ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿ ಸುವ ಬಗ್ಗೆ ಉತ್ಸುಕಳಾಗಿದ್ದೇನೆಂದು ಸ್ಪಷ್ಟಪಡಿಸಿರುವ ಸುಮಲತಾ ಅಂಬರೀಶ್, ಕಾಂಗ್ರೆಸ್‌ನಿಂದ ಟಿಕೆಟ್ ದೊರೆಯದಿದ್ದರೆ ಅಭಿಮಾನಿಗಳ ನಿರ್ಧಾರಕ್ಕೆ ಬದಟಛಿಳಾ ಗಿರುತ್ತೇನೆ ಎಂದಿದ್ದಾರೆ. ಆ ಮೂಲಕ ಮಂಡ್ಯದಿಂದ ತಮ್ಮ ಸ್ಪರ್ಧೆ ಖಚಿತ ಎಂಬ ಸುಳಿವು ನೀಡಿದ್ದಾರೆ.
ಗುರುವಾರ ಮಂಡ್ಯ ಜಿಲ್ಲಾ ಪ್ರವಾಸ ಆರಂಭಿಸಿದ ಅವರು, ಸುದ್ದಿಗಾರರ ಜತೆ ಮಾತನಾಡಿದರು. ಜಿಲ್ಲೆಗೆ ಆಗಮಿಸಿದ ಸುಮಲತಾ ಹಾಗೂ ಅಭಿಷೇಕ್‌ಗೆ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದರು. ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಒಕ್ಕೊರಲ ಮನವಿ ಮಾಡಿದರು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಅಂಬರೀಶ್ ಪುತ್ರ ಅಭಿಷೇಕ್‌ಗೌಡ ಹಾಗೂ ಇತರರು ಅವರಿಗೆ ಸಾಥ್ ನೀಡಿದರು.
ರಾಜಕೀಯಕ್ಕೆ ಬರುವ ಉದ್ದೇಶದಿಂದಲೆ ಇಷ್ಟು ದೂರ ಬಂದಿದ್ದೇನೆ. ಮುಂದೆ ಜನಾಭಿಪ್ರಾಯ ಸಂಗ್ರಹಿಸಿ ಸಕ್ರಿಯವಾಗಿ ರಾಜಕೀಯದಲ್ಲಿ ಮುಂದುವರಿಯುತ್ತೇನೆ. ನಾನು ಮಂಡ್ಯ ಜಿಲ್ಲೆಯಿಂದಲೇ ರಾಜ ಕೀಯ ಆರಂಭಿಸಬೇಕು ಎಂಬುದು ಅಂಬರೀಶ್ ಅವರ ಆಶಯವಾಗಿತ್ತು. ಹೀಗಾಗಿ, ಕಾಂಗ್ರೆಸ್‌ನಿಂದ ಟಿಕೆಟ್ ನೀಡುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಎರಡೂ ಪಕ್ಷಗಳ ವರಿಷ್ಠರ ಜತೆ ಚರ್ಚಿಸಿ ತೀರ್ಮಾನಕ್ಕೆ ಬರುವುದಾಗಿ ತಿಳಿಸಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಜತೆ ಮಾತುಕತೆ ನಡೆಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಜೆಡಿಎಸ್‌ನಿಂದ ಸ್ಪರ್ಧಿಸಲು ತಮಗೆ ಯಾವುದೇ ಆಹ್ವಾನ ಬಂದಿಲ್ಲ ಎಂದರು.
ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ, ಅಭಿಮಾನಿಗಳ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ಬೆಂಗಳೂರಿನಿಂದ ಮಂಡ್ಯಕ್ಕೆ ಬರುವಾಗಲೇ ರಾಮನಗರದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಯಾಗಿ ಮಾತುಕತೆ ನಡೆಸಿದ ಸುಮಲತಾ,ರಾಜಕೀಯ ಬೆಂಬಲ ನೀಡುವಂತೆ ಮನವಿ ಮಾಡಿದರು. ನಂತರ ಹುತಾತ್ಮಯೋಧ ಎಚ್ ಗುರುವಿನ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಗುರು ಕುಟುಂಬಕ್ಕೆ ಅರ್ಧ ಎಕರೆ ಜಮೀನು: ಹುತಾತ್ಮ ಯೋಧ ಎಚ್.ಗುರು ಮನೆಗೆ ಆಗಮಿಸಿದ ಸುಮಲತಾ, ಕುಟುಂಬದವರಿಗೆ ಸಾಂತ್ವನ ಹೇಳಿದರು.ತಂದೆ, ತಾಯಿ, ಪತ್ನಿಯ ರೋದನ ಕಂಡು ಭಾವುಕರಾಗಿ ಕಣ್ಣೀರಿಟ್ಟರು. ಯೋಧನ ಪತ್ನಿ ಕಲಾವತಿ ಕಾಲಿಗೆ ಬಿದ್ದು ನಮಸ್ಕರಿ ಸಿದಾಗಲಂತೂ ಇನ್ನಷ್ಟು ಭಾವುಕತೆಯಿಂದ ಅವರನ್ನು ಹಿಡಿದು ಮೇಲೆತ್ತಿ ಅಪ್ಪಿಕೊಂಡು ಅತ್ತರು. ನಿಮ್ಮ ಕುಟುಂಬಕ್ಕೆ ಅರ್ಧ ಎಕರೆ ಜಮೀನು ನೀಡುವ ಬಗ್ಗೆ ನನ್ನ ಮಗ ಅಭಿಷೇಕ್ ಜತೆ ಮಾತನಾಡಿದ್ದೇನೆ. ಅವನೇ ಬಂದು ನಿಯಮಾನುಸಾರ ಜಮೀನನ್ನು ಕುಟುಂಬಕ್ಕೆ ವರ್ಗಾಯಿಸಿ ಕೊಡಲಿದ್ದಾನೆಂದು ಭರವಸೆ ನೀಡಿದರು.
ರಾಜಕೀಯಕ್ಕೆ ಬರಬೇಕೆಂದು ನಾನು ಮಂಡ್ಯಕ್ಕೆ ಬಂದಿಲ್ಲ. ಮಂಡ್ಯಕ್ಕೆ ಬರಬೇಕೆಂದೇ ರಾಜಕೀಯಕ್ಕೆ ಬರಲು ನಿರ್ಧಾರ ಮಾಡಿದ್ದೇನೆ. ನನಗೆ ಬೇರೆ ಕಡೆ ಸ್ಪರ್ಧಿಸಲು ಸಾಕಷ್ಟು ಆಫರ್ ಇದೆ. ಆದರೆ, ನಾನು ರಾಜಕೀಯ ಪ್ರವೇಶಿಸುವುದಾದರೆ ಅದು ಮಂಡ್ಯದಿಂದಲೇ.
● ಸುಮಲತಾ
ಸುಮಲತಾ ಅವರಿಗೆ ಪಕ್ಷದಿಂದ ಟಿಕೆಟ್ ಕೊಡುವ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಯಾರನ್ನು, ಯಾವ ಕ್ಷೇತ್ರದಿಂದ ನಿಲ್ಲಿಸಬೇಕೆಂಬ ಕುರಿತು ಜೆಡಿಎಸ್ ಹಾಗೂ ಕಾಂಗ್ರೆಸ್‌ನಿಂದ ಸೀಟು ಹಂಚಿಕೆ ವಿಷಯವಾಗಿ ಚರ್ಚೆಯಾಗಿಲ್ಲ.
● ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ.