Advertisement

ಮಂಗಳೂರು ‘ಮರ್ಮಯ’ನ ರಾಜಕೀಯ ಸವಾಲ್‌

01:30 PM Apr 08, 2018 | |

ಮಾಜಿ ಮುಖ್ಯಮಂತ್ರಿ ದಿ| ಸಾರೆಕೊಪ್ಪ ಬಂಗಾರಪ್ಪ ಕುಟುಂಬಕ್ಕೂ ಮಂಗಳೂರಿಗೂ ವಿಶೇಷ ನಂಟು. ಅವರು ಮಂಗಳೂರಿಗೆ ಆಗಾಗ ಭೇಟಿ ನೀಡುತ್ತಿದ್ದವರು. 80ರ ದಶಕದಲ್ಲಿ ಕ್ರಾಂತಿರಂಗ ಸ್ಥಾಪಿಸಿದಾಗ ಈ ಪ್ರದೇಶದಿಂದ ಅಪಾರ ನಿರೀಕ್ಷೆ ಇರಿಸಿಕೊಂಡಿದ್ದರು. ಅವರಿಗೆ ಇಲ್ಲಿ ಸಾಕಷ್ಟು ಅಭಿಮಾನಿಗಳಿದ್ದರು. 

Advertisement

ಮಂಗಳೂರಿನ ಪ್ರಸಿದ್ಧ ಕೃಷಿಕ- ಹೊಟೇಲ್‌ ಉದ್ಯಮಿ ದಿ| ಜೆ. ರಾಮಪ್ಪ ಅವರು ಬಂಗಾರಪ್ಪರ ನಿಕಟವರ್ತಿಯಾಗಿದ್ದವರು. 2004ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭ ಮಂಗಳೂರು ಸಹಿತ ಕರಾವಳಿ ಜಿಲ್ಲೆಗಳಲ್ಲಿ ‘ಬಂಗಾರಪ್ಪ ಕುಟುಂಬದ ಎಫೆಕ್ಟ್’ ಹೇಗಿರಬಹು ದೆಂದು ಸಾಕಷ್ಟು ಕುತೂಹಲ ಉಂಟಾಗಿತ್ತು. ಇದಕ್ಕೆ ಇನ್ನೊಂದು ಪ್ರಬಲವಾಗಿದ್ದ ಕಾರಣವೆಂದರೆ: ಬಂಗಾರಪ್ಪರ ಪುತ್ರ ಕುಮಾರ ಬಂಗಾರಪ್ಪ ಅವರು ಮಂಗಳೂರಿನ ಅಳಿಯ! ಅಂದರೆ ವಿವಾಹವಾದದ್ದು ಮಂಗಳೂರಿನ ವಧುವನ್ನು. ಹೀಗಾಗಿ ಆಗಾಗ ನಗರಕ್ಕೆ ಬರುತ್ತಿರುತ್ತಾರೆ.

1983ರ ಹಿನ್ನೆಲೆ
ಬಂಗಾರಪ್ಪ ಅಂದಾಕ್ಷಣ 1983ರ ವಿಧಾನಸಭಾ ಚುನಾವಣೆ ಪ್ರಸ್ತುತವಾಗುತ್ತದೆ. ಬಂಗಾರಪ್ಪ ಜಾತಿ ನೆಲೆಯಲ್ಲಿ ಕೂಡ ಪ್ರಬಲರಾಗಿದ್ದ ಸಂದರ್ಭವದು. ದ.ಕ., ಉಡುಪಿ ಜಿಲ್ಲೆಗಳಲ್ಲಿ ಬಿಲ್ಲವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಂಗಾರಪ್ಪ ಅವರು ಈಡಿಗ ಸಮುದಾಯದವರು. ಉತ್ತರ ಕನ್ನಡದಲ್ಲೂ ಅವರ ಸಂಖ್ಯೆ ಸಾಕಷ್ಟಿದೆ. ವೈಯಕ್ತಿಕ ವರ್ಚಸ್ಸು, ಸಮಾಜವಾದಿ ಸಿದ್ಧಾಂತ, ಬೆಂಬಲಿಗರಿಗೆ ಸದಾ ಬೆಂಬಲ… ಹೀಗೆ ಅವರ ವರ್ಚಸ್ಸಿತ್ತು. 

ಆಗ ಅವರು ಕಾಂಗ್ರೆಸ್‌ ವಿರುದ್ಧ ಬಂಡಾಯ ಸಾರಿ ಕ್ರಾಂತಿರಂಗ ರಚಿಸಿದ್ದರು. ಈ ಮೂಲಕ ಕಾಂಗ್ರೆಸ್‌ನ ಸಾಂಪ್ರದಾಯಕ ಮತಗಳನ್ನು ಒಡೆದರು. ಅವಿಭಜಿತ ಜಿಲ್ಲೆಯಲ್ಲಿ ನಿರೀಕ್ಷಿತ ಸ್ಥಾನಗಳನ್ನು ಅವರ ಪಕ್ಷ ಗೆಲ್ಲಲಿಲ್ಲವಾದರೂ ಒಟ್ಟು 15 ಸ್ಥಾನಗಳಲ್ಲಿ ಕನಿಷ್ಠ 6ರಲ್ಲಿ ಕಾಂಗ್ರೆಸ್‌ನ ಪರಾಜಯಕ್ಕೆ ಕಾರಣರಾದರು. ಇದು ಬಿಜೆಪಿಗೆ ಅನುಕೂಲಕರವಾಯಿತು.

ಮುಂದೆ ಬಂಗಾರಪ್ಪ ಕಾಂಗ್ರೆಸ್‌ಗೆ ಮರಳಿದಾಗ ಈ ಪೈಕಿ ಬಹುತೇಕ ಸ್ಥಾನಗಳು ಕಾಂಗ್ರೆಸ್‌ಗೆ ಮರಳಿದವು. 2004ರಲ್ಲಿ ಪರಿಸ್ಥಿತಿ ಮತ್ತಷ್ಟು ಬದಲಾಯಿತು. ಬಂಗಾರಪ್ಪ ಪಕ್ಷ ಬದಲಿಸಿದರು. ತಂದೆಯ ಹಾದಿಯಲ್ಲೇ ಮಗ ಸಾಗಿದರೂ ಭಿನ್ನಾಭಿಪ್ರಾಯ ಸ್ಫೋಟಿಸಿತು. ತಂದೆಗೇ ಸವಾಲು ಒಡ್ಡಿದರು. ಈಗ ಬಂಗಾರಪ್ಪ ಅವರಿಲ್ಲ. ಕುಮಾರ್‌ ಬಂಗಾರಪ್ಪ ಬಿಜೆಪಿಯಲ್ಲಿದ್ದಾರೆ. ಸಹೋದರ ಮಧು ಬಂಗಾರಪ್ಪ ಜೆಡಿಎಸ್‌ನಲ್ಲಿದ್ದಾರೆ. ಆಗ ಪ್ರತಿಷ್ಠೆಗೆ ತಂದೆ-ಮಗನ ಸವಾಲ್‌ ಆದರೆ ಈಗ ಅಣ್ಣ- ತಮ್ಮನ ಸವಾಲ್‌!

Advertisement

ಅಂದ ಹಾಗೆ
ಕುಮಾರ್‌ ಬಂಗಾರಪ್ಪ ಸಣ್ಣ ನೀರಾವರಿ ಖಾತೆಯ ಸಚಿವರಾಗಿ ಸೇವೆ ಸಲ್ಲಿಸಿದವರು. ಅವರು ಈ ಖಾತೆಯನ್ನು ವಹಿಸಿಕೊಳ್ಳುವ ಮೊದಲು ‘ಕಡಲ್ಕೊರೆತ ಸಮಸ್ಯೆ’ಯೂ ಈ ಇಲಾಖೆಯ ವ್ಯಾಪ್ತಿಯಲ್ಲಿತ್ತು. ದ.ಕ., ಉಡುಪಿ ಜಿಲ್ಲೆಗಳಲ್ಲಿ ಇಂದಿಗೂ ಈ ಸಮಸ್ಯೆ ಕಾಡುತ್ತಲಿದೆ. ರಾಜ್ಯದ ಕೆರೆಗಳ ಹೂಳೆತ್ತುವ ಬಗ್ಗೆ ವ್ಯಾಪಕ ನೆಲೆಯ ಯೋಜನೆ ಅವರು ರೂಪಿಸಿದ್ದರು. ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ 6-10-2003ರಂದು ಸಮ್ಮಾನ ಸಮಾರಂಭದಲ್ಲಿ ಅವರು ಹಾಡಿದ ಚಿತ್ರಗೀತೆ: ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನಲೀ…!

 ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next