕೊಡಲು ಮುಂದಾಗಿದ್ದಾರೆ. ಅದನ್ನು ಸಚಿವ ಎಂ.ಬಿ. ಪಾಟೀಲ್‌ ಅವರೇ ಒಪ್ಪಿಕೊಂಡಿದ್ದಾರೆ. ಐದು ಕಾರ್ಯಕ್ರಮಗಳಿಗೆ ಹಣ ಸಂಗ್ರಹ ಮಾಡಲಾಗುತ್ತಿದೆ. ಅವರಿಂದಲೇ ಹಣ ಸಂಗ್ರಹಿಸಿ ಅವರಿಗೇ ನೀಡಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.

ದಕ್ಷಿಣ ಭಾರತದ ಇತರ ರಾಜ್ಯಗಳಿಗಿಂತ ಕಡಿಮೆ: ಸಿಎಂ
ಲೋಕಸಭಾ ಫ‌ಲಿತಾಂಶಕ್ಕೂ ದರ ಏರಿಕೆಗೂ ಸಂಬಂಧವಿಲ್ಲ
ಬೆಂಗಳೂರು/ವಿಜಯಪುರ: ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಹೆಚ್ಚಳ ಮಾಡಿರುವ ಮೌಲ್ಯವರ್ಧಿತ ತೆರಿಗೆಯು ದಕ್ಷಿಣ ಭಾರತದ ಇತರ ರಾಜ್ಯಗಳಿಗಿಂತ ಕಡಿಮೆ ಇದೆ ಎಂದು ರಾಜ್ಯ ಸರಕಾರ ಸ್ಪಷ್ಟನೆ ನೀಡಿದೆ. ಈ ಕುರಿತು ಮುಖ್ಯಮಂತ್ರಿಗಳ ಕಚೇರಿ ಪ್ರಕಟನೆ ಹೊರಡಿ ಸಿದ್ದು, ರಾಜ್ಯ ಸರಕಾರವು ಪೆಟ್ರೋಲ್‌ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ. 29.84 ಹಾಗೂ ಡೀಸೆಲ್‌ ಮೇಲಿನ ತೆರಿಗೆಯನ್ನು ಶೇ. 18.44ಕ್ಕೆ ಹೆಚ್ಚಳ ಮಾಡಿದೆ.

ಈ ಏರಿಕೆಯ ಅನಂತರವೂ ಕರ್ನಾಟಕವು ತೈಲೋತ್ಪನ್ನಗಳ ಮೇಲೆ ವಿಧಿಸುತ್ತಿರುವ ತೆರಿಗೆಯು ದಕ್ಷಿಣ ಭಾರತದ ರಾಜ್ಯಗಳಿಗಿಂತ ಹಾಗೂ ನಮ್ಮ ರಾಜ್ಯದ ಆರ್ಥಿಕತೆಯ ಗಾತ್ರಕ್ಕೆ ಹೋಲುವ ಮಹಾರಾಷ್ಟ್ರ ರಾಜ್ಯಕ್ಕಿಂತಲೂ ಕಡಿಮೆಯಿದೆ ಎಂದಿದೆ.

ವಿಜಯಪುರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪೆಟ್ರೋಲ್‌-ಡೀಸೆಲ್‌ ದರ ಏರಿಕೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಸೇಡಿನ ಕ್ರಮವಲ್ಲ. ಈ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಅ ಧಿಕಾರದಲ್ಲಿದ್ದಾಗಲೂ ತೈಲ ದರ ಏರಿಕೆ ಮಾಡಲಾಗಿತ್ತು ಎನ್ನುವ ಮೂಲಕ ಮೂಲಕ ತೆರಿಗೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಪೆಟ್ರೋಲ್‌ ಮೇಲೆ ಮೌಲ್ಯವರ್ಧಿತ ತೆರಿಗೆ ಶೇ. 25ರ ಜತೆಗೆ ಹೆಚ್ಚುವರಿ ತೆರಿಗೆ 5.12 ರೂ. ಇದೆ. ಡೀಸೆಲ್‌ ಮೇಲೆ ಶೇ. 21ರಷ್ಟು ಇದೆ. ಮೌಲ್ಯವರ್ಧಿತ ತೆರಿಗೆ ಹೆಚ್ಚಳದ ಹೊರತಾಗಿಯೂ ರಾಜ್ಯದಲ್ಲಿ ಡೀಸೆಲ್‌ ದರ ಗುಜರಾತ್‌ ಹಾಗೂ ಮಧ್ಯಪ್ರದೇಶಗಳಿಗಿಂತ ಕಡಿಮೆಯಿದೆ. ಪೆಟ್ರೋಲಿಯಂ ಉತ್ಪನ್ನಗಳ ದರವು ಜನರಿಗೆ ಹೊರೆಯಾಗದ ರೀತಿಯಲ್ಲಿ ಲಭ್ಯವಾಗಿಸಲು ನಾವು ಬದ್ಧರಿದ್ದೇವೆ ಎಂದು ಸರಕಾರ ಹೇಳಿದೆ.

ಇತರ ರಾಜ್ಯಕ್ಕೆ ನಮ್ಮ ಸಂಪನ್ಮೂಲದ ಹಂಚಿಕೆ!
ಬಿಜೆಪಿಯ ಡಬಲ್‌ ಎಂಜಿನ್‌ ಸರಕಾರದ ಅವಧಿಯಲ್ಲಿ ರಾಜ್ಯದ ಸಂಪನ್ಮೂಲಗಳನ್ನು ಇತರ ರಾಜ್ಯಗಳಿಗೆ ಹಂಚಿಕೆ ಮಾಡುವ ದುರುದ್ದೇಶದಿಂದ ಕೇಂದ್ರ ಸರಕಾರವು ರಾಜ್ಯದ ಬಿಜೆಪಿ ಸರಕಾರವನ್ನು ಬಳಸಿಕೊಂಡು ಕರ್ನಾಟಕದಲ್ಲಿ ಮೌಲ್ಯವರ್ಧಿತ ತೆರಿಗೆ ದರವನ್ನು ಕಡಿತಗೊಳಿಸುವಂತೆ ಮಾಡಿ, ತನ್ನ ಪಾಲಿನ ತೆರಿಗೆ ಹೆಚ್ಚಳ ಮಾಡುವ ಮೂಲಕ ಲಕ್ಷಾಂತರ ಕೋಟಿ ರೂ. ಸಂಗ್ರಹಿಸಿತ್ತು. ಈ ಅನರ್ಥ ನೀತಿಯಿಂದಾಗಿ ರಾಜ್ಯದ ರಾಜಸ್ವ ಸಂಗ್ರಹಕ್ಕೆ ದೊಡ್ಡ ಹೊಡೆತ ಬಿದ್ದಿತ್ತು, ಜತೆಗೆ ಕೇಂದ್ರವು ಕನ್ನಡಿಗರಿಗೆ ದ್ರೋಹ ಬಗೆದು ಭರಪೂರ ತೆರಿಗೆ ಸಂಗ್ರಹಿಸಿತ್ತು ಸಿಎಂ ಕಚೇರಿ ಹೇಳಿದೆ.

ಕೇಂದ್ರ ಸರಕಾರ ಅಬಕಾರಿ ಸುಂಕ ಇಳಿಸಲಿ
ಕೇಂದ್ರ ಸರಕಾರವು ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು 9.21 ರೂ.ಗಳಿಂದ 32.98 ರೂ.ಗೆ ಹಾಗೂ ಡೀಸೆಲ್‌ ಮೇಲೆ 3.45 ರೂ.ಗಳಿಂದ 31.84 ರೂ.ಗೆ ಹೆಚ್ಚಳ ಮಾಡಿತ್ತು. ಇದು ನಿಜವಾಗಿಯೂ ಜನರ ಮೇಲಿನ ಹೊರೆ. ಆಗಾಗ್ಗೆ ಕೇಂದ್ರ ಸರಕಾರವು ತೆರಿಗೆ ಕಡಿತಗೊಳಿಸಿದ ಹೊರತಾಗಿಯೂ ಈಗಿನ ಅಬಕಾರಿ ಸುಂಕವು ಪೆಟ್ರೋಲ್‌ ಮೇಲೆ 19.9 ರೂ. ಹಾಗೂ ಡೀಸೆಲ್‌ ಮೇಲೆ 15.8 ರೂ. ಇದೆ. ಮೋದಿ ಅವರ ಸರಕಾರ ಜನಹಿತದ ದೃಷ್ಟಿಯಿಂದ ಈ ತೆರಿಗೆಯನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸುತ್ತೇನೆ ಎಂದು ಸಿಎಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರಕಾರದ ಮೌಲ್ಯವರ್ಧಿತ ತೆರಿಗೆಯಲ್ಲಿ ಆದ ಬದಲಾವಣೆ ಯಿಂದ ಸಂಗ್ರಹವಾಗುವ ಹಣವು ನಾಡಿನ ಜನರ ಮೂಲಭೂತ ಸೇವೆಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಬಳಸಲ್ಪಡುತ್ತದೆ ಎಂಬ ಗ್ಯಾರಂಟಿ ನನ್ನದು.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಘೋಷಿತ ಯೋಜನೆಗಳಿಗೆ ಹಣಕ್ಕಾಗಿ ಸಂಪನ್ಮೂಲ ಕ್ರೋಡೀಕರಣ ಮಾಡಬೇಕಿದೆ. ಹೀಗಾಗಿ ತೈಲದ ಮೇಲಿನ ತೆರಿಗೆ ಹೆಚ್ಚಿಸಲಾಗಿದೆ. ಮೋದಿ ಸರಕಾರ ಬೆಲೆ ಹೆಚ್ಚಳ ಮಾಡಿದಾಗ ಯಾರೂ ಬಾಯಿ ಬಿಟ್ಟಿಲ್ಲ. ಈ ಕುರಿತು ಚರ್ಚೆ ಆಗಬೇಕಿದೆ.
-ಬಿ.ಆರ್‌. ಪಾಟೀಲ್‌, ಸಿಎಂ ಸಲಹೆಗಾರ

Advertisement

Udayavani is now on Telegram. Click here to join our channel and stay updated with the latest news.

Next